ಭ್ರಷ್ಟಾಚಾರ ತೊಲಗಿಸಲು ಪ್ರಾಮಾಣಿಕ ಯತ್ನ ನಡೆಯುತ್ತಿಲ್ಲ: ಡಾ.ಬೈರಮಂಗಲ ರಾಮೇಗೌಡ

KannadaprabhaNewsNetwork |  
Published : Oct 27, 2025, 12:00 AM IST
26ಕೆಆರ್ ಎಂಎನ್ 1.ಜೆಪಿಜಿರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ನಮ್ಮೂರ ಸಾಹಿತಿಗಳು, ನಮ್ಮ ಸಾಧಕರು ಮಾಲಿಕೆಯ ಸಮಾರಂಭದಲ್ಲಿ ಸಾಹಿತಿ ಬೈರಮಂಗಲ ರಾಮೇಗೌಡ ಅವರನ್ನು  ಅಭಿನಂದಿಸಲಾಯಿತು. | Kannada Prabha

ಸಾರಾಂಶ

ರಾಜ್ಯದ ಗಂಭೀರ ಸಮಸ್ಯೆಗಳನ್ನು ನಿವಾರಣೆ ಮಾಡುವತ್ತ ಯಾವ ಸರ್ಕಾರಗಳು ಗಮನ ಹರಿಸುತ್ತಿಲ್ಲ. ರಾಜಕೀಯ ಭ್ರಷ್ಟಾಚಾರ, ಸಾಂಸ್ಕೃತಿಕ ಭ್ರಷ್ಟಾಚಾರ, ಧಾರ್ಮಿಕ ಭ್ರಷ್ಟಾಚಾರ, ಸಾಹಿತ್ಯಿಕ ಭ್ರಷ್ಟಾಚಾರ ತೊಲಗಿಸುವತ್ತ ಪ್ರಾಮಾಣಿಕ ಪ್ರಯತ್ನಗಳನ್ನು ಯಾವ ಪಕ್ಷದ ಸರ್ಕಾರ ತಂದರೂ ಅಸಾಧ್ಯವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ರಾಜ್ಯದ ಗಂಭೀರ ಸಮಸ್ಯೆಗಳನ್ನು ನಿವಾರಣೆ ಮಾಡುವತ್ತ ಯಾವ ಸರ್ಕಾರಗಳು ಗಮನ ಹರಿಸುತ್ತಿಲ್ಲ. ರಾಜಕೀಯ ಭ್ರಷ್ಟಾಚಾರ, ಸಾಂಸ್ಕೃತಿಕ ಭ್ರಷ್ಟಾಚಾರ, ಧಾರ್ಮಿಕ ಭ್ರಷ್ಟಾಚಾರ, ಸಾಹಿತ್ಯಿಕ ಭ್ರಷ್ಟಾಚಾರ ತೊಲಗಿಸುವತ್ತ ಪ್ರಾಮಾಣಿಕ ಪ್ರಯತ್ನಗಳನ್ನು ಯಾವ ಪಕ್ಷದ ಸರ್ಕಾರ ತಂದರೂ ಅಸಾಧ್ಯವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ‘ನಮ್ಮೂರ ಸಾಹಿತಿಗಳು, ನಮ್ಮ ಸಾಧಕರು ಮಾಲಿಕೆ’ಯ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಚುನಾವಣಾ ಪೂರ್ವ ಪ್ರಣಾಳಿಕೆಗಳಲ್ಲಿ ಕೊಡುವ ಆಶ್ವಾಸನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದಿಲ್ಲ. ಬಹುಸಂಖ್ಯಾತ ಬಡಜನರ ಗೋಳಿಗೆ ಯಾವ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಒಂದು ಪಕ್ಷದ ಸರ್ಕಾರದ ಭ್ರಷ್ಟಾಚಾರ ಶೇ.40 ರಷ್ಟು ಎಂದು ತಿರಸ್ಕರಿಸಿ ಹೊಸದೊಂದು ಪಕ್ಷದ ಸರ್ಕಾರ ಬಯಸಿ ಜನ ಮತ ಹಾಕಿ, ಗೆಲ್ಲಿಸಿದರೆ ಹೊಸ ಸರ್ಕಾರ ಅದಕ್ಕಿಂತಲೂ ಹೆಚ್ಚು ಭ್ರಷ್ಟಾಚಾರದಲ್ಲಿ ನಿರತವಾಗುತ್ತದೆ. ಕೇಂದ್ರವಾಗಲಿ, ರಾಜ್ಯವಾಗಲಿ ಮೂಲಭೂತ ಸೌಲಭ್ಯಗಳನ್ನು ನಾಗರಿಕರಿಗೆ ಒದಗಿಸುವಲ್ಲಿ ಸಫಲವಾಗಿಲ್ಲ ಎಂದರು.

ಶಾಸಕರಾಗಿ ಆಯ್ಕೆ ಆದವರು ಮಂತ್ರಿಗಳಾಗಲು ಲಾಭಿ ಮಾಡುತ್ತಾರೆ. ಅನಾಯಾಸವಾಗಿ ಹಣ ಹರಿದು ಬರುವ ಖಾತೆಯೇ ಬೇಕು ಎಂದು ಹಠ ಹಿಡಿದು ಸಾಧಿಸುತ್ತಾರೆ. ಸಮಾಜ ಸೇವೆ ಮಾಡುವವರಿಗೆ ಯಾವ ಖಾತೆಯಾದರೇನು. ಶಾಸಕತ್ವ ಸಾಕಲ್ಲವೇ. ಜನ ಸೇವೆಯನ್ನು ಮರೆತು, ಕೋಟ್ಯಾಂತರ ಹಣ ಗಳಿಸುವ ಸ್ವಾರ್ಥ ರಾಜಕಾರಣಿಗಳಿಗೆ ಮತ ನಿರಾಕರಣೆ ಮಾಡಿ, ನಿಜವಾದ ಜನ ಸೇವಕರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಯುವ ಶಕ್ತಿ ಹೊತ್ತು, ಯಶಸ್ವಿಗಳಾಗಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ, ಸನಾತನ ಸಂಸ್ಕೃತಿಗೆ ಪರ್ಯಾಯವಾಗಿ ವೈಚಾರಿಕ ಸಂಸ್ಕೃತಿಯನ್ನು ಬಯಲುಸೀಮೆಯಲ್ಲಿ ಬಿತ್ತಿ ಬೆಳೆಸಿದವರು ಡಾ.ಭೈರಮಂಗಲ ರಾಮೇಗೌಡರು ಎಂದು ಬಣ್ಣಿಸಿದರು.

ಮಾಜಿ ಶಾಸಕ ಕೆ.ರಾಜು, ರಾಜಕೀಯವಾಗಿ ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ. ಗುಣ, ನಡತೆ ಸರಿ ಇಲ್ಲದಿದ್ದರೂ ದುಡ್ಡಿದ್ದವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವ. ಅವರು ಕೆಲಸ ಮಾಡಲಿ, ಮಾಡದಿರಲಿ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲಿ ಇಲ್ಲವೇ ಸ್ಪಂದಿಸದಿರಲಿ ದುಡ್ಡು ಕೊಟ್ಟರೆ ಓಟು ಹಾಕುತ್ತಾರೆ. ಸಜ್ಜನರಿಗೆ, ಸ್ಥಳೀಯ ಸಮಸ್ಯೆಗಳ ಅರಿವುಳ್ಳವರಿಗೆ, ಜನರೊಟ್ಟಿಗೆ ನಿಲ್ಲುವವರಿಗೆ ದುಡ್ಡಿಲ್ಲ ಎಂದರೆ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಅವಕಾಶವನ್ನೇ ನಿರಾಕರಣೆ ಮಾಡುವ ರಾಜಕೀಯ ವ್ಯವಸ್ಥೆ ರೂಪುಗೊಂಡಿದೆ ಎಂದರು.

೨೦೨೫ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಡಾ.ಬೈರಮಂಗಲ ರಾಮೇಗೌಡ ಅವರನ್ನು ಅಭಿನಂದಿಸಿ, ಅವರ ಸಾಹಿತ್ಯಿಕ ಚಿಂತನೆಗಳನ್ನು ಯುವಕರಿಗೆ ಪರಿಚಯಿಸಲಾಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಲಕ್ಷ್ಮಿ, ಜಿ.ಎಚ್.ರಾಮಯ್ಯ, ಕಸಾಪ ತಾಲೂಕು ಅಧ್ಯಕ್ಷ ಬಿ.ಟಿ.ದಿನೇಶ್, ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ, ಬಿ.ಟಿ.ರಾಜೇಂದ್ರ, ಬಿ.ಟಿ.ಚಿಕ್ಕಪುಟ್ಟೇಗೌಡ, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಮೇಶ್ ಬಾಬು, ಎಚ್.ವಿ.ಮೂರ್ತಿ, ಕನ್ನಡ ಉಪನ್ಯಾಸಕ ಅರುಣ್‌ಕುಮಾರ್, ಗಾಯಕ ವಿನಯ್‌ಕುಮಾರ್, ಬೊಮ್ಮಚ್ಚನಹಳ್ಳಿ ಗೋಪಾಲ, ಬಾನಂದೂರು ನಂಜುಂಡಿ, ಉಪನ್ಯಾಸಕರಾದ ಮಹದೇವಸ್ವಾಮಿ, ನರಸಿಂಹಸ್ವಾಮಿ, ಡಾ.ಚಂದನ್ ಮತ್ತಿತರರು ಹಾಜರಿದ್ದರು.

PREV

Recommended Stories

ಬಸ್ಸುಗಳಲ್ಲಿ ಸುರಕ್ಷತೆಗೆ ಸರ್ಕಾರ ತಾಕೀತು - ಕರ್ನೂಲ್‌ ಬಸ್‌ ಬೆಂಕಿ ದುರಂತ ಎಫೆಕ್ಟ್‌
ಉದ್ಯಮಿಗಳ ಜತೆ ಡಿ.ಕೆ. ಶಿವಕುಮಾರ್‌ ಡಿನ್ನರ್‌ : ನಗರಾಭಿವೃದ್ಧಿ ಬಗ್ಗೆ ಚರ್ಚೆ