ರಾಮನಗರ: ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ. ಆದರೆ, ಬೆಂಕಿ ಇಲ್ಲದೆ ಹೊಗೆ ಆಡಲ್ಲ. ಈಗ ಹೊಗೆ ಬಂದಿದೆ ಏನಾಗುತ್ತೋ ನೋಡೋಣ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ್ಮ ಜಿಲ್ಲೆಯವರು, ಅವರಿಗೂ ಒಂದು ಅವಕಾಶ ಸಿಗಬೇಕು ಎನ್ನುವುದು ನಮ್ಮ ಆಸೆ. ಕಾಲ ಎಲ್ಲಾದಕ್ಕೂ ಉತ್ತರ ಕೊಡುತ್ತದೆ ಎಂದರು.ಅಧಿಕಾರ ಹಂಚಿಕೆ ವಿಚಾರ ಬೇರೆ ಬೇರೆ ವೇದಿಕೆಗಳಲ್ಲಿ ಚರ್ಚೆ ಆಗಿ ಗೊಂದಲ ಸೃಷ್ಟಿಸಬಾರದು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಬ್ರೇಕ್ ಫಾಸ್ಟ್ ಸಭೆ ಮೂಲಕ ಗೊಂದಲ ನಿವಾರಣೆ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ಹೋಗಬೇಕು ಎಂಬ ಸಂದೇಶ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಮೇಕೆದಾಟು ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿ ಶ್ರಮ ಹಾಕಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಪರವಾದ ತೀರ್ಪು ಸಿಕ್ಕಿದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಅವರ ಶ್ರಮ ಇದೆ. ರಾಜಕಾರಣದಲ್ಲಿ ಹಗ್ಗಜಗ್ಗಾಟ ಸಹಜ. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗೆಡೆಯವರ ಕಾಲದಲ್ಲೂ ಹಗ್ಗಜಗ್ಗಾಟ ಇತ್ತು. ಅಧಿಕಾರ ಅಂದಮೇಲೆ ಹಗ್ಗಜಗ್ಗಾಟ ಇದ್ದೇ ಇರುತ್ತದೆ ಎಂದು ತಿಳಿಸಿದರು.ನಾಯಕತ್ವದ ವಿಚಾರವಾಗಿ ಗೊಂದಲ ಇರುವುದು ನಿಜ, ಪಕ್ಷದ ವರಿಷ್ಠರು ಆ ಗೊಂದಲ ನಿವಾರಣೆ ಮಾಡುತ್ತಾರೆ. ಈಗಾಗಲೇ ಖರ್ಗೆಯವರು ಸ್ವಲ್ಪಮಟ್ಟದ ಸಮಸ್ಯೆ ಬಗೆಹರಿಸಿದ್ದಾರೆ. ರಾಜ್ಯದ ಬೆಳವಣಿಗೆ ದೃಷ್ಟಿಯಿಂದ ಈ ಸಮಸ್ಯೆ ಬೇಗ ಬಗೆಹರಿಯಬೇಕು. ಕಾಂಗ್ರೆಸ್ ನಲ್ಲಿ ಸೀನಿಯರ್ ಲೀಡರ್ ಗಳು ತುಂಬಾ ಜನ ಇದ್ದಾರೆ. ಎಲ್ಲರೂ ಅಧಿಕಾರ ಕೇಳುವುದು ತಪ್ಪಲ್ಲ, ಅದು ಅವರ ಹಕ್ಕು.
ಆದರೆ, ಪಕ್ಷದ ವರಿಷ್ಠರು ಈ ಬಗ್ಗೆ ಅಂತಿಮವಾದ ತೀರ್ಮಾನ ಮಾಡಬೇಕು ಎಂದು ಸಿಂಧ್ಯಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.------------------------------
4ಕೆಆರ್ ಎಂಎನ್ 8.ಜೆಪಿಜಿಮಾಜಿ ಸಚಿವ ಪಿಜಿಆರ್ ಸಿಂಧ್ಯಾ
-------------------------------