ಕನ್ನಡಪ್ರಭ ವಾರ್ತೆ ಬೀದರ್
ಆಡು ಮುಟ್ಟದ ಸೋಪ್ಪಿಲ್ಲ, ಕಾರಂತರು ಬರೆಯದ ಸಾಹಿತ್ಯವಿಲ್ಲ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪಿ.ವಿಠ್ಠಲ ರಡ್ಡಿ ನುಡಿದರು.ನಗರದ ಹೈಕ ಶಿಕ್ಷಣ ಸಂಸ್ಥೆಯ ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ 122ನೇ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು, ಸಂಯಮ, ತಾಳ್ಮೆ, ಆಚಾರ, ವಿಚಾರ ಹಾಗೂ ಸಂಸ್ಕಾರ ಭರಿತ ಜೀವನ ನಡೆಸಿದಾಗ ಮಾತ್ರ ನಾವು ಕಾರಂತರಂತೆ ಆಗಲು ಸಾಧ್ಯ ಎಂದು ಹೇಳಿದರು.
ಕಾರಂತರು ಬರೆದ ಮೂಕಜ್ಜಿಯ ಕನಸುಗಳು ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದ್ದು, ಕನ್ನಡಿಗರಿಗೆ ಹೆಮ್ಮೆಯ ಸಂಗತಿ, ಕನ್ನಡವು ಸುಮಾರು 2,000 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. ಇದಕ್ಕೆ ಭಾರತ ಸರ್ಕಾರ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ್ತಿದ್ದು, 6 ಕೋಟಿ ಕನ್ನಡಿಗರಿಗೆ ಹೆಮ್ಮೆಯಾಗಿದೆ. ಪ್ರತಿಯೋಬ್ಬರು ಮಾತೃಭಾಷೆ ಕನ್ನಡವನ್ನು ಪ್ರೀತಿಸಿ ಉಳಿದ ಭಾಷೆಗಳಿಗೆ ಗೌರವ ಕೊಡಬೇಕು ಎಂದು ಹೇಳಿದರು.ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಅನೀಲಕುಮಾರ ಅಣದೂರೆ ಮಾತನಾಡಿ, ಕಾರಂತರು ಬರೆದ ಸುಮಾರು 427 ಕೃತಿಗಳು ಇಂದು ಮನುಕುಲದ ವಿವಿಧ ವಿಷಯಗಳಾದ ಆರೋಗ್ಯ, ಯಕ್ಷಗಾನ ಮತ್ತು ಕರ್ನಾಟಕ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಿವೆ ಎಂದು ನುಡಿದರು.
ಕಾರಂತರಿಗೆ ಪದ್ಮಭೂಷಣ, ಪದ್ಮವಿಭೂಷಣ, ಜ್ಞಾನಪೀಠ ಅಲ್ಲದೇ ದೇಶದ ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ಕೊಟ್ಟು ಗೌರವಿಸಿವೆ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ನಡೆದು ಸರ್ವಶ್ರೇಷ್ಠ ಮಾನವರಾಗಿ ಜೀವಿಸಬೇಕು ಎಂದು ಹೇಳಿದರು.ಈ ವೇಳೆ ಕನ್ನಡ ವಿಭಾಗದ ಮುಖ್ಯಸ್ಥೆ ರೇಣುಕಾ ಎಂ.ಸ್ವಾಮಿ, ಕಾವೇರಿ ಖಂಡ್ರೆ, ಬಸವರಾಜ ಬಿರಾದಾರ, ವಾಣಿಶ್ರೀ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.