ಈರಣ್ಣ ಬುಡ್ಡಾಗೋಳ
ಬಯಲು ಮಲಮೂತ್ರ ವಿಸರ್ಜನೆ ಮಾಡಬೇಡಿ ಎಂದು ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಜನರಿಗೆ ಸ್ವಚ್ಛತೆ ಪಾಠ ಬೋಧಿಸುವ ತಾಲೂಕು ಆಡಳಿತ ಸೌಧದಲ್ಲೇ ಶೌಚಾಲಯವಿಲ್ಲದೆ ನೌಕರರು, ಸಿಬ್ಬಂದಿ ಮತ್ತು ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.
ಸುಮಾರು 20 ವರ್ಷಗಳ ಹಿಂದೆಯೇ ₹4 ಕೋಟಿಗೂ ಅಧಿಕ ಅನುದಾನದಲ್ಲಿ ನಿರ್ಮಾಣವಾಗಿರುವ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕಚೇರಿಯಲ್ಲಿ ಕೆಲಸಕ್ಕಾಗಿ ಬರುವ ಸಾರ್ವಜನಿಕರಿಗೆ ಮತ್ತು ಇಲಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆವರಣದಲ್ಲಿ ಶೌಚಾಲಯ ಇಲ್ಲದೇ ಇರುವುದರಿಂದ ಮಲಮೂತ್ರ ವಿಸರ್ಜನೆ ಮಾಡುವುದೇ ತೊಂದರೆಯಾಗಿದೆ. ಈ ತಾಲೂಕುಸೌಧದಲ್ಲಿ ಮುಖ್ಯವಾಗಿ ಕಂದಾಯ ಇಲಾಖೆ ಸೇರಿದಂತೆ 7-8 ತಾಲೂಕುಮಟ್ಟದ ಕಚೇರಿಗಳಿವೆ. ಆದರೆ ಶೌಚಾಲಯ ನಿರ್ವಹಣೆ ಗೋಜಿಗೆ ಮಾತ್ರ ಯಾರು ಮುಂದಾಗುತ್ತಿಲ್ಲ, ಪರಿಣಾಮ ಇಲಾಖೆಯ ಸಿಬ್ಬಂದಿ ಶೌಚಾಲಯವಿಲ್ಲದೆ ಪರದಾಡುತ್ತಿದ್ದಾರೆ.ಮಿನಿವಿಧಾನಸೌಧದ ನೆಲಮಹಡಿಯಲ್ಲಿರುವ ಪೂರ್ವದ ಶೌಚಾಲಯ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಮಹಿಳೆಯರು ಮಾತ್ರ ಉಪಯೋಗಿಸುತ್ತಾರೆ. ಪಶ್ಚಿಮ ದಿಕ್ಕಿನ ಮತ್ತು ಮೊದಲ ಮಹಡಿಯ ಶೌಚಾಲಯಕ್ಕೆ ಸಮರ್ಪಕ ನೀರಿನ ಕೊರತೆಯಿಂದ ಅವುಗಳಿಗೆ ಬೀಗ ಜಡಿಯಲಾಗಿದೆ. ಅಷ್ಟೇ ಅಲ್ಲದೆ ಅತ್ತ ಕಡೆ ಯಾರು ಸುಳಿಯದಂತೆ ಕಚೇರಿಯ ಕಟ್ಟಿಗೆಯ ಕಪಾಟು, ನಿರುಪಯುಕ್ತ ಸಾಮಗ್ರಿಗಳನ್ನು ಇಡಲಾಗಿದೆ.
ಧೂಳು ಆವರಿಸಿದ ಸೌಧ:
ಮಿನಿ ವಿಧಾನಸೌಧಕ್ಕೆ ಬರುವ ಮಧುಮೇಹ ರೋಗಿಗಳು ಮತ್ತು ವಯಸ್ಕರಿಗೆ ಶೌಚಾಲಯದ ತೊಂದರೆಯಾಗುತ್ತಿದೆ. ಮಿನಿ ವಿಧಾನಸೌಧದ ಹತ್ತಿರ ಶೌಚಾಲಯ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ. ಇಲ್ಲವೆಂದರೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಪರಿಸರ ನಾರುತ್ತದೆ. ಶಂಕರ ಕುಂಬಾರ, ಮುದಕವಿ ಗ್ರಾಮಸ್ಥ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್, ಸಿಡಿಪಿಒ, ಖಜಾನೆ, ನೋಂದಣಿ, ಭೂಮಾಪನ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ತಾಲೂಕುಮಟ್ಟದ ಅಧಿಕಾರಿಗಳ ಕಚೇರಿಯಲ್ಲಿ ಶೌಚಾಲಯಗಳಿವೆ. ಆದರೆ ಕೆಳಸ್ಥರದ ಅಧಿಕಾರಿಗಳು ಬಯಲನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ. ಹೆಸರು ಹೇಳಲಿಚ್ಚಸದ ಸರ್ಕಾರಿ ನೌಕರ