ಹೊಳೆನರಸೀಪುರ ಬೀದಿಬದಿ ವ್ಯಾಪಾರಿಗಳು ಮತ್ತು ರೈತರಿಗೆ ಸುಂಕವಿಲ್ಲ

KannadaprabhaNewsNetwork | Published : Feb 11, 2025 12:49 AM

ಸಾರಾಂಶ

೨೦೨೫-೨೬ನೇ ಸಾಲಿನಲ್ಲಿ ಪುರಸಭೆ ವ್ಯಾಪ್ತಿಯ ರಸ್ತೆ ಬದಿ ವ್ಯಾಪಾರಿಗಳು ಹಾಗೂ ರೈತರಿಂದ ಸಂತೆಯ ದಿನ ಅಥವಾ ಪ್ರತಿನಿತ್ಯ ಸುಂಕವನ್ನು ವಸೂಲಿ ಮಾಡದಂತೆ ಶಾಸಕ ಎಚ್.ಡಿ ರೇವಣ್ಣ ಅವರು ಪತ್ರಕರ್ತರು ಹಾಗೂ ಪುರಸಭಾ ಸದಸ್ಯರ ಮನವಿಗೆ ಸ್ಪಂದಿಸಿ ಸುಂಕದ ಹರಾಜು ಪ್ರಕ್ರಿಯೆ ಮಾಡದಂತೆ ಶಾಸಕ ಎಚ್.ಡಿ.ರೇವಣ್ಣನವರು ಸೂಚಿಸಿದರು. ಸದಸ್ಯರಾದ ಟಿ.ಶಾಂತಿ ಹಾಗೂ ಕುಮಾರಸ್ವಾಮಿ ಅವರು ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ನಿವೇಶನ ಕೊಡಿಸಿ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದಲ್ಲಿ ೨೦೨೫-೨೬ನೇ ಸಾಲಿನಲ್ಲಿ ಪುರಸಭೆ ವ್ಯಾಪ್ತಿಯ ರಸ್ತೆ ಬದಿ ವ್ಯಾಪಾರಿಗಳು ಹಾಗೂ ರೈತರಿಂದ ಸಂತೆಯ ದಿನ ಅಥವಾ ಪ್ರತಿನಿತ್ಯ ಸುಂಕವನ್ನು ವಸೂಲಿ ಮಾಡದಂತೆ ಶಾಸಕ ಎಚ್.ಡಿ ರೇವಣ್ಣ ಅವರು ಪತ್ರಕರ್ತರು ಹಾಗೂ ಪುರಸಭಾ ಸದಸ್ಯರ ಮನವಿಗೆ ಸ್ಪಂದಿಸಿ ಸುಂಕದ ಹರಾಜು ಪ್ರಕ್ರಿಯೆ ಮಾಡದಂತೆ ಶಾಸಕ ಎಚ್.ಡಿ.ರೇವಣ್ಣನವರು ಸೂಚಿಸಿದರು.

ಪಟ್ಟಣದ ಪುರಸಭೆಯ ಎಚ್.ಡಿ.ದೇವೇಗೌಡ ಸಭಾಂಗಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಉಪಸ್ಥಿತಿಯಲ್ಲಿ ಪುರಸಭಾಧ್ಯಕ್ಷ ಕೆ.ಶ್ರೀಧರ್ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜನೆ ಮಾಡಿದ್ದ ಆಯವ್ಯಯ ಹಾಗೂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರು ಇ ಖಾತೆ ಹಾಗೂ ಇತರೆ ಕಾರ್ಯಗಳ ಸಂಬಂಧ ಪುರಸಭೆಗೆ ಅರ್ಜಿ ಸಲ್ಲಿಸಿದಾಗ ನ್ಯಾಯ ಸಮ್ಮತವಾಗಿದ್ದಲ್ಲಿ ಅವರನ್ನು ಕಚೇರಿಗೆ ಅಲೆಸದೇ ಮತ್ತು ಯಾವುದೇ ರೀತಿಯ ತೊಂದರೆ ನೀಡದೇ ಅವರ ಕೆಲಸ ಮಾಡಿಕೊಡಿ ಎಂದು ಮುಖ್ಯಾಧಿಕಾರಿ ಶಿವಶಂಕರ್‌ಗೆ ಸೂಚಿಸಿದರು.

ಪುರಸಭಾಧ್ಯಕ್ಷ ಕೆ.ಶ್ರೀಧರ್ ಅವರು ಪುರಸಭೆ ೨೦೨೫-೨೬ ನೇ ಸಾಲಿನ ಆಯವ್ಯಯ ಮಂಡಿಸಿ, ಪ್ರಾರಂಭ ಶಿಲ್ಕು ೩೦,೮೪,೪೮೪ ರು. ನಿರೀಕ್ಷಿತ ಆದಾಯ ೧,೮೭,೮೨,೯೮,೦೦೦ ರು. ಒಟ್ಟು ೧,೮೮,೧೩,೮೨,೪೮೪ ರು. ನಿರೀಕ್ಷಿತ ಖರ್ಚು ೧,೮೭,೮೫,೯೩,೦೦೦ ರು. ಉಳಿತಾಯ ೨೭,೮೯,೪೮೪ ರು.ಗಳು ಉಳಿತಾಯ ಬಜೆಟ್ ಮಂಡಿಸಿ, ಖರ್ಚುವೆಚ್ಚದ ಮಾಹಿತಿ ನೀಡಿದರು. ಆದರೆ ಪ್ರಾರಂಭ ಶಿಲ್ಕು ಹಣ ಹಾಗೂ ಉಳಿತಾಯ ಹಣ ತಾಳೆ ಮಾಡಿದಾಗ ೨,೯೫,೦೦೦ ರು. ಕೊರತೆ ಉಂಟಾಗಿದೆ.

ಇದೇ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಸುಧಾನಳಿನಿ ಅವರು ಶನಿವಾರದ ಕನ್ನಡಪ್ರಭ ಪತ್ರಿಕೆಯಲ್ಲಿ "ಅವೈಜ್ಞಾನಿಕ ಅಂಡರ್‌ಪಾಸ್‌ನಿಂದ ನಿವಾಸಿಗಳಿಗೆ ಸಂಕಷ್ಟ " ಎಂಬ ಶ್ರೀರ್ಷಿಕೆಯಡಿ ಪ್ರಕಟವಾದ ಸುದ್ದಿಯ ವಿಷಯ ಪ್ರಸ್ತಾಪಿಸಿ, ಅಗತ್ಯ ಬೀದಿದೀಪಗಳ ವ್ಯವಸ್ಥೆಗೆ ಒತ್ತಾಯಿಸಿದರು. ಬೋರ್‌ವೆಲ್‌ಗಳಿಗೆ ಅಳವಡಿಸಿದ್ದ ಮೋಟಾರುಗಳನ್ನು ಬಿಚ್ಚಿದ ಪುರಸಭೆ ನೌಕರರು ಇನ್ನೂ ಅಳವಡಿಸಿಲ್ಲ ಮತ್ತು ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿ, ಹಲವಾರು ಸಮಸ್ಯೆಗಳ ಕುರಿತು ಮಾತನಾಡಿ ಸಭೆಯ ಗಮನ ಸೆಳೆದರು.

ಸದಸ್ಯ ಎಚ್.ಕೆ.ಪ್ರಸನ್ನ ಮಾತನಾಡಿ, ನೀವು ಸಭೆಯಲ್ಲಿ ಸಲಹೆಗಳನ್ನು ನೀಡಿ ತೆರಳುತ್ತೀರಿ, ಆದರೆ ಇಲ್ಲಿ ಯಾವುದೇ ಕಾರ್ಯಗಳು ನಿಮ್ಮ ಸಲಹೆಯಂತೆ ನಡೆಯೊಲ್ಲ, ನಾವು ಇರ್‍ತೀವಿ, ಹೋಗ್ತಿವಿ. ಆದರೆ ಇವರುಗಳ ಕಾರ್ಯವೈಖರಿಯಿಂದ ನಿಮಗೆ ಕೆಟ್ಟ ಹೆಸರು ಬರುತ್ತೆ ಎಂದು ಪುರಸಭೆ ನೌಕರರ ಕಾರ್ಯದ ಬಗ್ಗೆ ತಿಳಿಸಿ, ಒಂದು ಇ ಖಾತೆಗೆ ಅರ್ಜಿ ನೀಡಿದ ನಾಗರಿಕರು ಸುತ್ತಿಸುತ್ತಿ ಸುಸ್ತಾಗುತ್ತಾರೆ, ಆದರೆ ಕೆಲಸ ಮಾತ್ರ ಆಗೊಲ್ಲವೆಂದು ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಏಕೈಕ ಸದಸ್ಯ ಬೈರಶೆಟ್ಟಿ ಮಾತನಾಡಿ, ಕಾಳಿಕಾಂಬ ದೇವಾಲಯದ ರಸ್ತೆ ಸಂಪೂರ್ಣ ಹಾಳಾಗಿದೆ, ರಸ್ತೆ ದುರಸ್ತಿಯಾಗಬೇಕು ಎಂದರು. ಪಟ್ಟಣದ ಶವಾಗಾರದ ಸಮೀಪ ಅನಾಹುತಗಳು ನಡೆದು ವ್ಯಕ್ತಿಗಳ ಮೃತದೇಹವನ್ನು ಶವಾಗಾರದಲ್ಲಿ ಇರಿಸಿದ ಸಂದರ್ಭದಲ್ಲಿ ಆಗಮಿಸುವ ನೊಂದ ಜನರು, ಚಳಿ, ಗಾಳಿ, ಮಳೆಯಿಂದ ರಕ್ಷಣೆ ಪಡೆಯಲು ತುರ್ತುಗಿ ಒಂದು ತಂಗುದಾಣ ಹಾಗೂ ಶೌಚಾಗೃಹ ನಿರ್ಮಿಸಬೇಕು ಎಂದು ವಿನಂತಿಸಿದರು. ಸದಸ್ಯರಾದ ಟಿ.ಶಾಂತಿ ಹಾಗೂ ಕುಮಾರಸ್ವಾಮಿ ಅವರು ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ನಿವೇಶನ ಕೊಡಿಸಿ ಎಂದರು.

ಶಾಸಕರು ಹಾಗೂ ಪುರಸಭೆಯ ೨೦ ಸದಸ್ಯರು ಸಂತೆಯ ದಿನ ಅಥವಾ ಪ್ರತಿನಿತ್ಯ ಸುಂಕವನ್ನು ವಸೂಲಿ ಮಾಡದಂತೆ ವಿಷಯ ಮಂಡಿಸಿ, ಒಕ್ಕರೊಲಿನಿಂದ ಒಪ್ಪಿಗೆ ಸೂಚಿಸಿದ್ದರೂ ಸಹ ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್ ಅವರು ಸರ್ಕಾರಕ್ಕೆ ಪತ್ರ ಬರೆದು, ಅನುಮತಿ ಪಡೆದ ನಂತರ ರದ್ದು ಮಾಡಬಹುದು ಎಂಬ ಮಾತಿಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯ ೨೦ ಚುನಾಯಿತ ಜನಪ್ರತಿನಿಧಿಗಳು ಒಮ್ಮತದಿಂದ ಸುಂಕ ವಸೂಲಿಗೆ ವಿರೋಧ ವ್ಯಕ್ತಪಡಿಸಿ, ಸುಂಕ ವಸೂಲಿ ಮಾಡದಂತೆ ಒಪ್ಪಿಗೆ ಸೂಚಿಸಿದ್ದರೂ ಮುಖ್ಯಾಧಿಕಾರಿಯ ಮಾತುಗಳು ಜನರಲ್ಲಿ ಅನುಮಾನ ಮೂಡಿಸುವ ಜತೆಗೆ ಪುರಸಭೆ ಸದಸ್ಯರು ಒಮ್ಮತದ ನಿರ್ಧಾರಕ್ಕೆ ಸರ್ಕಾರದ ಅನುಮತಿ ಏಕೆ ಬೇಕು ಎಂದು ಸದಸ್ಯರು ಪ್ರಶ್ನೆ ಅರ್ಥಪೂರ್ಣವಾಗಿತ್ತು.

ಸದಸ್ಯರಾದ ಎಚ್.ಆರ್.ಕಿರಣ್‌ ಕುಮಾರ್‌, ಕೆ.ಎಂ.ಮಂಜಣ್ಣ ಹಾಗೂ ಜೆ.ತ್ರಿಲೋಚನಾ ಗೈರಾಗಿದ್ದರು. ಪುರಸಭೆ ಅಧಿಕಾರಿಗಳಾದ ನಾಗೇಂದ್ರ ಕುಮಾರ್, ರಮೇಶ್, ಪಂಕಜಾ, ಪರಮೇಶ್, ಇತರರು ಇದ್ದರು.

Share this article