ನನ್ನ ವಿರುದ್ಧದ ಸ್ನೇಹಮಯಿ ಕೃಷ್ಣ ಆರೋಪದಲ್ಲಿ ಹುರುಳಿಲ್ಲ: ಶಾಸಕ ಜಿ.ಟಿ. ದೇವೇಗೌಡ

KannadaprabhaNewsNetwork |  
Published : Nov 17, 2024, 01:15 AM ISTUpdated : Nov 17, 2024, 01:01 PM IST
ಶಾಸಕ ಜಿ.ಟಿ.ದೇವೇ ಗೌಡ | Kannada Prabha

ಸಾರಾಂಶ

 ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದಲ್ಲಿ ಶಾಸಕನಾದ ನನ್ನ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿರುವ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಆರೋಪದಲ್ಲಿ ಹುರುಳಿಲ್ಲ ಎಂದು ಶಾಸಕ ಜಿ.ಟಿ.ದೇವೇ ಗೌಡ ಪ್ರತಿಕ್ರಿಯಿಸಿದ್ದಾರೆ.

  ಮಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದಲ್ಲಿ ಶಾಸಕನಾದ ನನ್ನ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿರುವ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಆರೋಪದಲ್ಲಿ ಹುರುಳಿಲ್ಲ ಎಂದು ಶಾಸಕ ಜಿ.ಟಿ.ದೇವೇ ಗೌಡ ಪ್ರತಿಕ್ರಿಯಿಸಿದ್ದಾರೆ. 

ಮಂಗಳೂರಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ಬುದ್ಧಿವಂತ ಅವನಲ್ಲಿ ಶಕ್ತಿ‌ ಇದೆ. ಒಂದು ಎಕರೆ ಭೂಮಿ ಸ್ವಾಧೀನಪಡಿಸಿ ದುಡ್ಡಿನ ಪರಿಹಾರ ನೀಡಿದರೆ ಒಂದು ಸೈಟ್ ಕೊಡುತ್ತಾರೆ. ಆ ಜಮೀನಿಗೆ ಪರಿಹಾರ ಕೊಡದೇ ಇದ್ದರೆ 50:50 ನಲ್ಲಿ‌ ಸೈಟ್ ಕೊಡಬೇಕು. ರೈತರ ಜಮೀನಿಗೆ ಇದನ್ನು ಕಾನೂನು ಬದ್ಧವಾಗಿ ಕೊಡಬೇಕು‌ಮುಡಾ ಪಡೆದಿರುವ ಜಮೀನಿಗೆ 50:50 ಸೈಟ್ ಕೊಡಲೇ ಬೇಕು. 

ಸೈಟ್‌ ಕೊಡುವ ಪ್ರಕ್ರಿಯೆಯಲ್ಲಿ ತಪ್ಪಾಗಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ನನ್ನ ಸಂಬಂಧಿಯೇ ಆಗಲಿ ಯಾರೇ ಆಗಲಿ ಶಿಕ್ಷೆಯಾಗಲಿ. ಕಾನೂನಿನ ವಿರುದ್ಧವಾಗಿ‌ ಮಾಡಿದರೆ ಶಿಕ್ಷೆಯಾಗಲಿ ಎಂದರು. ಭೂಮಿ ನೀಡಿದ ರೈತನಿಗೆ 50:50 ನಲ್ಲಿ ಸೈಟ್ ಕೊಡಲೇಬೇಕು. ಹೀಗೆ ಮಾಡುವ ಸಂದರ್ಭದಲ್ಲಿ ಕೆಲವು ನ್ಯೂನತೆಗಳಾಗಿದೆ.ರೈತರಿಗೆ ಅಧಿಕೃತವಾಗಿ 50:50 ಸೈಟ್‌ ಕೊಡುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ

. 50:50 ಸೈಟ್‌ ಕೊಡುವುದರಲ್ಲಿ ದುರುಪಯೋಗ ಆಗಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ಕಾನೂನು ಉಲ್ಲಂಘನೆ ಆದರೂ ಎಲ್ಲರಿಗೂ ಶಿಕ್ಷೆ ಆಗಬೇಕು ಎಂದರು.

 ಚನ್ನಪಟ್ಟಣ ಉಪಚುನಾವಣಾ ಪ್ರಚಾರ ಕಾರ್ಯದಿಂದ ಹೊರಗುಳಿದಿರುವ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಸಹ ನನ್ನನ್ನು ಚುನಾವಣೆ ಪ್ರಚಾರಕ್ಕೆ ಬನ್ನಿ‌ ಎಂದು ಕರೆದಿಲ್ಲ. ಕೋರ್ ಕಮಿಟಿ‌ ಅಧ್ಯಕ್ಷನಾಗಿದ್ದರೂ ಸಹ ಪ್ರಚಾರದ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದಿದ್ದಾರೆ. ಹಾಗಾಗಿ ನಾನು ಭಾಗವಹಿಸಿಲ್ಲ. ದೂರವಾಣಿ ಮೂಲಕವೂ ನನ್ನನ್ನು ಕರೆದಿಲ್ಲ. ಕೋರ್ ಕಮಿಟಿ‌ ಅಧ್ಯಕ್ಷನನ್ನು ಬಿಟ್ಟೇ ಮಾಡಿದ್ದಾರೆ. ಯಾಕಾಗಿ ಈ ರೀತಿ‌ ಮಾಡಿದ್ದಾರೆ ಎಂದು ಅವರೇ ಹೇಳಬೇಕು ಎಂದರು. 

ಚಾಮುಂಡಿ ಬೆಟ್ಟದಲ್ಲಿ ನಾನು ಅಂತಹದ್ದೇನು ತಪ್ಪು ಮಾತನಾಡಿಲ್ಲ. ಸಿದ್ದರಾಮಯ್ಯನವರು‌ 135 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ಎಚ್.ಡಿ‌ ಕುಮಾರಸ್ವಾಮಿ 2 ಲಕ್ಷ ಲೀಡ್‌ನಲ್ಲಿ ಗೆದ್ದು ಸಂಸದ ಆಗಿದ್ದಾರೆ. ಅಶೋಕ್ ಅವರು ಗೆದ್ದು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕೇಂದ್ರದಲ್ಲೂ ಕೆಲವರ ಮೇಲೆ ಎಫ್.ಐ.ಆರ್. ಆಗಿದೆ. ಇಲ್ಲಿ ಯಾರ ಮೇಲೆ ಎಫ್.ಐ.ಆರ್ ಆಗಿದೆ ಎಂದು ಗೊತ್ತು. ನ್ಯಾಯಾಲಯದ ತೀರ್ಪು ಬಂದು ತಪ್ಪಿತಸ್ಥ ಎಂದ ಮೇಲೆ ಅವರಿಗೆ ಶಿಕ್ಷೆ ಆಗುತ್ತೋ, ರಾಜಿನಾಮೆ ಕೊಡಬೇಕು, ಜೈಲಿಗೆ ಹಾಕಬೇಕೋ‌ ಅದನ್ನು ಮಾಡಬೇಕು. ಅದು ಬಿಟ್ಟು ಕಾಂಗ್ರೆಸ್ ಮಂತ್ರಿಗಳು‌ ದಿನಾ ಕುಮಾರಸ್ವಾಮಿ ರಾಜಿನಾಮೆ ಕೊಡಿ‌ ಎಂದು ಕೇಳುವುದು, ಬಿಜೆಪಿ, ದಳದವರು ಸೇರಿ‌‌ ಸಿದ್ದರಾಮಯ್ಯ ರಾಜಿನಾಮೆ ಕೊಡಿ‌ ಎಂದು ಕೇಳೋದು ಸರಿಯಲ್ಲ.

 ನ್ಯಾಯಾಲಯದ ತೀರ್ಪು ಬರುವವರೆಗೆ ಯಾರೂ ರಾಜಿನಾಮೆ ಕೊಡುವ ಅವಶ್ಯಕತೆ ಇಲ್ಲ.ಹಾಗೆ ರಾಜಿನಾಮೆ ನೀಡಿದರೆ, ಇಡೀ‌ ವಿಧಾನಸೌಧದಲ್ಲಿರುವ ಶೇ. 75 ಮಂದಿ ರಾಜಿನಾಮೆ ನೀಡಬೇಕಾಗುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಇಷ್ಟು‌ ಹೇಳಿದ್ದೇ ದೊಡ್ಡ ಅಪರಾಧ ಎಂದು ತಿಳಿದುಕೊಂಡರೆ ನಾನು ಏನು ಮಾಡಬೇಕಾಗುತ್ತದೆ ಎಂದರು.

ವಿರೋಧ ಪಕ್ಷದ ನಾಯಕನ ಆಯ್ಕೆ ಸಂದರ್ಭದಲ್ಲಿ ಕೋರ್ ಕಮಿಟಿ ಮೀಟಿಂಗ್ ಕರೆಯುತ್ತಾರೆ. ನಾನೂ ಪಬ್ಲಿಕ್ ಅಕೌಂಟ್ಸ್ ಕಮಿಟಿ‌ ಪ್ರವಾಸ ಹೋಗಿದ್ದೆ. ಆ ಸಂದರ್ಭದಲ್ಲಿ ಮೀಟಿಂಗ್ ಕರೆದು ನನ್ನ ಬಿಟ್ಟು ನಾಯಕನ ಆಯ್ಕೆ ಮಾಡಿದ್ದಾರೆ. ನಾನು ಪಕ್ಷ ಕಟ್ಟುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ. ಯಾಕೆ ನನ್ನನ್ನು ಬಿಟ್ಟಿದ್ದಾರೆ ಎಂದು ಅವರೇ ಹೇಳಬೇಕು ಎಂದು ಜಿ.ಟಿ.ದೇವೇ ಗೌಡ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''