ವಾಲ್ಮೀಕಿ ಪೀಠದ ಸ್ವಾಮೀಜಿ ವಿರುದ್ಧದ ಪ್ರಕರಣದಲ್ಲಿ ಸತ್ಯಾಂಶ ಇಲ್ಲ-ತಳವಾರ

KannadaprabhaNewsNetwork |  
Published : Oct 10, 2025, 01:00 AM IST
9ಎಚ್‌ವಿಆರ್1-ಬಸವರಾಜ ತಳವಾರ | Kannada Prabha

ಸಾರಾಂಶ

ರಾಣಿಬೆನ್ನೂರಿನಲ್ಲಿ ಮಾರುತಿ ಮ್ಯಾನ್ ಪವರ್ ಡೆವಲಪ್‌ಮೆಂಟ್ ಸೊಸೈಟಿ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಿ ವಂಚಿಸಲಾಗಿದೆ ಎಂದು ವಾಲ್ಮೀಕಿ ಪೀಠದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಖಾಸಗಿ ಪ್ರಕರಣದಲ್ಲಿ ಒಂದಿಂಚೂ ಸತ್ಯಾಂಶ ಇಲ್ಲ, ಇದೊಂದು ಸುಳ್ಳು ಆರೋಪ ಎಂದು ಮಾರುತಿ ಮ್ಯಾನ್ ಪವರ್ ಡೆವಲಪ್‌ಮೆಂಟ್ ಸೊಸೈಟಿ ಕಾರ್ಯದರ್ಶಿ ಬಸವರಾಜ ತಳವಾರ ಸ್ಪಷ್ಟಪಡಿಸಿದರು.

ಹಾವೇರಿ: ರಾಣಿಬೆನ್ನೂರಿನಲ್ಲಿ ಮಾರುತಿ ಮ್ಯಾನ್ ಪವರ್ ಡೆವಲಪ್‌ಮೆಂಟ್ ಸೊಸೈಟಿ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಿ ವಂಚಿಸಲಾಗಿದೆ ಎಂದು ವಾಲ್ಮೀಕಿ ಪೀಠದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಖಾಸಗಿ ಪ್ರಕರಣದಲ್ಲಿ ಒಂದಿಂಚೂ ಸತ್ಯಾಂಶ ಇಲ್ಲ, ಇದೊಂದು ಸುಳ್ಳು ಆರೋಪ ಎಂದು ಮಾರುತಿ ಮ್ಯಾನ್ ಪವರ್ ಡೆವಲಪ್‌ಮೆಂಟ್ ಸೊಸೈಟಿ ಕಾರ್ಯದರ್ಶಿ ಬಸವರಾಜ ತಳವಾರ ಸ್ಪಷ್ಟಪಡಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಡಾ.ಎಲ್.ಜಿ. ಹಾವನೂರ ಅವರು ಒಂದೂವರೆ ಎಕರೆ ಜಮೀನನ್ನು ಸಮಾಜಕ್ಕೆ ಉಪಯೋಗ ಆಗಲೆಂದು ದಾನ ನೀಡಿದರು. ಈ ಜಾಗದಲ್ಲಿ ಬಸವೇಶ್ವರ ಪ್ರೌಢಶಾಲೆ ಆರಂಭಿಸಲಾಯಿತು. ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರು ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದರು. ಪ್ರಸ್ತುತ ಶಾಲೆಯಲ್ಲಿ ನೂರಕ್ಕೂ ಅಧಿಕ ಬಡ ಮಕ್ಕಳು ಓದುತ್ತಿದ್ದಾರೆ ಎಂದರು. ಸಂಸ್ಥೆಯ ಹಿಂದಿನ ಕಾರ್ಯದರ್ಶಿ ಶ್ರೀಧರ ಚಿಕ್ಕಣ್ಣನವರ ಮತ್ತು ಸಹ ಶಿಕ್ಷಕಿ ಜೈಶೀಲಾ ಚಿಕ್ಕಣ್ಣನವರ 2021-23ರ ಅವಧಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಂಸ್ಥೆಗೆ 27 ಲಕ್ಷ ರು. ವಂಚನೆ ಮಾಡಿದ್ದಾರೆ ಎಂಬ ಆರೋಪ ಆಡಳಿತ ಮಂಡಳಿ ಗಮನಕ್ಕೆ ಬಂತು. ಈ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು. ಜೈಶೀಲಾ ಅವರನ್ನು ಅಮಾನತು ಮಾಡಲಾಗಿತ್ತು. ಹಾಗಾಗಿ, ಅವರು ತಮ್ಮ ಹಗರಣ ಹೊರ ಬರುತ್ತದೆ ಎಂದು ಸ್ವಾಮೀಜಿಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಶ್ರೀಮಠದ ಅಭಿವೃದ್ಧಿ ಸಹಿಸದ ಕೆಲವರು ಈ ಸಂಚು ರೂಪಿಸಿದ್ದಾರೆ ಎಂದು ದೂರಿದರು.ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಹಾನಗಲ್ಲ ರಸ್ತೆ ಬಳಿ ನಿರ್ಮಾಣವಾಗುತ್ತಿರುವ ಜಿಲ್ಲಾ ವಾಲ್ಮೀಕಿ ಭವನದ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಅನುದಾನದ ಕೊರತೆಯಿಂದ ಭವನ 9 ವರ್ಷಗಳಿಂದ ನಿಧಾನವಾಗಿತ್ತು. ಮೊದಲಿಗೆ 3 ಕೋಟಿ ಜೊತೆ ಈಗ 2.50 ಕೋಟಿ ರು. ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ. ವಾಲ್ಮೀಕಿ ವೃತ್ತದಲ್ಲಿ 15 ಲಕ್ಷ ರು. ವೆಚ್ಚದ ವಾಲ್ಮೀಕಿ ಪ್ರತಿಮೆ ಹಾಗೂ ಜಿಲ್ಲಾ ವಾಲ್ಮೀಕಿ ಭವನದ ಉದ್ಘಾಟನೆ ಸಮಾರಂಭವನ್ನು ಡಿಸೆಂಬರ್‌ನಲ್ಲಿ ಆಯೋಜಿಸಲಾಗುವುದು. ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವ ನಿರೀಕ್ಷೆ ಇದೆ. ಶೀಘ್ರವೇ ಅವರು ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷ ಚಂದ್ರಪ್ಪ ಬೇಡರ, ಸಹ ಕಾರ್ಯದರ್ಶಿ ಹನುಮಂತಪ್ಪ ಮೀನಕಟ್ಟಿ, ಟ್ರಸ್ಟಿಗಳಾದ ರಾಜು ಮಾದಮ್ಮನವರ, ರವೀಂದ್ರಗೌಡ ಪಾಟೀಲ, ವಿಜಯಕುಮಾರ ಹಿತ್ತಲಮನಿ, ಸುರೇಶ ಯಲ್ಲಾಪುರ, ಮಂಜುನಾಥ ಮುಗದೂರ, ಸಂತೋಷ ಬುಳ್ಳಮ್ಮನವರ ಇತರರಿದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ