ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥರು, ಅರ್ಚಕ ಶ್ರೀನಿವಾಸಮೂರ್ತಿ ಅವರಿಂದ ದೇವಸ್ಥಾನದ ಪೂಜೆಗೆ ಬರುವ ಭಕ್ತರಿಗಾಗಲಿ ಅಥವಾ ಗ್ರಾಮಸ್ಥರಿಗಾಗಲಿ ಯಾವುದೇ ತೊಂದರೆಯಾಗಿಲ್ಲ ಎಂದರು.
ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ಕೂಡ ಇಲಾಖೆ ಅನುಮತಿ ಪಡೆಯದೇ ಜೀರ್ಣೋದ್ಧಾರ ಸಮಿತಿ ಮಾಡಿಕೊಂಡಿರುವ ಕೆಲವರು ಅರ್ಚಕ ಶ್ರೀನಿವಾಸಮೂರ್ತಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಗ್ರಾಮದಲ್ಲಿ 40ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲ ಸಮುದಾಯದ ಜನರಿದ್ದೇವೆ. ಅರ್ಚಕರೂ ಸೇರಿದಂತೆ ಗ್ರಾಮಸ್ಥರನ್ನು ಹೊರತುಪಡಿಸಿ ಕಾನೂನು ಬಾಹಿರವಾಗಿ ಕೆಲವರು ಸಮಿತಿ ರಚಿಸಿಕೊಂಡಿದ್ದಾರೆ ಎಂದು ದೂರಿದರು.ದೇಗುಲದಲ್ಲಿ ಅರ್ಚಕರ ಮನೆಗೆಲಸದ ಮಹಿಳೆ ಪೂಜೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಗ್ರಾಮಸ್ಥರು, ದೇವಸ್ಥಾನದ ಪ್ರಧಾನ ಅರ್ಚಕರು ಬೇರೊಂದು ಗ್ರಾಮದ ದೇವಸ್ಥಾನಕ್ಕೆ ಪೂಜೆಗೆಂದು ಹೋಗಿದ್ದರು. ಮತ್ತೊಬ್ಬ ಅರ್ಚಕರಿಗೆ ಆರೋಗ್ಯ ಸಮಸ್ಯೆಯಿದ್ದರೂ ಸಹ ಪೂಜೆ, ಅಭಿಷೇಕ ಎಲ್ಲವನ್ನೂ ಮುಗಿಸಿ ಆಸ್ಪತ್ರೆಗೆ ತೆರಳಿದ್ದರು. ಈ ಸಮಯದಲ್ಲಿ ಆಗಮಿಸಿದ್ದ ಭಕ್ತರು ನೀವೇ ಪೂಜೆ ಮಾಡಿಕೊಡಿ ಎಂದು ಅವರ ಮನೆಗೆಲಸದ ಮಹಿಳೆಯನ್ನು ಕೋರಿಕೊಂಡ ಹಿನ್ನೆಲೆಯಲ್ಲಿ ದೂರದಿಂದ ಭಕ್ತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಆ ಮಹಿಳೆ ಪೂಜೆ ಮಾಡಿಕೊಟ್ಟಿದ್ದಾರೆ ಅಷ್ಟೆ ಎಂದರು.
ಸಮಿತಿಯವರು ಯಾರ ಅನುಮತಿಯನ್ನೂ ಪಡೆಯದೆ ಗ್ರಾಮಸ್ಥರ ಗಮನಕ್ಕೂ ತರದೆ ಗ್ರಾಮದ ಶ್ರೀಆಂಜನೇಯಸ್ವಾಮಿ ದೇಗುಲವನ್ನು ತೆರವುಗೊಳಿಸಿ ದೇವರಿಗೆ ಪೂಜೆ ಇಲ್ಲದಂತೆ ಮಾಡಿದ್ದಾರೆ. ಸಾರ್ವಜನಿಕವಾಗಿ ವಂತಿಕೆ ಸಂಗ್ರಹಿಸಿರುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ದಾಖಲೆ ಸಂಗ್ರಹಿಸಿದ ನಂತರ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.