ಕನ್ನಡಪ್ರಭ ವಾರ್ತೆ ಬೆಳಗಾವಿ
ಎಲ್ಲರಿಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ, ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ವಿ.ದೇಶಪಾಂಡೆ ಅವರು ಹೈಕಮಾಂಡ್ ಒಪ್ಪಿದರೆ ನಾನು ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆಂದು ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ. ಅವರು ಕಾಂಗ್ರೆಸ್‌ನ ಹಿರಿಯ ನಾಯಕರು. ಅವರು ಆಸೆ ಪಡುವುದರಲ್ಲಿ ತಪ್ಪಿಲ್ಲ ಎಂದರು. ಮುಡಾ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಕುರಿತು ಚರ್ಚೆ ಅನಗತ್ಯವಾಗಿದೆ. ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚಿಂತನೆ ನಡೆದಿಲ್ಲ. ನಮ್ಮಲ್ಲಿ ಹೈಕಮಾಂಡ್ ಇದ್ದು, ಶಾಸಕಾಂಗ ಸಭೆಯಲ್ಲಿ ನಿರ್ಣಯವಾಗಬೇಕು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದವರಾಗಬೇಕು ಸಿಎಂ ಆಗಬೇಕು ಎಂಬ ವಿಚಾರ ಅಲ್ಲ. ಈ ಎಲ್ಲ ಪ್ರಶ್ನೆ ಉದ್ಭವಿಸುವುದು ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟ ಮೇಲೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲ. ಎಲ್ಲ ಶಾಸಕ, ಸಚಿವರು ಸಿದ್ದರಾಮಯ್ಯ ಅವರ ಪರವಾಗಿದ್ದಾರೆ ಎಂದು ಹೇಳಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಕಳೆದ ಆರು ತಿಂಗಳ ಹಿಂದೆಯೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸಿದ್ದೇವೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡುವ ವಿಚಾರ ಬಂದಾಗ ಮುಖ್ಯಮಂತ್ರಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಅಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟಿರುವ 2ಡಿ ಮೀಸಲಾತಿ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಧ್ವನಿ ಎತ್ತುವಾಗ ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಮೀಸಲಾತಿಗೆ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ₹1 ಕೋಟಿ ಸಕ್ಕರೆ ವ್ಯವಹಾರವಾಗಿದೆ. 76 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆ. ಈ ಬಾರಿ ಹೆಚ್ಚು ಕಬ್ಬು ನುರಿಸುವ ಸಾಧ್ಯತೆ ಇದೆ. ಹೊಸ ಲೈಸೆನ್ಸ್‌ಗೆ ಅನೇಕ ಅರ್ಜಿಗಳು ಬಂದಿವೆ. ಕೆ ಪಾಲಿಸಿ ಮಾಡಿದ ಮೇಲೆ ಅನುಮತಿ ಕೊಡಬೇಕಿದೆ. ಇಲ್ಲದಿದ್ದರೆ ಕಾರ್ಖಾನೆಯವರು ಹಾಗೂ ರೈತರು ಹೈರಾಣಾಗುತ್ತಾರೆ. ರಾಜ್ಯದಲ್ಲಿ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದ ₹20 ಸಾವಿರ ಕೋಟಿ ಪೈಕಿ ಶೇ.99ರಷ್ಟು ರೈತರಿಗೆ ಪಾವತಿಸಲಾಗಿದೆ. ಕೆಲವು ಕಾರ್ಖಾನೆಗಳು ಸಕ್ಕರೆ ಮಾರಾಟ ಮಾಡಿ ಬಿಲ್ ಪಾವತಿಸುವುದಾಗಿ ತಿಳಿಸಿದ್ದಾರೆ ಎಂದರು.
ಕಬ್ಬಿನ ತೂಕದಲ್ಲಿ ಕಾರ್ಖಾನೆಗಳು ಮೋಸ ಮಾಡುತ್ತಿರುವ ಕುರಿತು ಎಲ್ಲಿ ದೂರುಗಳು ಬರುತ್ತಿವೆಯೋ ಅಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ತೂಕದ ಮಷಿನ್ ಅಳವಡಿಸಲು ಸರ್ಕಾರದಿಂದ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಅದನ್ನು ಅನುಷ್ಠಾನಗೊಳಿಸಿ ರೈತರ ಹಿತ ಕಾಪಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಒಡೆತನದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಸಿದ್ಧಸಿರಿ ಸಕ್ಕರೆ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬರುತ್ತದೆ. ಅದು ನನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ. ಈ ಹಿಂದೆಯೂ ನನ್ನ ಕಾರ್ಖಾನೆಯನ್ನು ಬಂದ್ ಮಾಡಿದ್ದರು. ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ.-ಶಿವಾನಂದ ಪಾಟೀಲ, ಸಕ್ಕರೆ ಸಚಿವರು