ಕನ್ನಡಪ್ರಭ ವಾರ್ತೆ ಮಂಡ್ಯ
ಗೃಹಬಳಕೆ ಅಡುಗೆ ಅನಿಲದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಆತಂಕವಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ತೈಲ ಸರಬರಾಜು ಕಂಪನಿಗಳಾದ ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿಎಲ್‌ನೊಂದಿಗೆ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಗೃಹಬಳಕೆಯ ಸಿಲಿಂಡರ್ ಸರಬರಾಜಿನಲ್ಲಿ ಪ್ರಸ್ತುತ ಯಾವುದೇ ಕೊರತೆ ಇಲ್ಲ ಎಂದರು.
ಜಿಲ್ಲೆಯಲ್ಲಿ ಗೃಹಬಳಕೆಗಾಗಿ ಪ್ರತಿನಿತ್ಯ ೧೨ ಸಾವಿರ ಸಿಲಿಂಡರ್‌ಗಳ ಅಗತ್ಯವಿದೆ ಹಾಗೂ ಮಾಸಿಕ ೩ ಲಕ್ಷಕ್ಕೂ ಅಧಿಕ ಸಿಲಿಂಡರ್‌ಗಳ ಅಗತ್ಯವಿದೆ. ಇದರಂತೆ ಪ್ರತಿನಿತ್ಯ ಅಗತ್ಯವಿರುವ ಸಿಲಿಂಡರ್‌ಗಳ ಪೂರೈಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.ಸಾರ್ವಜನಿಕರು ಗೃಹಬಳಕೆ ಅನಿಲದ ಕೊರತೆ ಉಂಟಾಗುತ್ತದೆ ಎಂದು ಭಾವಿಸಿ ಮುಂಗಡವಾಗಿ ಅನಿಲ ಬುಕ್ಕಿಂಗ್ ಮಾಡುತ್ತಿದ್ದಾರೆ. ಸಾರ್ವಜನಿಕರು ಆತಂಕಪಡದೆ ಮುಂಗಡವಾಗಿ ಸಿಲಿಂಡರ್ ಬುಕ್ಕಿಂಗ್ ಮಾಡುವ ಅವಶ್ಯಕತೆ ಇಲ್ಲ ಎಂದರು.
ವಾಣಿಜ್ಯ ಅಡುಗೆ ಅನಿಲ ಬಳಕೆಗೆ ಸಂಬಂಧಿಸಿದಂತೆ ಅಂದರೆ ಹೋಟೆಲ್, ರೆಸ್ಟೋರೆಂಟ್, ಕೈಗಾರಿಕೆಗಳ ಬಳಕೆಗೆ ಸದ್ಯಕ್ಕೆ ಅಡುಗೆ ಅನಿಲದ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಗೃಹಬಳಕೆ ಅಡುಗೆ ಅನಿಲದ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದರು.
ಆಸ್ಪತ್ರೆಗಳು, ಶಾಲೆಗಳು, ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಮತ್ತು ಅಂಗನವಾಡಿಗಳು ಸೇರಿದಂತೆ ಮುಂತಾದ ಅಗತ್ಯ ಸೇವಾ ಸಂಸ್ಥೆಗಳಿಗೆ ಅಡುಗೆ ಅನಿಲದ ಕೊರತೆ ಉಂಟಾಗದಂತೆ ನೋಡಿಕೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಮಾರ್ಚ್, ಏಪ್ರಿಲ್ ಮಾಹೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗದಂತೆ ಹಾಸ್ಟೆಲ್ ಹಾಗೂ ವಸತಿ ನಿಲಯಗಳು, ಶಾಲೆಗಳಿಗೆ ಅಡುಗೆ ಅನಿಲವನ್ನು ಪೂರೈಕೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ತೈಲ ಸರಬರಾಜು ಕಂಪನಿಗಳ ಪ್ರತಿನಿಧಿಗಳು ಹಾಗೂ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.