ಕೆ.ಮಲ್ಲಾಪೂರದಲ್ಲಿ ರೈತ ಸಂಘದ ನಾಮಫಲಕ ಅನಾವರಣದ ವೇಳೆ ರೈತರ ಆಕ್ರೋಶಕನ್ನಡಪ್ರಭ ವಾರ್ತೆ ಕನಕಗಿರಿ
ನಾಮಫಲಕವನ್ನು ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ತಾಲೂಕು ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಿಲ್ಲ. ಹೀಗಾಗಿ ರೈತರ ಜಾನುವಾರುಗಳಿಗೆ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ತವರು ಕ್ಷೇತ್ರದ ಶಾಸಕರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ಕೆರೆಗಳು ತುಂಬಿಸಲು ಕ್ರಮ ಕೈಗೊಂಡಿಲ್ಲ. ಈ ಬಾರಿ ಮಳೆಯಾದರೂ ಹಳ್ಳ-ಕೊಳ್ಳಗಳು ಹರಿದಿಲ್ಲವಾಗಿದ್ದರಿಂದ ಕೆರೆಗಳು ತುಂಬಿಲ್ಲ. ತುಂಗಭದ್ರಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸದೆ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಹೀಗೆ ಬೇಜವಾಬ್ದಾರಿತನ ತೋರಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನಂತರ ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಸೋಮಸಾಗರ ಮಾತನಾಡಿ, ನವಲಿ ಸಮನಾಂತರ ಜಲಾಶಯಕ್ಕೆ ಮೀಸಲಿರಿಸಿದ್ದ ಅನುದಾನ ಬಳಕೆಯಾಗುತ್ತಿಲ್ಲ. ಜಲಾಶಯದ ಡಿಪಿಆರ್ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಜಲ ಸಂಪನ್ಮೂಲ ಅಧಿಕಾರಿಗಳು ಇದುವರೆಗೂ ನೀಡಿಲ್ಲ. ರೈತರನ್ನು ಒಕ್ಕಲೆಬ್ಬಿಸುವುದಾಗಲಿ, ರೈತರಿಗೆ ಅನ್ಯಾಯವಾಗುವುದಾಗಲಿ ನಡೆದರೆ ಸರ್ಕಾರದ ವಿರುದ್ಧ ನಾವು ಸುಮ್ಮನಿರಲು ಸಾಧ್ಯವಿಲ್ಲ. ಮುಂದಿನ ದಿನಮಾನಗಳಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸಭೆ ಕರೆದು ರೈತರೊಡನೆ ಚರ್ಚಿಸಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.