ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮಂಗಳವಾರದಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಹಂತ ತಲುಪಿದೆ. ಎಲ್ಲರೂ ಸೇರಿ ಒಟ್ಟಾಗಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವಂತೆ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮಂಗಳವಾರದಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಹಂತ ತಲುಪಿದೆ. ಎಲ್ಲರೂ ಸೇರಿ ಒಟ್ಟಾಗಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವಂತೆ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಕರೆ ನೀಡಿದರು.

ನಗರದ ಮಾರಿಕಾಂಬ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೋಟೆ ಮಾರಿಕಾಂಬ ದೇವಿಯ ಜಾತ್ರೆಗೆ ಸರ್ವಸಿದ್ಧತೆಗಳು ಪೂರ್ಣಹಂತ ತಲುಪಿವೆ. ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಗಾಂಧಿಬಜಾರಿನ ತವರು ಮನೆಯಲ್ಲಿ ಸಾಪ್ರದಾಯಕ ಪೂಜೆಗಳೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು. ಅಂದು ರಾತ್ರಿ ಮೆರವಣಿಗೆಯ ಮೂಲಕ ಮಾರಿ ಗದ್ದುಗೆಗೆ ಅಮ್ಮನವರನ್ನು ಪ್ರತಿಷ್ಠಾಪಿಸಲಾಗುವುದು. ಬುಧವಾರ ಬೆಳಗ್ಗೆ 5 ಗಂಟೆಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಗಾಂಧಿಬಜಾರ್ ಮತ್ತು ಅಮ್ಮನ ಗದ್ದುಗೆ ಎರಡೂ ಸ್ಥಳಗಳಲ್ಲಿಯೂ ಅಮ್ಮನ ದರ್ಶನ ಪಡೆಯಲು ಲಕ್ಷಾಂತರ ಜನರು ಆಗಮಿಸುವುದರಿಂದ ಯಾವುದೇ ತೊಂದರೆಯಾಗದಂತೆ ಎಲ್ಲರಿಗೂ ಅಮ್ಮನ ದರ್ಶನ ಆಗುವಂತೆ ನೋಡಿಕೊಳ್ಳಲಾಗುವುದು. ವಿಶೇಷ ಚೇತನರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕವಾಗಿ ಈ ಬಾರಿ ಎರಡು ಸಾಲುಗಳನ್ನು ನಿರ್ಮಿಸಲಾಗಿದೆ. ಬ್ಯಾರಿಕೇಡ್‌ನ್ನು ಬಳಸಲಾಗುತ್ತದೆ. ವಿಶೇಷ ದರ್ಶನಕ್ಕೆ 200 ರು. ಮತ್ತು 500 ರು. ಟಿಕೆಟ್ ದರ ನಿಗದಿಪಡಿಸಲಾಗಿದೆ. ಈ ಟಿಕೆಟ್‌ಗಳು ಗಾಂಧಿಬಜಾರಿನ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಕಾಳಿಕಾ ದೇವಿಯ ಮೂರ್ತಿಯ ಮುಂಭಾಗದಲ್ಲಿ ದೊರೆಯಲಿದೆ ಎಂದರು.

ವಾಸವಿ ಯುವಕ ಸಂಘದ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಪಾನಕ, ಮಜ್ಜಿಗೆ ವ್ಯವಸ್ಥೆಯನ್ನು ಮಾಡಿದ್ದಾರೆ. ಜಾತ್ರೆಯ ಸುತ್ತಮುತ್ತ ಇರುವ ತ್ರಿಕೋನಾಕಾರದ ಜಾಗದಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ. ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಲಾಗಿದ್ದು, ಅದರ ಬದಲು ಸುಮಾರು 20 ಸಾವಿರ ಕೈಚೀಲದಿಂದ ಪ್ರಸಾದವನ್ನು ವಿತರಿಸಲಾಗುವುದು. ಅಂಗಡಿಗಳ ಮಾಲೀಕರಿಗೂ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮಾತನಾಡಿ, ಈ ಬಾರಿ ಜಾತ್ರೆಗೆ ವಿಶೇಷ ಅಲಂಕಾರವನ್ನು ಇಡೀ ನಗರದ ತುಂಬಾ ಮಾಡಲಾಗಿದೆ. ಸಾರ್ವಜನಿಕರಿಂದ ಅಲಂಕಾರಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರ ಸಹಕಾರದಲ್ಲಿ ಹೂವಿನ ಅಲಂಕಾರವನ್ನು ಮಾಡಲಾಗಿದೆ. ಇದಕ್ಕಾಗಿ ಸುಮಾರು 10 ಸಾವಿರ ಗುಲಾಬಿ ಹೂಗಳನ್ನು ಬಳಸಲಾಗಿದೆ ಎಂದರು.

ಪ್ರಮುಖರಾದ ಉಮಾಪತಿ, ಹನುಮಂತಪ್ಪ, ಎಸ್.ಸಿ.ಲೋಕೇಶ್, ಚಂದ್ರಶೇಖರ್ ಹಲವರು ಇದ್ದರು.

ಮಾರಿ ಗದ್ದುಗೆಗೆ ಫಲಪುಷ್ಪದ ವೈಭವ

ಹಿರಿಯ ಕಾಂಗ್ರೆಸ್ ಮುಖಂಡರು, ಡಿಸಿಸಿ ಬ್ಯಾಂಕ್ ನಿರ್ದೇಶಕರು ಆದ ಎಂ.ಶ್ರೀಕಾಂತ್ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬ ಗದ್ದುಗೆಗೆ ಫಲಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿಸಿದ್ದಾರೆ.

ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಕಳೆದ ಮೂರು ದಿನಗಳಿಂದ ಬೆಂಗಳೂರಿನಿಂದ ಆಗಮಿಸಿರುವ ಅಲಂಕಾರ ಸಂಸ್ಥೆ ‘ಶ್ರವಣಾ’ಶ್ ವೆಡ್ಡಿಂಗ್ ವರ್ಲ್ಡ್’ ಸಂಸ್ಥೆ 50 ಜನರಿಗೂ ಹೆಚ್ಚಿನ ಕುಶಲ ಕರ್ಮಿಗಳ ತಂಡ ಹಗಲು ರಾತ್ರಿ ಗದ್ದುಗೆ ಅಲಂಕಾರ ಕೆಲಸದಲ್ಲಿ ತೊಡಗಿದ್ದಾರೆ. ಆರರಿಂದ ಏಳು ಲೋಡು ಕಲ್ಲಂಗಡಿ, ಚೈನಾಹಣ್ಣು, ಕಬ್ಬು, ಮೂಸಂಬೆ ಸೇರಿದಂತೆ ಟನ್ ಗಟ್ಟಲೆ ಹೂವಿನ್ನು ಅಲಂಕಾರಕ್ಕೆ ಬಳಸುತ್ತಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಮಾರಿಕಾಂಬ ಜಾತ್ರೆಯ ವೈಭವಕ್ಕೆ ಇನ್ನಷ್ಟು ಅಭೂತಪೂರ್ವ ಮೆರಗು ತರಲಿದೆ.

ಜಾತ್ರೆಯುದ್ದಕ್ಕೂ ಸಿಸಿ ಕ್ಯಾಮೆರಾ ಕಣ್ಗಾವಲು

ಈ ಬಾರಿ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಈ ವರ್ಷ ಅತೀ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಗುಪ್ತಚರ ಇಲಾಖೆಯಿಂದಲೂ ತಿಳಿದು ಬಂದಿದೆ. ಶಾಂತಿ-ಸುವ್ಯವಸ್ಥೆ ಕಾಪಾಡಲು ಅಗತ್ಯಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಜಾತ್ರೆಯ ನಡೆಯುವ ಸುತ್ತಮುತ್ತ ಎಲ್ಲಡೆ ಸಿಸಿ ಕ್ಯಾಮೇರಾಗಳನ್ನು ಅಳವಡಿಸಲಾಗಿದ್ದು, ಜಾತ್ರೆಯುದ್ದಕ್ಕೂ ಸಿಸಿ ಕ್ಯಾಮೆರಾ ಕಣ್ಗಾವಲು ಇರಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ತಿಳಿಸಿದರು.

ಜಾತ್ರೆ ನಡೆಯುವ ಗಾಂಧಿಬಜಾರಿನ ಕೋಟೆ ರಸ್ತೆ ಸುತ್ತಮುತ್ತಲ ವಾಹನ ಸಂಚಾರ ಮಾರ್ಗ ನಿಷೇಧಿಸಲಾಗಿದೆ. ಮತ್ತು ಮಾರ್ಗ ಬದಲಾವಣೆ ಮಾಡಲಾಗಿದ್ದು, ಸೈನ್ಸ್ ಮೈದಾನ, ಸೇಕ್ರೇಡ್ ಹಾರ್ಟ್ ಚರ್ಚ್, ಮಹಾನಗರ ಪಾಲಿಕೆ ಆವರಣಗಳಲ್ಲಿ ವಾಹನದ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.