ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತಾಲೂಕಿನ ಚಿಮ್ಮಡ ಗ್ರಾಮದ ಶ್ರೀಮಡ್ಡಿ ಪ್ರಭುಲಿಂಗೇಶ್ವರ ದೇವಸ್ಥಾನ ಬಳಿಯ ಶ್ರೀಪ್ರಭುಲಿಂಗೇಶ್ವರ ಇಂಟರ್‌ನ್ಯಾಶನಲ್ ಸ್ಕೂಲ್ ನೂತನ ಶಾಲಾ ಕಟ್ಟಡದ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಕದಿಯಲಾರದ, ಸುಂಕವಿಲ್ಲದ, ಪಾಲು ಮಾಡಲಾಗದ, ಭಾರ ರಹಿತ ಮತ್ತು ಭಾರ ಕಡಿತಗೊಳಿಸುವ, ಎಂದಿಗೂ ಕೊರತೆಯಾಗದೇ ವೃದ್ಧಿಯಾಗುವ ಜ್ಞಾನ ನಿಜವಾದ ಸಂಪತ್ತಾಗಿದ್ದು, ಜ್ಞಾನಿಯು ಲೋಕದಲ್ಲಿ ಸರ್ವತ್ರ ವಂದಿತನಾಗುತ್ತಾನೆ. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀ ಮಟ್ಟದಲ್ಲಿ ನಮ್ಮ ಗ್ರಾಮೀಣ ಮಕ್ಕಳೂ ಗುಣಮಟ್ಟದ ಮತ್ತು ಕೌಶಲಾಧಾರಿತ ಶಿಕ್ಷಣ ಹೊಂದಲೆಂಬ ಆಶಯದೊಡನೆ ಶಾಸಕ ಸಿದ್ದು ಸವದಿ ಮತ್ತವರ ತಂಡ ಆರಂಭಿಸಿರುವ ಶಿಕ್ಷಣ ಸಂಸ್ಥೆಯ ಸೇವೆಯನ್ನು ರೈತಾಪಿ ವರ್ಗ, ಬಡ ಪ್ರತಿಭಾವಂತರು, ಗ್ರಾಮೀಣ ಮಕ್ಕಳು ಪಡೆದು ಶ್ರೇಯಸ್ಸು ಹೊಂದಬೇಕು. ಕೇವಲ ಇಂಗ್ಲಿಷ್ ಶಿಕ್ಷಣ ಜೊತೆಗೆ ಸದ್ಗುಣ, ಸದಾಚಾರ, ಮೌಲ್ಯಗಳ ಜೊತೆಗೆ ಶಿಕ್ಷಣ ನೀಡುವ ನಮ್ಮ ಭಾರತೀಯ ಪರಂಪರೆಯ ಮೂಲ ನೆಲೆಗಟ್ಟಿನಲ್ಲಿ ಕಲಿಕೆ ಪೂರ್ಣಗೊಂಡು ಇಲ್ಲಿ ಕಲಿತ ದೇಶಪ್ರೇಮಿ ಮಗು ಅಗತ್ಯ ಬಿದ್ದಲ್ಲಿ ರೈತ, ಸೈನಿಕನಾಗಲು ಮುಂದಾಗುವ ಶಿಕ್ಷಣ ಕ್ರಮ ಅಳವಡಿಕೆಯಾಗಬೇಕು. ಅಂದಾಗ ಮಾತ್ರ ಸರ್ವಾಂಗೀಣ ಪ್ರಗತಿಯ ಶಿಕ್ಷಣವಾಗುತ್ತದೆಂದರು.
ಅಖಿಲ ಭಾರತೀಯ ಸಹ ಸಂಯೋಜಕ ಪ್ರಜ್ಞಾ ಪ್ರವಾಹದ ರಘುನಂದನಜೀ ಮಾತನಾಡಿ, ಪ್ರಾಚೀನ ಗುರುಕುಲ ಶಿಕ್ಷಣ ಪದ್ಧತಿ ನಶಿಸಿ, ಮೆಕಾಲೆ ಶಿಕ್ಷಣ ವ್ಯವಸ್ಥೆಯ ಕಾರಣಕ್ಕೆ ನಮ್ಮತನ ಇಲ್ಲವಾಗಿದೆ. ಇಂದು ಕೇವಲ ಶಿಕ್ಷಣ ಮಾರಾಟದ ವಸ್ತುವಾಗಿದೆ. ಶಿಕ್ಷಣ ದಾಸೋಹವಾಗುವತ್ತ ಬದಲಾಗಬೇಕು. ಭಾರತೀಯ ಪರಂಪರೆಯಲ್ಲಿ ವಿದ್ಯೆ ಮಾರಾಟ ನಿಷೇಧವಿದೆ ಉಚಿತ ಶಿಕ್ಷಣವನ್ನು ನೀಡುವತ್ತ ಸಂಸ್ಥೆ ಮುತುವರ್ಜಿ ವಹಿಸಬೇಕು. ಕೇವಲ ನೌಕರರನ್ನು ಸೃಷ್ಠಿಸುವ ಶಿಕ್ಷಣವಾಗದೇ ನೌಕರಿ ನೀಡುವ ಸಂಸ್ಥೆಗಳನ್ನು ಹುಟ್ಟುಹಾಕುವಂತಹ ಎದೆಗಾರಿಕೆ ಬೆಳೆಸುವ ಮತ್ತು ಜಗತ್ತಿನ ಎಲ್ಲ ಒಳ್ಳೆತನ ಶಿಕ್ಷಣ ಕ್ರಮದಲ್ಲಿ ಭಾರತೀಯ ಮೂಲತ್ವವನ್ನು ಮರೆಯದಂತಹ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕೆಂದರು. ಅಧ್ಯಕ್ಷತೆ ವಹಿಸಿ ಶಾಸಕ ಸಿದ್ದು ಸವದಿ, ಬಿಇಒ ಅಶೋಕ ಬಸವಣ್ಣವರ, ಹಿಪ್ಪೋ ಸಂಸ್ಥೆಯ ಉಮೇಶ ಮಲ್ಹೋತ್ರಾ ಮಾತನಾಡಿದರು.ವೇದಿಕೆಯಲ್ಲಿ ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ, ಸಾಧು ಮಹಾರಾಜ ಮಠದ ಜನಾರ್ಧನ ಮಹಾರಾಜರು, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಘುಂದನಜೀ, ಜಿ.ಎಸ್. ನ್ಯಾಮಗೌಡ, ಬಿಇಒ ಅಶೋಕ ಬಸವನ್ನವರ, ಬಿಆರ್‌ಸಿಒ ರಮೇಶ ಅವಟಿ, ಬಾಬಾಗೌಡ ಪಾಟೀಲ, ಬಾಲಚಂದ್ರ ನಂದೆಪ್ಪನವರ, ಲಲಿತಾ ರೆಡ್ಡಿ, ವಿಶ್ವನಾಥ ಸವದಿ, ವಿದ್ಯಾಧರ ಸವದಿ, ಪ್ರಾಚಾರ್ಯ ಥಾಮಸ್ ಉಪಸ್ಥಿತರಿದ್ದರು. ಲೀನಾ ಮತ್ತು ಸುಮಿತ್ರಾ ಪ್ರಾರ್ಥಿಸಿದರು. ವಿದ್ಯಾ, ವಿದ್ಯಾಧರ ಸವದಿ ದಂಪತಿ ಸ್ವಾಗತಿಸಿದರು. ಲೀಲಾ ಮುತ್ತೂರ ವಂದಿಸಿದರು.