ಇರುವುದು ಒಂದೂವರೆ ಎಕರೆ ಜಮೀನು; ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ಕುಟುಂಬ

KannadaprabhaNewsNetwork |  
Published : May 10, 2025, 01:00 AM IST
ಮಂಜುಳಾ1 | Kannada Prabha

ಸಾರಾಂಶ

ನಾವು ಜಾನುವಾರುಗಳನ್ನು ಬೇರೆಡೆಯಿಂದ ಖರೀದಿಸಿಲ್ಲ. ನಮ್ಮ ಹಸುಗಳು ಹೆಣ್ಣು ಕರು ಹಾಕಿದರೆ ಮನೆಯಲ್ಲಿ ಇಟ್ಟುಕೊಂಡು ಬೆಳೆಸುತ್ತೇವೆ. ಇದರಿಂದ ಎರಡರಿಂದ ಜಾನುವಾರುಗಳ ಸಂಖ್ಯೆ ಹತ್ತು ತಲುಪಿದೆ. ಗಂಡು ಕರುಗಳಾದರೆ ಮಾರಾಟ ಮಾಡುತ್ತೇವೆ. ಐದಾರು ಕುರಿಗಳನ್ನು ಸಾಕಾಣಿಕೆ ಮಾಡುತ್ತೇವೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಟಿ.ನರಸೀಪುರ ತಾಲೂಕು ಬೊಮ್ಮನಾಯಕನಹಳ್ಳಿಯ ಮಂಜುಳಾ ನಾಗಣ್ಣ ಅವರಿಗೆ ಇರುವುದು ಒಂದೂವರೆ ಎಕರೆ ಜಮೀನು. ಅದರಲ್ಲಿ ತೆಂಗು, ಅಡಿಕೆಯ ಜೊತೆಗೆ ರಾಸುಗಳಿಗೆ ಬೇಕಾದ ವಿವಿಧ ತಳಿಯ ಮೇವನ್ನು ಬೆಳೆಯುತ್ತಾ, ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.

ತೆಂಗು- 300, ಅಡಿಕೆ- 350 ಮರಗಳಿವೆ. ಇವುಗಳ ನಡುವೆಯೆ ಜಾನುವಾರುಗಳಿಗೆ ಬೇಕಾದ ಹುಲ್ಲು, ಜೋಳ ಮತ್ತಿತರ ಹಸಿರು ಮೇವನ್ನು ಬೆಳೆಯುತ್ತಾರೆ.

ಇವರ ಬಳಿ 10 ಹಸುಗಳಿವೆ. ಪ್ರತಿದಿನ ಸರಾಸರಿ 65 ಲೀಟರ್‌ ಹಾಲನ್ನು ಡೇರಿಗೆ ಪೂರೈಸುತ್ತಾರೆ. ಕೆಲವು ಹಸುಗಳು ಗರ್ಭ ಧರಿಸಿದಾಗ ಡೇರಿಗೆ ಪೂರೈಸುವ ಹಾಲಿನ ಪ್ರಮಾಣ 50 ಲೀಟರ್‌ ಆಗುತ್ತದೆ. ಏನೇ ಆದರೂ ತಿಂಗಳಿಗೆ ಹೈನುಗಾರಿಕೆಯಿಂದಲೇ 40 ಸಾವಿರ ರು. ಬರುತ್ತದೆ. ಹಲ್ಲು ಕಟಾವು ಯಂತ್ರ ಮತ್ತಿತರ ಆಧುನಿಕ ಯಂತ್ರೋಪಕರಣಗಳ ಬಳಕೆಯೂ ಇದೆ.

ಹೈನುಗಾರಿಕೆ ಕ್ಷೇತ್ರದ ಸಾಧನೆಗಾಗಿ 2024ರ ರೈತ ದಸರಾದಲ್ಲಿ ಮಂಜುಳಾ ಅವರನ್ನು ಸನ್ಮಾನಿಸಲಾಗಿದೆ. ನಾವು ನಮ್ಮ ಪಾಡಿಗೆ ಕೆಲಸ ಹೈನುಗಾರಿಕೆ ಮಾಡಿಕೊಂಡಿದ್ದೇವೆ. ಹೀಗಿರುವಾಗ ನಮ್ಮ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿತ್ತು. ಆಗ ತುಂಬಲ ಪಶುವೈದ್ಯ ಆಸ್ಪತ್ರೆಯ ಡಾ.ರಾಜೇಶ್‌ ಅವರು ಬಂದಿದ್ದರು. ಅವರು ನಮ್ಮ ಹೈನುಗಾರಿಕೆ ಚಟುವಟಿಕೆಗಳನ್ನು ಗಮನಿಸಿ, ವಿಡಿಯೋ ಮಾಡಿ. ಪಶುಪಾಲನಾ ಇಲಾಖೆಗೆ ಕಳುಹಿಸಿದ್ದರು. ಹಿರಿಯ ಅಧಿಕಾರಿಗಳು ಗಮನಿಸಿ, ರೈತ ದಸರಾದಲ್ಲಿ ಸನ್ಮಾನಿಸಿದರು. ಇಲ್ಲದಿದ್ದರೇ ಅದು ಆಗುತ್ತಿರಲಿಲ್ಲ. ಏಕೆಂದರೆ ನಾವು ಯಾವುದೇ ಪ್ರಚಾರ ಬಯಸುವುದಿಲ್ಲ. ಯಾರಿಗೂ ಹೇಳಲು ಹೋಗುವುದಿಲ್ಲ ಎನ್ನುತ್ತಾರೆ ಮಂಜುಳಾ.

ನಾವು ಜಾನುವಾರುಗಳನ್ನು ಬೇರೆಡೆಯಿಂದ ಖರೀದಿಸಿಲ್ಲ. ನಮ್ಮ ಹಸುಗಳು ಹೆಣ್ಣು ಕರು ಹಾಕಿದರೆ ಮನೆಯಲ್ಲಿ ಇಟ್ಟುಕೊಂಡು ಬೆಳೆಸುತ್ತೇವೆ. ಇದರಿಂದ ಎರಡರಿಂದ ಜಾನುವಾರುಗಳ ಸಂಖ್ಯೆ ಹತ್ತು ತಲುಪಿದೆ. ಗಂಡು ಕರುಗಳಾದರೆ ಮಾರಾಟ ಮಾಡುತ್ತೇವೆ. ಐದಾರು ಕುರಿಗಳನ್ನು ಸಾಕಾಣಿಕೆ ಮಾಡುತ್ತೇವೆ. ಆಗಾಗ ಟಗರುಗಳನ್ನು ಮಾರಾಟ ಮಾಡುತ್ತೇವೆ. ಕೋಳಿಗಳು ಮನೆ ಬಳಕೆಗೆ ಬೇಕಾಗುವಷ್ಟು ಸಾಕುತ್ತೇವೆ. ಜಾನುವಾರುಗಳಿಂದ ಸಾಕಷ್ಟು ಕೊಟ್ಟಿಗೆ ಗೊಬ್ಬರ ಉತ್ಪಾದನೆಯಾಗುತ್ತದೆ. ನಮ್ಮ ಜಮೀನಿಗೆ ಹಸಿರು ಮೇವು ಬೆಳೆಸಲು ಹಾಕುತ್ತೇವೆ. ಇನ್ನೂ ಹೆಚ್ಚುವರಿಯಾಗಿ ಉಳಿದರೆ ಮಾರಾಟ ಮಾಡುತ್ತೇವೆ. ಅದೇ ರೀತಿ ಹುಲ್ಲು ಕೂಡ ಹೆಚ್ಚುವರಿಯಾದರೆ ಬೇರೆಯವರಿಗೆ ಮಾರಾಟ ಮಾಡುತ್ತೇವೆ ಎಂದರು.

ನಮಗೆ ಖರ್ಚು- ವೆಚ್ಚ ಎಲ್ಲಾ ಕಳೆದು ವರ್ಷಕ್ಕೆ ನಾಲ್ಕೈದು ಲಕ್ಷ ರು. ನಿವ್ವಳ ಆದಾಯ ಬರುತ್ತಿದೆ ಎಂದು ತಿಳಿಸಿದರು.

ಸಂಪರ್ಕ ವಿಳಾಸಃ

ಮಂಜುಳಾ ಕೋಂ ನಾಗಣ್ಣ

ಬೊಮ್ಮನಾಯಕನಹಳ್ಳಿ

ಕಸಬಾ ಹೋಬಳಿ,

ಟಿ. ನರಸೀಪುರ ತಾಲೂಕು.

ಮೈಸೂರು ಜಿಲ್ಲೆ

ಮೊ.91640 31571

ನಮ್ಗೆ ಇರೋದು ಒಂದೂವರೆ ಎಕರೆ ಜಮೀನು. ಹೈನುಗಾರಿಕೆಯನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದೇವೆ. ಇದರಿಂದ ಜೀವನ ಚೆನ್ನಾಗಿ ಸಾಗುತ್ತಿದೆ. ಇರುವ ಒಬ್ಬಳೇ ಮಗಳು ಗೀತಾಂಜಲಿಯನ್ನು ಎಂಜಿನಿಯರಿಂಗ್‌ ಓದಿಸಿದ್ದೇವೆ.ಅವರು ಬೆಂಗಳೂರಿನ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಳಿಯ ಮೈಸೂರಿನ ಜೆ.ಪಿ.ನಗರದಲ್ಲಿ ಸ್ವಂತ ಉದ್ಯಮ ನಡೆಸುತ್ತಾರೆ.

- ಮಂಜುಳಾ, ಬೊಮ್ಮನಾಯಕನಹಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ