ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ಎಲ್ಲಾ ವರ್ಗದವರು ಮೀಸಲಾತಿ ಸೌಲಭ್ಯ ಪಡೆದುಕೊಂಡು ಆರ್ಥಿಕ ಪ್ರಗತಿಯನ್ನು ಹೊಂದಿದ್ದಾರೆ ಎಂದು ಬೆಂಗಳೂರು ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ಅರುಳ್ ಕುಮಾರ್ ತಿಳಿಸಿದರು. ತಾಲೂಕಿನ ಹುರುಳಿನಂಜನಪುರ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿ ನಡೆದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮದಿನಾಚರಣೆ ಮತ್ತು ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಮಹಿಳೆಯರಿಗೆ, ಕಾರ್ಮಿಕರ ಪರ ಹಕ್ಕು ತಂದರು, ನೀರಾವರಿ ಯೋಜನೆ, ಆರ್‌ಬಿಐ ಬ್ಯಾಂಕ್ ಸ್ಥಾಪಿಸಿದರು, ಅರ್ಥಶಾಸ್ತ್ರಜ್ಞರು, ರಾಜಕೀಯ ತಜ್ಞರಾಗಿದ್ದರು. ಅವರು ವಿಶ್ವಜ್ಞಾನಿಯಾಗಿದ್ದು, ವಿಶ್ವ ಸಂಸ್ಥೆಯಲ್ಲೂ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು. ಎಲ್ಲ ಹುದ್ದೆಗಳ ಹೊರಗುತ್ತಿಗೆ ಮಾಡಲಾಗಿದ್ದು ಹೊರಗುತ್ತಿಗೆಯಲ್ಲಿ ಮೀಸಲಾತಿ ಅನುಸರಿಸಲು ಅವಕಾಶ ಮಾಡಲಾಗಿದೆ ಎಂದರು.ಹುರುಳಿನಂಜನಪುರ ಕೆರೆ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ೨.೭೦ ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಅಂಬೇಡ್ಕರ್ ಪುತ್ಥಳಿನಿರ್ಮಾಣಕ್ಕೂ ಸಹಾಯ ಮಾಡಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದರು. ಡಿಜಿಟಲ್ ಯುಗದಲ್ಲಿ ವಿಫುಲ ಅವಕಾಶವಿದೆ. ಗ್ರಾಮದ ವಿದ್ಯಾರ್ಥಿಗಳು, ಯುವಜನತೆ ನಿರಂತರವಾಗಿ ಕಠಿಣ ಶ್ರಮ ಹಾಕಿ ಓದಿದರೆ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದರು.
ನಂಜನಗೂಡು ನಗರಸಭೆ ಪೌರಾಯುಕ್ತ ವಿಜಯ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಹುರುಳಿನಂಜನಪುರ ಕುಗ್ರಾಮವಾಗಿದ್ದರೂ ಗ್ರಾಮದ ಕೀರ್ತಿ ದೊಡ್ಡದು. ಇಲ್ಲಿ ಒಳ್ಳೆಯ ವಿದ್ಯಾರ್ಥಿಗಳಿದ್ದು, ಸರ್ಕಾರಿ ನೌಕರಾಗಿದ್ದಾರೆ. ಜಿಲ್ಲೆಯಿಂದ ಹಿಡಿದು ಬೆಂಗಳೂರು ವಿಧಾನಸೌಧವರೆಗೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಭೋಗಾಪುರ ವಸತಿಯುಕ್ತ ಪದವಿ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜು, ಮೈಸೂರಿನ ಯುವ ರಾಜ ಕಾಲೇಜಿನ ಪರಿಸರ ವಿಜ್ಞಾನ ಮತ್ತು ಭೂಗರ್ಭಶಾಸ್ತ್ರದ ಮುಖ್ಯಸ್ಥ ಪ್ರೊ.ಡಾ.ಎಸ್.ಸುರೇಶ್ ಮುಖ್ಯಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಕಲಾವತಿ ನಂಜಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಶಿವಕುಮಾರ್, ಯಜಮಾನರಾದ ನಾಗರಾಜು, ಸಿದ್ದಯ್ಯ, ಬಸವಣ್ಣ, ಶಿವಣ್ಣ, ವಕೀಲರಾದ ಮಂಜು, ಕೆಇಬಿ ಶಿವಣ್ಣ, ಶಿಕ್ಷಕ ಕೃಷ್ಣಮೂರ್ತಿ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ಸುರೇಶ್ ಇತರರು ಹಾಜರಿದ್ದರು.