ಸೊರಬ: ತಮ್ಮ ರಾಜಕೀಯ ಜೀವನದ ಹೆಜ್ಜೆ ಗುರುತಿನಲ್ಲಿ ಹೊಸದನ್ನು ಕಂಡಿದ್ದೆನೆಂದರೆ ಅದು ಭೂ ಹೋರಾಟ ಮತ್ತು ರೈತರಿಗೆ ಭೂಮಿ ಹಕ್ಕು ಕೊಡಿಸಿದ ಕ್ಷಣಗಳು. ಹಾಗಾಗಿ ರೈತ ಪರವಾಗಿ ಹೋರಾಟ ನಡೆಸಿದ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.ತಾಲೂಕಿನ ಕಾಸ್ವಾಡಿಕೊಪ್ಪ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಭೂಮಿಯ ಹೋರಾಟಕ್ಕೆ ಮುನ್ನುಡಿ ಬರೆದದ್ದು ಸೊರಬ ಹಾಗೂ ಸಾಗರ ತಾಲೂಕು. ಕಾಸ್ವಾಡಿಕೊಪ್ಪ ಗ್ರಾಮದಲ್ಲಿ ಸನ್ಮಾನ ಸ್ವೀಕರಿಸಿದ್ದು ಎದೆಯುಬ್ಬಿ ಬಂದಿದೆ. ನಮ್ಮೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರೂ ಕೂಡ ಇಚ್ಛಾಶಕ್ತಿ ಮೆರೆದಿದ್ದರಿಂದ ಗೇಣಿದಾರರಿಗೆ ಭೂಮಿ ಸಿಗುವಂತಾಯಿತು ಎಂದ ಅವರು, ದೇವರಾಜ ಅರಸು ಅವರು ಭೂಮಿ ಹಕ್ಕು ಕಾನೂನು ರೂಪಿಸಿದ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಗೇಣಿ ರೈತರಿಗೆ ಭೂಮಿ ಸಿಕ್ಕಿದೆ ಎಂದರು.ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಜನರಿಗೆ ಭೂಭಾಗ್ಯ ಕಲ್ಪಿಸುವ ಕೆಲಸದ ಮುಂದೆ ಇನ್ಯಾವ ಕೆಲಸವೂ ಸಮಾನವಾಗಲಾರದು. ಸಾಮಾನ್ಯ ಜನರು ಭೂಮಿ ಭಾಗ್ಯ ಪಡೆಯಲು ಕಾಗೋಡು ತಿಮ್ಮಪ್ಪ ಅವರ ಕೊಡುಗೆ ಅನನ್ಯ. ಜನರು ಮೌಢ್ಯಗಳಿಂದ ಹೊರಬಂದು ಮೌಲ್ಯಯುತ ಜೀವನ ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಈ ಮೂಲಕ ಹಿರಿಯರ ಚಿಂತನೆ, ಶ್ರಮವನ್ನು ಸಾರ್ಥಕಗೊಳಿಸಬೇಕು ಎಂದರು.ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಜಾತ್‌ಕುಮಾರ್, ಗ್ರಾಮಸ್ಥರಾದ ನಾಗಪ್ಪ, ಮುತ್ತಪ್ಪ, ಪತ್ರಕರ್ತ ಡಾ.ಎಸ್.ಎಂ.ನೀಲೇಶ್ ಮಾತನಾಡಿದರು.
ಗ್ರಾಮ ಸಮಿತಿ ಅಧ್ಯಕ್ಷ ನಿರಂಜನ್, ಸಮಾಜ ಕಾರ್ಯಕರ್ತೆ ಶೇಖರಮ್ಮ, ಮಾವಲಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಪೊಲೀಸ್ ಇಲಾಖೆಯ ಜಯೇಂದ್ರ ಕಾಸವಾಡಿಕೊಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶಾರದಾ ಚಂದ್ರಕಾಂತ್, ಮುಖಂಡರಾದ ರುದ್ರಪ್ಪ, ಮಂಜುನಾಥ್ ಶಿಗ್ಗಾ, ನೀಲಕಂಠಪ್ಪ, ಅಂಗನವಾಡಿ ಕಾರ್ಯಕರ್ತೆ ಕವಿತಾ ಸೇರಿದಂತೆ ಗ್ರಾಮಸ್ಥರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳಿದ್ದರು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.