ದೇಶ, ಧರ್ಮ ಯಾವುದಾದರೂ ಮಾನವೀಯತೆ ಮುಖ್ಯ

KannadaprabhaNewsNetwork |  
Published : Feb 08, 2025, 12:31 AM IST
ಕೆ ಕೆ ಪಿ ಸುದ್ದಿ 01:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಗರದ ಹೊರವಲಯದಲ್ಲಿ ಆರಂಭಿಸಿರುವ ನೂತನ ರೇಷ್ಮೆ ನೂಲು ಕಾರ್ಖಾನೆಯ ಶುಭಾರಂಭದ ವೇಳೆ ಗೋಮಾತೆಯ ಪೂಜೆ ನೆರವೇರಿಸಿದರು.  | Kannada Prabha

ಸಾರಾಂಶ

ಕನಕಪುರ: ದೇಶ, ಧರ್ಮ ಯಾವುದೇ ಆಗಿರಲಿ ಮೊದಲು ಮಾನವೀಯತೆ ಮುಖ್ಯ, ಅಕ್ರಮ ನೆಲಸಿಗರನ್ನು ಅಮೆರಿಕಾ ಸರ್ಕಾರ ಸರಪಳಿ ಕಟ್ಟಿ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕನಕಪುರ: ದೇಶ, ಧರ್ಮ ಯಾವುದೇ ಆಗಿರಲಿ ಮೊದಲು ಮಾನವೀಯತೆ ಮುಖ್ಯ, ಅಕ್ರಮ ನೆಲಸಿಗರನ್ನು ಅಮೆರಿಕಾ ಸರ್ಕಾರ ಸರಪಳಿ ಕಟ್ಟಿ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದ ಹೊರ ವಲಯದಲ್ಲಿ ಮಾಜಿ ಸಂಸದ ಹಾಗೂ ಸಹೋದರ ಡಿ.ಕೆ.ಸುರೇಶ್ ಒಡೆತನದ ರೇಷ್ಮೆ ನೂಲು ತೆಗೆಯುವ ಘಟಕದ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಭಾಗಿಯಾಗಿ ಗೋಮಾತೆಯ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅಕ್ರಮವಾಗಿ ನೆಲೆಸಿರುವರೆಂಬ ಕಾರಣದಿಂದ ಕೆಲವು ಭಾರತೀಯರನ್ನು ಅಮೆರಿಕಾ ಸರ್ಕಾರ ಕೈ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಭಾರತಕ್ಕೆ ವಾಪಸ್ ಕಳಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ಹಿಂದೆ ಕೂಲಿ ಕಾರ್ಮಿಕರಿಗೆ ಸರಪಳಿ ಹಾಕಿ ಕಟ್ಟುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಅದನ್ನು ತಪ್ಪಿಸಲು ಸರ್ಕಾರ ಕಾನೂನು ತಂದು ಶಿಕ್ಷೆ ನೀಡಿದೆ. ಆದರೆ ಮುಂದುವರಿದ ದೇಶಗಳಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ರಮವಾಗಿ ಅವರ ದೇಶದಲ್ಲಿ ನೆಲೆಸಿದ್ದರೆ ಅದಕ್ಕೆ ಯಾವ ಶಿಕ್ಷೆ ನೀಡಬೇಕೋ ಅದನ್ನು ನೀಡಲಿ, ಅದನ್ನು ಬಿಟ್ಟು ಈ ರೀತಿ ಕೈದಿಗಳಿಗೆ ಹಾಕಿದಂತೆ ಸರಪಳಿ ಹಾಕಿರುವುದನ್ನು ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ಇದು ಮಾನವ ಕುಲಕ್ಕೆ ತೋರಿದ ಅಗೌರವ. ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದರು.

ಗ್ಯಾರಂಟಿ ಹೊರೆಯಲ್ಲ, ಜನರ ಶಕ್ತಿ:

ರಾಜ್ಯ ಸರ್ಕಾರ ಗ್ಯಾರಂಟಿ ಹೊರೆಯ ಮಧ್ಯೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಗ್ಯಾರಂಟಿ ಯೋಜನೆಗಳು ಆರ್ಥಿಕ ಹೊರೆ ಎಂದು ಹೇಳಿದ್ದು ಯಾರು? ಇದು ಜನರ ಬದುಕಿಗೆ ನಮ್ಮ ಸರ್ಕಾರ ಕೊಟ್ಟಿರುವ ಶಕ್ತಿ, ಜನರ ಆರ್ಥಿಕ ಹೊರೆ ತಪ್ಪಿಸಲು ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಎಲ್ಲಾ ವರ್ಗದವರಿಗೂ ಆರ್ಥಿಕ ಶಕ್ತಿ ತುಂಬಲು ಪ್ರತಿ ಕ್ಷೇತ್ರಕ್ಕೆ 250 ಕೋಟಿ ಹಣ ನೀಡಲಾಗುತ್ತಿದೆ. ಈ ಯೋಜನೆಗಳಿಗಾಗಿ 56 ಸಾವಿರ ಕೋಟಿ ಹಣ ನೀಡಲಾಗಿದೆ. ಜೀವ ಇದ್ದರೆ ಜೀವನ. ನಮ್ಮ ಸರ್ಕಾರ ಹಸಿದವರು, ಬಡವರ ಬಗ್ಗೆ ಆಲೋಚಿಸಿ ಈ ಕಾರ್ಯಕ್ರಮ ರೂಪಿಸಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ, 2-3 ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು ಎಂದರು.

ಕೇಂದ್ರ ಸರ್ಕಾರದ ಬಜೆಟ್ ರಾಜ್ಯದ ಪಾಲಿಗೆ ಖಾಲಿ ಬುಟ್ಟಿ. ದೇವೇಗೌಡರು, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಮಂತ್ರಿಗಳು, ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚಕಾರ ಎತ್ತಲಿಲ್ಲ. ನಮ್ಮ ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಆದರೂ ಮಾತು ಮಾತ್ರ ದೊಡ್ಡದಾಗಿ ಆಡುತ್ತಾರೆ. ನಮ್ಮನ್ನು ಟೀಕಿಸಿದರೆ ಅವರಿಗೆ ಆನಂದ. ನಮ್ಮನ್ನು ಟೀಕಿಸಿಯಾದರೂ ಅವರು ಸಂತೋಷ ಪಡುತ್ತಾರಲ್ಲಾ ಅದೇ ನಮಗೆ ತೃಪ್ತಿ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಭೇಟಿ ಮಾಡಲು ಅವರು ವಿತ್ತ ಸಚಿವರೇ:

ಕೇಂದ್ರದಿಂದ ಅನುದಾನ ತರಲು ರಾಜ್ಯದ ಸಚಿವರು ನಮ್ಮ ಜತೆ ಚರ್ಚೆ ಮಾಡುವುದಿಲ್ಲ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿ, ಮಿಸ್ಟರ್ ಕುಮಾರಸ್ವಾಮಿ ನಿಮಗೆ ಜವಾಬ್ದಾರಿ ಇಲ್ಲವೇ? ಸಚಿವರು ನಿಮ್ಮ ಜತೆ ಚರ್ಚೆ ಮಾಡಬೇಕೆ? ಈ ರಾಜ್ಯಕ್ಕೆ ಜವಾಬ್ದಾರಿ ನೀಡಬೇಕು ಎಂದು ನಿಮಗೆ ಜವಾಬ್ದಾರಿ ಇಲ್ಲವೇ? ನಾವು ಪ್ರಧಾನಿ ಹಾಗೂ ಹಣಕಾಸು ಸಚಿವೆ ಹಾಗೂ ನಮಗೆ ಸಂಬಂಧಿಸಿದ ಇಲಾಖೆಯ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಕುಮಾರಸ್ವಾಮಿ ಭೇಟಿ ಮಾಡಲು ಅವರು ವಿತ್ತ ಸಚಿವರಲ್ಲ, ಅವರಿಗೆ ರಾಜ್ಯದ ಬಗ್ಗೆ ಆಸಕ್ತಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ಅವರಿಗೆ ಅವರ ವೈಯಕ್ತಿಕ ಆಸಕ್ತಿ ಹೊರತಾಗಿ ರಾಜ್ಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲ, ರಾಜ್ಯ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಅವರಲ್ಲಿ ನಾನು ಆಸಕ್ತಿ ನೋಡಿಲ್ಲ ಎಂದು ತಿರುಗೇಟು ನೀಡಿದರು.

ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ನನ್ನನ್ನು ಭೇಟಿ ಮಾಡುತ್ತಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ನನ್ನನ್ನು ಭೇಟಿ ಮಾಡುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಕೇಳಿ " ಎಂದರು. ನವೆಂಬರ್ ನಲ್ಲಿ ಸಿಎಂ ಬದಲಾವಣೆ ಖಚಿತ ಎಂಬ ಅಶೋಕ್ ಹೇಳಿಕೆ ಬಗ್ಗೆ ಉತ್ತರಿಸಿ ಅಶೋಕ್ ಜ್ಯೋತಿಷ್ಯ ಕಲಿಯುತ್ತಿರುವ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ನನಗೂ ಜ್ಯೋತಿಷ್ಯ ಕೇಳುವ ಚಟ ಇದ್ದು ಅವರು ಸಮಯ ನೀಡಿದಾಗ ನಾನು ಹೋಗಿ ಶಾಸ್ತ್ರ ಕೇಳುತ್ತೇನೆ " ಎಂದು ವ್ಯಂಗ್ಯವಾಡಿದರು.

ಯಾರ ಹಣೆಯಲ್ಲಿ ಏನು ಬರೆದಿದೆ ಯಾರಿಗೆ ಗೊತ್ತು:

ಡಿ.ಕೆ.ಸುರೇಶ್ ಅವರು ಬಮೂಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ, ಅವೆಲ್ಲಾ ಸುದ್ದಿ ನಾನು ಮುಂಚೆಯಿಂದಲೂ ಹಸು ಕಟ್ಟಿದ್ದೆ, ನಮ್ಮ ತಾಯಿ ಹಾಲು ಹಾಕುತ್ತಿದ್ದರು, ಹಾಲು ಹಾಕಿದಾಕ್ಷಣ ಚುನಾವಣೆಯಲ್ಲಿ ಸ್ಪರ್ಧಿಸಬೇಕಾ? ಅದರ ಜತೆಗೆ ಹತ್ತಾರು ಎಕರೆ ರೇಷ್ಮೆ, ನೂರಾರು ಎಕರೆ ವ್ಯವಸಾಯ ಮಾಡುತ್ತಿದ್ದೇವೆ. ಕನಕಪುರದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿ ಕೊಡಲು, ಇಲ್ಲಿನ ರೇಷ್ಮೆಯನ್ನು ಬಳಸಲು ನಮ್ಮ ಮಾವ ಅವರ ರೀಲಿಂಗ್ ಕಾರ್ಖಾನೆ ಮಾಡಲು ಮುಂದಾಗಿದ್ದು, ಯಾರ ಹಣೆಯಲ್ಲಿ ಏನು ಬರೆದಿದೆಯೋ ಯಾರಿಗೆ ಗೊತ್ತು? ಈ ಬಗ್ಗೆ ಚರ್ಚೆ ಮಾಡಿದರೆ ಮಾಡಿ ಕೊಳ್ಳಲಿ, ನೆಮ್ಮದಿ ಕೆಡಿಸಿಕೊಳ್ಳಲಿ ಎಂದು ಹೇಳಿದರು.

ಸಮೀಕ್ಷೆ ಮಾಡಿ ವಿಮಾನ ನಿಲ್ದಾಣ ಜಾಗ ತೀರ್ಮಾನ:

2ನೇ ಏರ್ರ್ಪೋರ್ಟ್ ಸ್ಥಳದ ಚರ್ಚೆ ಬಗ್ಗೆ ಕೇಳಿದಾಗ, ವಿಮಾನ ನಿಲ್ದಾಣ ನಿರ್ಮಾಣದ ಜಾಗ ನಿಗದಿ ಮಾಡುವುದು ನಮ್ಮ ಕೈಯಲ್ಲಿ ಇಲ್ಲ, ನಾವು ಸಲಹೆ ನೀಡಬಹುದು. ಅಂತಿಮವಾಗಿ ವಿಮಾನಯಾನ ಪ್ರಾಧಿಕಾರ ತೀರ್ಮಾನ ಮಾಡುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಾಗ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 2034ರವರೆಗೂ ನಾವು ಮತ್ತೊಂದು ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲು ಸಾಧ್ಯವಿಲ್ಲ. ಆದರೆ ನಾವು ಸಿದ್ಧತೆ ಮಾಡಿಕೊಳ್ಳಬಹುದು. ಈ ಸಿದ್ಧತೆಗಾಗಿ 3-4 ಜಾಗಗಳ ಪ್ರಸ್ತಾವನೆ ನೀಡಿದ್ದೇವೆ. ದಕ್ಷಿಣ, ಉತ್ತರ ಪೂರ್ವ ಭಾಗದಲ್ಲಿ ಸಲಹೆ ನೀಡಿದ್ದೇವೆ. ವಿಮಾನ ನಿಲ್ದಾಣ ತಾಂತ್ರಿಕ ವಿಚಾರವಾಗಿದ್ದು, ಸಮೀಕ್ಷೆ ಮಾಡಿ ತೀರ್ಮಾನ ಮಾಡಲಾಗುವುದು " ಎಂದು ತಿಳಿಸಿದರು.

ಬಾಕ್ಸ್‌..............

ಬೆಂಗಳೂರಿನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿರುವೆ:

ಬೆಂಗಳೂರಿಗೆ ನೀರು ಕೊಡಿಸುವುದೇ ನನ್ನ ಕೊನೆ ಆಸೆ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಸಚಿವನಾದ ಬಳಿಕ ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ಮಂಜೂರು ಮಾಡಿದ್ದೇನೆ. ಆ ಮೂಲಕ ಬೆಂಗಳೂರಿನ ಇತಿಹಾಸದಲ್ಲಿ ಈ ಡಿ.ಕೆ. ಶಿವಕುಮಾರ್ ಹೊಸ ಅಧ್ಯಾಯ ಬರೆದಿದ್ದೇನೆ. ಬಿಜೆಪಿ ಹಾಗೂ ದಳದ ಸರ್ಕಾರಗಳು ಈ ತೀರ್ಮಾನ ಮಾಡಿರಲಿಲ್ಲ. ನಿಂತು ಹೋಗಿದ್ದ 5ನೇ ಹಂತದ ಯೋಜನೆಗೆ ಮತ್ತೆ ಚಾಲನೆ ನೀಡಿ ತೊರೆಕಾಡನಹಳ್ಳಿಯಿಂದ ನೀರು ತರಲಾಗಿದೆ. ಸುಮಾರು 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದೆ. ಈ ವರ್ಷದ ಕೊನೆ ವೇಳೆಗೆ ತುಮಕೂರಿನವರೆಗೂ ಎತ್ತಿನ ಹೊಳೆ ನೀರನ್ನು ಹರಿಸಲಾಗುವುದು ಎಂದರು.

ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಟೀಕೆ ಮಾಡಿದರು. ಮೋದಿ ಅವರ ಕೈ ಹಿಡಿದು ಈ ಯೋಜನೆಗೆ ಸಹಿ ಹಾಕಿಸುವುದಾಗಿ ಹೇಳಿದ್ದರು. ಆದರೂ ಈವರೆಗೂ ಯಾಕೆ ಸಹಿ ಹಾಕಿಸಿಲ್ಲ? ಕೇವಲ ಪ್ರಚಾರಕ್ಕೆ ಮಾತನಾಡುವುದಲ್ಲ, ರಾಜಕೀಯ ಬದ್ಧತೆ ಇರಬೇಕು. ಅವರ ಅನುಭವ ಹಾಗೂ ಹಿರಿತನವನ್ನು ನಾವು ಗೌರವಿಸುತ್ತೇವೆ. ಆ ಗೌರವವನ್ನು ಅವರು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಬಾಕ್ಸ್‌.............

ಸಿಬಿಐ ತನಿಖೆಗೆ ಯಾಕೆ ನೀಡಬೇಕು?

ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ಹೈಕೋರ್ಟ್ ಇಂದು ತೀರ್ಪು ನೀಡಲಿರುವ ಬಗ್ಗೆ ಕೇಳಿದಾಗ, "ಯಾವ ಕಾರಣಕ್ಕೆ ಸಿಬಿಐ ತನಿಖೆಗೆ ನೀಡಬೇಕು? ಲೋಕಾಯುಕ್ತ, ಇಡಿ ತನಿಖೆ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಮೂರನೇ ಸಂಸ್ಥೆ ತನಿಖೆ ಮಾಡಲು ಯಾಕೆ ನೀಡುತ್ತಾರೆ? ಈ ರೀತಿ ನೀಡಲು ಅವಕಾಶ ಇಲ್ಲ. ಈ ಬಗ್ಗೆ ಅನೇಕ ನ್ಯಾಯಾಲಯದ ತೀರ್ಪುಗಳಿವೆ. ನನ್ನ ವಿರುದ್ಧವೂ ಇದೇ ರೀತಿ ಕೇಸ್ ದಾಖಲಿಸಿರುವುದರ ವಿರುದ್ಧ ನಾನು ಬಡಿದಾಡುತ್ತಿದ್ದೇನೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

(ಫೋಟೋ ಕ್ಯಾಫ್ಷನ್‌)

ಕನಕಪುರದ ಹೊರವಲಯದಲ್ಲಿ ಆರಂಭಿಸಿರುವ ನೂತನ ರೇಷ್ಮೆ ನೂಲು ಕಾರ್ಖಾನೆಯ ಶುಭಾರಂಭಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗೋಮಾತೆಯ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌