- ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಡಿತರ ಚೀಟಿಯಲ್ಲಿನ ಹೆಸರು ತಿದ್ದುಪಡಿ, ಹೆಸರು ಸೇರ್ಪಡೆಗೆ ಈ ತಿಂಗಳ ಅಂತ್ಯದವರೆಗೆ ಅವಕಾಶವಿದೆ ಎಂದು ಆಹಾರ ಇಲಾಖೆ ಅಧಿಕಾರಿ ಗಣಪತಿ ತಿಳಿಸಿದರು.
ಮಂಗಳವಾರ ತಾಪಂ ಸಾಮರ್ಥ್ಯಸೌಧದಲ್ಲಿ ಕು.ಚಂದ್ರಮ್ಮ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ಕಲ್ಪಿಸಿಲ್ಲ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವಂತೆ ಸರ್ಕಾರದಿಂದ ಆದೇಶವಾಗಿದೆ. ಸರ್ಕಾರದಿಂದ ವಿತರಿಸಿದ ಅಕ್ಕಿಯನ್ನು ಮಾರಾಟ ಮಾಡಿದರೆ ಅಂತಹ ಫಲಾನುಭವಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವ ಅವಕಾಶ ಇದೆ. ಅಂತಹವರ ಕಾರ್ಡುಗಳನ್ನು ರದ್ದುಗೊಳಿಸಲಾಗುವುದು. ಕೇಂದ್ರದಿಂದ 2702 ಕ್ವಿಂಟಾಲ್ ಅಕ್ಕಿ, ರಾಜ್ಯದಿಂದ 2158 ಕ್ವಿಂಟಾಲ್ ಅಕ್ಕಿ ವಿತರಣೆಯಾಗಿದೆ. ತಾಲೂಕಿನಲ್ಲಿ ಒಟ್ಟು 12,414 ಬಿಪಿಎಲ್, 2143 ಅಂತ್ಯೋದಯ ಕಾರ್ಡುದಾರರಿದ್ದು ಎಲ್ಲರಿಗೂ ಅಕ್ಕಿ ವಿತರಿಸಲಾಗಿದೆ. ಹೊಸ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದಲ್ಲಿ ಹೊಸ ಕಾರ್ಡು ಮಾಡಿಸು ವವರು ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ ನೀಡಬೇಕೆಂದು ಸಭೆಗೆ ವಿವರಿಸಿದರು.ಸಮಿತಿ ಸದಸ್ಯ ನಿತ್ಯಾನಂದ ಮಾತನಾಡಿ, ಶೃಂಗೇರಿ ಕೆ.ಎಸ್.ಆರ್.ಟಿ.ಸಿ ಡಿಪೋ ಕಾಮಗಾರಿ ಯಾವ ಹಂತದಲ್ಲಿದೆ, ಯಾವಾಗ ಪೂರ್ಣಗೊಳ್ಳಲಿದೆ ಎಂದು ಚಿಕ್ಕಮಗಳೂರು ಡಿಪೋ ಅಧಿಕಾರಿಗಳಿಗೆ ಪ್ರಶ್ನಿಸಿದರು. ಡಿಪೋ ಸಂಚಾರಿ ನಿಯಂತ್ರಣಾಧಿಕಾರಿ ವಸಂತ್‌ಕುಮಾರ್ ಮಾತನಾಡಿ, ಮಳೆ ಕಡಿಮೆ ಆದ ಕೂಡಲೇ ತ್ವರಿತವಾಗಿ ಕೆಲಸನಡೆಸಿ ಇನ್ನು 4- 5 ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ತಿಳಿಸಿದ್ದಾರೆ. ಡಿಪೋ ಪ್ರಾರಂಭವಾದರೆ 50 ಮಿನಿ ಸರ್ಕಾರಿ ಬಸ್ಸುಗಳನ್ನು ನೀಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಕಳೆದ ಸಭೆಯಲ್ಲಿ ಕೋರಿದ್ದಂತೆ ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು, ಎನ್.ಆರ್.ಪುರ ಮಾರ್ಗಕ್ಕೆ ಶೀಘ್ರದಲ್ಲೇ ಬಸ್ಸು ಸಂಚರಿಸಲಿದೆ. ಚಿಕ್ಕಮಗಳೂರಿನಿಂದ ಎನ್.ಆರ್.ಪುರಕ್ಕೆ ಬಂದ ಬಸ್ಸು, ಮತ್ತೆ ಪುನಃ ಚಿಕ್ಕಮಗಳೂರಿಗೆ ಹೋಗದೆ, ಬಾಳೆಹೊನ್ನೂರಿಗೆ ಸಂಚರಿಸಲಿದೆ. ನಂತರ ಸಂಜೆ 4.30 ರ ವೇಳೆಗೆ ಚಿಕ್ಕಮಗಳೂರಿಗೆ ತೆರಳಲಿದೆ. ಶಾಲಾ ಮಕ್ಕಳಿಗೆ ಅನುಕೂಲ ವಾಗುವಂತಹ ಸಮಯಕ್ಕೆ ಬಸ್ಸು ಸಂಚರಿಸಲಿದೆ ಎಂದು ತಿಳಿಸಿದರು. ಜುಲೈ ತಿಂಗಳಲ್ಲಿ ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ಭಾಗದಲ್ಲಿ 10,06,278 ಜನ ಮಹಿಳಾ ಪ್ರಯಾಣೀಕರು ಪ್ರಯಾಣಿಸಿದ್ದಾರೆ. ಒಟ್ಟು ₹3,57,೦9,755 ಆದಾಯ ಬಂದಿದೆ ಎಂದು ತಿಳಿಸಿದರು.ಸಿಡಿಪಿಒ ಇಲಾಖೆ ಅಧಿಕಾರಿ ಪ್ರದೀಪ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಜುಲೈ ಹಣ ಬಿಡುಗಡೆಯಾಗಿಲ್ಲ. ಜೂನ್ ತಿಂಗಳಿನ ಸುಮಾರು 3 ಸಾವಿರ ಫಲಾನುಭವಿಗಳಿಗೆ ಹಣ ಬಾಕಿ ಇದೆ ಎಂದು ಸಭೆಗೆ ತಿಳಿಸಿದರು. ಅಧ್ಯಕ್ಷೆ ಕು.ಚಂದ್ರಮ್ಮ ಮಾತನಾಡಿ, ಕೆಲವು ಫಲಾನುಭವಿಗಳು ಜೂನ್ ಹಣ ಬಂದಿದೆ, ಆದರೆ ಏಪ್ರಿಲ್, ಮೇ ತಿಂಗಳ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ ಎಂದರು. ಪ್ರದೀಪ್ ಮಾತನಾಡಿ, ಮೇ, ಏಪ್ರಿಲ್ ತಿಂಗಳ ಹಣವೇ ಜೂನ್ ತಿಂಗಳಲ್ಲಿ ಜಮೆ ಆಗಿದೆ. ಜೂನ್ ತಿಂಗಳಿನಲ್ಲಿ ಜಮಾ ಆಗಿದ್ದಕ್ಕೆ ಜೂನ್ ತಿಂಗಳಿನ ಹಣವೆಂದು ಭಾವಿಸಿದ್ದಾರೆ. ಆದರೆ, ಜೂನ್ ತಿಂಗಳ ಹಣ ಜಮಾ ಆಗಿಲ್ಲ ಎಂದು ಮಾಹಿತಿ ನೀಡಿದರು. ಸದಸ್ಯ ಇಸ್ಮಾಯಿಲ್ ಮಾತನಾಡಿ ಅಕ್ಷರ ನಗರದ ಅಂಗನವಾಡಿ ಕಟ್ಟಡ ಸೋರುತ್ತಿದೆ, ಕೂಡಲೇ ದುರಸ್ತಿಗೊಳಿಸುವಂತೆ ಹೇಳಿದರು.ಸಿಡಿಪಿಓ ವೀರಭದ್ರಯ್ಯಮಾಜಿಗೌಡ್ರ ಮಾತನಾಡಿ, ವಿವಿಧ ಅಂಗನವಾಡಿಗಳನ್ನು ದುರಸ್ತಿಗೊಳಿಸಲು ಕ್ರಿಯಾ ಯೋಜನೆ ಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಕ್ರಮವಹಿಸಲಾಗುವುದೆಂದು ತಿಳಿಸಿದರು. ಅಧ್ಯಕ್ಷೆ ಕು.ಚಂದ್ರಮ್ಮ ಹಾಗೂ ಸದಸ್ಯ ಇಸ್ಮಾಯಿಲ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಕೆಲವರ ಅರ್ಜಿಗಳು ಜಿಎಸ್.ಟಿ. ಪಾವತಿ ದಾರರು ಎಂದು ಬಾಕಿ ಇವೆ. ಇನ್ನು ಕೆಲವು ಅರ್ಜಿಗಳು ತಿರಸ್ಕೃತಗೊಂಡಿವೆ. ಆದರೆ, ಅವರು ಜಿಎಸ್.ಟಿ ಪಾವತಿಸುತ್ತಿಲ್ಲ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ಸಿಡಿಪಿಓ ವೀರಭ್ರಯ್ಯಮಾಜಿಗೌಡ್ರ ಮಾತನಾಡಿ, ಈ ಹಿಂದೆ ಜಿಎಸ್‌ಟಿ ಪಾವತಿಸಿ, ಇತ್ತೀಚೆಗೆ ಪಾವತಿಸದೇ ಇರುವವರ ಅರ್ಜಿಗಳು ತಿರಸ್ಕರಿಸಲಾಗಿದೆ. ಇನ್ನು ಕೆಲವರು ಜಿಎಸ್‌ಟಿ ಪಾವತಿಸದೇ ಇದ್ದರೂ ಜಿಎಸ್.ಟಿ ಪಾವತಿಸುತ್ತಿದ್ದಾರೆ ಎಂದು ತಂತ್ರಾಂಶದಲ್ಲಿ ಬರುತ್ತಿರುವುದರಿಂದ ಬಾಕಿ ಉಳಿಸಿಸಲಾಗಿದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿಯೇ ಸಮಸ್ಯೆ ಬಗೆಹರಿಸ ಬೇಕಾಗಿದೆ ಎಂದರು.ಸಭೆಯಲ್ಲಿ ಸದಸ್ಯರಾದ ಇಂದಿರಾನಗರ ರಘು, ನಾಗರಾಜ್, ಇಸ್ಮಾಯಿಲ್, ಹೂವಮ್ಮ,ದೇವರಾಜ್,ಜಯರಾಂ, ಕೆ.ಕೆ.ಗೌತಮ್, ನಿತ್ಯಾನಂದ, ತಾಪಂ ಸಿಬ್ಬಂದಿ ಶ್ರೀದೇವಿ ಇದ್ದರು.