ಗೋಕರ್ಣದಲ್ಲಿ ಜೀವಜಲದ ಅಭಾವ ತೀವ್ರ

KannadaprabhaNewsNetwork |  
Published : Apr 15, 2024, 01:16 AM IST
ನೀರಿಗಾಗಿ ಬಿಂದಿಗೆ ಇಟ್ಟಿರುವುದು. | Kannada Prabha

ಸಾರಾಂಶ

ಪೇಟೆ ಭಾಗದ 1800ರಕ್ಕೂ ಹೆಚ್ಚು ಮನೆಗಳಿಗೆ ತಲುಪುತ್ತಿದ್ದ ನೀರು ಒಂದು ವಾರದಿಂದ ಬಂದ್ ಆಗಿದೆ. ಟ್ಯಾಂಕರ್‌ ನೀರಿನ ಪೂರೈಕೆ ತ್ವರಿತವಾಗಿ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಗೋಕರ್ಣ: ಪ್ರವಾಸಿ ತಾಣದಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ಪ್ರಮುಖ ದೇವಾಲಯಗಳಲ್ಲಿ ಪೂಜೆಗೂ ನೀರಿನ ಬರ ಉಂಟಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ನೀರಿನ ಬವಣೆ ಹೇಳತೀರದಾಗಿದ್ದು, ಒಂದು ಕಿಮೀಗೂ ಹೆಚ್ಚು ದೂರ ಸಾಗಿ ನೀರನ್ನು ತರುವ ಪರಿಸ್ಥಿತಿ ಇದ್ದು, ಇಲ್ಲಿಯೋ ಬಾವಿ ಬತ್ತುವ ಹಂತ ತಲುಪಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಮಾದನಗೇರಿ ಬಳಲೆ ಕುಡಿಯುವ ನೀರಿನ ಸಂಗ್ರಹಣಾ ಘಟಕದಿಂದ ಇಲ್ಲಿಗೆ ಪೂರೈಕೆಯಾಗುತ್ತಿದ್ದ ಗುಂಡಬಾಳ ಭಾಗದ ಗಂಗಾವಳಿ ನದಿ ಬತ್ತಿರುವ ಕಾರಣ ಈ ವ್ಯತ್ಯಯ ಉಂಟಾಗಿದೆ.

ಪೇಟೆ ಭಾಗದ 1800ರಕ್ಕೂ ಹೆಚ್ಚು ಮನೆಗಳಿಗೆ ತಲುಪುತ್ತಿದ್ದ ನೀರು ಒಂದು ವಾರದಿಂದ ಬಂದ್ ಆಗಿದೆ. ಟ್ಯಾಂಕರ್‌ ನೀರಿನ ಪೂರೈಕೆ ತ್ವರಿತವಾಗಿ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಸ್ಥಳೀಯ ಜಲಮೂಲವನ್ನು ಅಭಿವೃದ್ಧಿಪಡಿಸಿ ಮುಂಜಾಗ್ರತವಾಗಿ ಗ್ರಾಮ ಪಂಚಾಯಿತಿ ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎನ್ನುವ ಮಾತು ಜನರಿಂದ ಕೇಳಿ ಬರುತ್ತಿದ್ದು, ಈ ಬಗ್ಗೆ ಪತ್ರಿಕೆ ಸಹ ವರದಿ ಮಾಡಿತ್ತು. ಇದರ ಪರಿಣಾಮ ಕೆಲಭಾಗದಲ್ಲಿರುವ ಗ್ರಾಮ ಪಂಚಾಯಿತಿ ಬಾವಿಗಳನ್ನು ಮತ್ತು ಬೋರ್ವೆಲ್‌ಗಳನ್ನು ದುರಸ್ತಿಗೊಳಿಸಲಾಗುತ್ತಿದ್ದು, ಆದರೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯುವುದು ಅನುಮಾನವಾಗಿದೆ.

ಇನ್ನು ಬೇಸಿಗೆ ರಜೆಯ ಕಾರಣ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಹೋಟೆಲ್, ರೆಸಾರ್ಟ್ ಮಾಲೀಕರಿಗೂ ನೀರಿನ ಬಿಸಿ ತಟ್ಟಿದ್ದು, ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ಬಹುತೇಕ ಮನೆಗಳ ಬಾವಿ ನೀರು ಕಡಿಮೆಯಾಗಿದ್ದು, ಕೆಲವು ಕಡೆ ಸಂಪೂರ್ಣ ಬತ್ತಿದೆ.

ಇನ್ನು ಈ ನೀರಿನ ಪ್ರಾಣಿ ಸಂಕುಲಕ್ಕೂ ಕಂಟಕವಾಗಿದ್ದು, ಬಾಯಾರಿಕೆಯಿಂದ ಅತ್ತಿತ್ತ ಓಡಾಡುತ್ತ ನೀರಿಗಾಗಿ ಪರಿತಪಿಸುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.

ಒಟ್ಟಾರೆ ಪ್ರಕೃತಿ ಮುನಿಸು ಕೊನೆಗೊಂಡು ಮಳೆಯ ತಂಪೆರೆದರೆ ಮಾತ್ರ ಈ ವರ್ಷದ ಬೇಸಿಗೆಯನ್ನು ಕಳೆಯಬಹುದಾಗಿದೆ.

ಹಳ್ಳಿಗಳ ಪರಿಸ್ಥಿತಿ ಡೋಲಾಯಮಾನ: ಹನೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದ್ರಗೇರೆ, ಕಡಮೆ, ಗೋಕರ್ಣದ ಚೌಡಗೇರಿ, ಬಂಗ್ಲೆಗುಡ್ಡ, ತಾರಮಕ್ಕಿ, ತೊರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣ, ಹೊಸ್ಕಟ್ಟಾ ಮತ್ತಿತರ ಕಡೆ ತ್ವರಿತವಾಗಿ ಟ್ಯಾಂಕರ್‌ ನೀರು ಪೂರೈಕೆ ಮಾಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!