ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದಲ್ಲಿ ಎಲ್ಲಿ ನೋಡಿದರೂ ಗಲೀಜು ಹೆಚ್ಚಾಗಿದ್ದು, ಪೌರಕಾರ್ಮಿಕರ ಕೊರತೆಯೇ ಇದಕ್ಕೆ ಕಾರಣವಾಗಿದೆ. ಈ ಸಮಸ್ಯೆ ಬಗೆಹರಿದರೆ ಸ್ವಚ್ಛತೆ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ನಗರಸಭೆ, ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛ ಹೊಸಪೇಟೆಗಾಗಿ ಸಮುದಾಯದ ಸಂಕಲ್ಪ, ನಗರದ ಕಾಲುವೆಗಳ ಸ್ವಚ್ಛತಾ ಅಭಿಯಾನಕ್ಕೆ ನಗರದ ಆರ್‌ಟಿಒ ಕಚೇರಿ ಬಳಿ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಹೊಸಪೇಟೆ ನಗರದ ಬಹಳ ಕಡೆ ಗಲೀಜು ಇದೆ. ಎಲ್ಲಿ ನೋಡಿದರೂ ತಿಪ್ಪೆಗಳು ಕಾಣಿಸುತ್ತಿವೆ. ಅದಕ್ಕೆ ನಗರಸಭೆ ಅಧ್ಯಕ್ಷರು, ಸದಸ್ಯರು ಹೊಣೆಯಾಗಲ್ಲ. ಸಿಬ್ಬಂದಿ ಕೊರತೆ ಬಹಳಷ್ಟಿದೆ. ಪೌರಕಾರ್ಮಿಕರು ಇದ್ದರೆ ನಗರದ ಸ್ವಚ್ಛತೆ ಸಾಧ್ಯವಾಗುತ್ತದೆ. ನಗರದಲ್ಲಿ ಇರುವ ಜನಸಂಖ್ಯೆಗೆ ಅನುಗುಣವಾಗಿ ಅದಕ್ಕೆ ತಕ್ಕದಾಗಿ ಸಿಬ್ಬಂದಿ ಇಲ್ಲ. ಈ ಬಗ್ಗೆ ಮುಂದೆ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟವರ ಜತೆ ಚರ್ಚಿಸಿ ಪೌರ ಕಾರ್ಮಿಕರನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ನಗರದ ಸ್ವಚ್ಛತೆಗೆ ಸಾರ್ವಜನಿಕರು ಕೂಡ ಸಹಕರಿಸಬೇಕು. ಆದರೆ, ಜನರು ಪ್ರತಿ ದಿನ ಕಾಲುವೆಗೆ ಕಸ ಬಿಸಾಡುವುದನ್ನು ಕಂಡಿದ್ದೇನೆ. ಈಗ ಸ್ವಚ್ಛ ಮಾಡಿದ ಮರುದಿನ ಮತ್ತೆ ಕಸ ತುಂಬುತ್ತಾರೆ. ಸಾರ್ವಜನಿಕರ ಸಹಕಾರ ಇಲ್ಲದಿದ್ದರೆ ಎಷ್ಟೇ ಯಂತ್ರಗಳು, ಸಿಬ್ಬಂದಿ ಇದ್ದರೂ ಸ್ವಚ್ಛತೆ ಮಾಡಲು ಸಾಧ್ಯವಿಲ್ಲ. ಒಂದು ವಾರ ಸ್ವಚ್ಛಗೊಳಿಸಿದರೆ ಮತ್ತೊಂದು ವಾರದಲ್ಲಿ ಕಸ ತುಂಬಿರುತ್ತದೆ ಎಂದರು.ಬಹಳ ಕಡಿಮೆ ನಗರಗಳಲ್ಲಿ ಕಾಲುವೆ, ನದಿ ಹರಿದು ಹೋಗಿವೆ. ನಮ್ಮಲ್ಲಿರುವುದು ವಿಜಯನಗರ ಸಾಮ್ರಾಜ್ಯದ ವಿಶೇಷ. ಹೊಸಪೇಟೆಯಲ್ಲಿ ನಾಲ್ಕು ಕಡೆ ಕಾಲುವೆ ಹರಿದು ಹೋಗಿದೆ. ಕಾಲುವೆಗಳಿಂದ ಹೋಗುವ ಈ ನೀರನ್ನು ನಮ್ಮ ರೈತರು ಬಳಸುತ್ತಿದ್ದಾರೆ. ಅವರಿಗೆ ತೊಂದರೆ ಕೊಡುವ ಕೆಲಸ ಯಾರಿಂದಲೂ ಆಗಬಾರದು. ನಗರದ ನಾಗಪ್ಪನ ಕಟ್ಟೆ ಬಳಿ ಕಾಲುವೆ ಸ್ವಚ್ಛತೆಯನ್ನು ನೀರು ಬಿಡುವ ಮುನ್ನ ಮಾಡಲಾಗುವುದು ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಹುಡಾ ಆಯುಕ್ತ ಈರಣ್ಣ ಬಿರಾದಾರ, ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ, ರೋಟರಿ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ ಮತ್ತಿತರರಿದ್ದರು.