ಕನ್ನಡಪ್ರಭ ವಾರ್ತೆ ಭಾರತೀನಗರ
ಬಾಲಾಜಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಜನರ ಸಮಸ್ಯೆ ಆಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜನರು ಅರ್ಜಿ ಹಿಡಿದು ಸರ್ಕಾರಿ ಕಚೇರಿಗೆ ಅಲೆದಾಡಬಾರದೆಂಬ ಉದ್ದೇಶ ನಮ್ಮದಾಗಿದೆ ಎಂದರು.
ಜಿಲ್ಲೆ ತಾಲೂಕು ಅಲ್ಲದೇ, ಹೋಬಳಿ ಮಟ್ಟದಲ್ಲೂ ಜಿಲ್ಲಾಧಿಕಾರಿಗಳು ಜನಸ್ಪಂದನಾ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆ ಆಲಿಸಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ. ಈ ಭಾಗದಲ್ಲಿ ರೈತರ ಯಾವುದೇ ಸಮಸ್ಯೆಗಳಾಗಲಿ ಶಾಸಕ ಮಧು ಜಿ.ಮಾದೇಗೌಡರು ನೇರವಾಗಿ ನನಗೆ ಮತ್ತು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಥವಾ ಖುದ್ದು ಭೇಟಿನೀಡಿ ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಭಾಗದಲ್ಲಿ ಅಷ್ಟು ಸಮಸ್ಯೆಗಳು ಇಲ್ಲವೆಂದು ನಾನು ಭಾವಿಸಿದ್ದೇನೆ. ಈ ಕಾರ್ಯಕ್ರಮದಲ್ಲಿ ಜನರು ತಮ್ಮ ಸಮಸ್ಯೆಗಳ ನಿವಾರಣೆಗೆ ನೀಡುವ ಅರ್ಜಿಗಳಿಗೆ 10 ದಿನದೊಳಗೆ ಉತ್ತರ ನೀಡಿ ವಿಲೇವಾರಿ ಮಾಡಬೇಕು. ಯಾವುದೇ ಅರ್ಜಿಗಳು ಉಳಿದುಕೊಳ್ಳಬಾರದು. ಪ್ರತಿಯೊಂದು ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿ ಪರಿಹಾರ ಇದ್ದೇ ಇರುತ್ತದೆ ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಅರ್ಜಿಗಳನ್ನು ಹಿಡಿದು ನಾಡ ಕಚೇರಿ ಹಾಗೂ ತಾಲೂಕು ಕಚೇರಿಗಳಿಗೆ ಅಲೆಯುತ್ತಿರುವುದನ್ನು ತಪ್ಪಿಸಲು, ಸ್ಥಳೀಯ ಮಟ್ಟದಲ್ಲಿ ಬಗೆಹರಿಸಲು ಆಯೋಜಿಸಿರುವ ಜನಸ್ಪಂದನ ಕಾರ್ಯಕ್ರಮವನ್ನು ಜನಸಾಮಾನ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಈ ವೇಳೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲಾಯಿತು. ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ ಸ್ಮಾರ್ಟ್‌ಪೋನ್ ವಿತರಣೆ ಮಾಡಲಾಯಿತು.
ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಜನರು ತಮ್ಮ ಸಮಸ್ಯೆಗಳ ಕುರಿತು ಅಧಿಕಾರಿಗಳ ಬಳಿ ಅಹವಾಲು ಸಲ್ಲಿಸಿದರು. ಸುಮಾರು 181 ಅರ್ಜಿಗಳು ಸ್ವೀಕರಿಸಿದ್ದು ಬಹುಪಾಲು ಅರ್ಜಿಗಳು ಪಂಚಾಯತ್ ರಾಜ್ ಇಲಾಖೆಗೆ ಒಳಪಟ್ಟಿದ್ದು ಕಂಡು ಬಂತು.