ಕನ್ನಡಪ್ರಭ ವಾರ್ತೆ ಅಂಕೋಲಾ
ಗುಡ್ಡದ ಮಣ್ಣಿನ ರಾಶಿಯಲ್ಲಿ ಹುದುಗಿ ಹೋಗಿರುವ ಬೆಂಜ್ ಟ್ರಕ್ ಹಾಗೂ ಸಿಲುಕಿಕೊಂಡಿರುವ 3 ಜನರನ್ನು ಹೊರತೆಗೆಯಲು ಕಳೆದ ಎಂಟು ದಿನಗಳಿಂದ ಹತ್ತಾರು ಬಗೆಯ ಪ್ರಯತ್ನವನ್ನು ಮಾಡಲಾಗಿದೆ. ಆದರೆ ಗಂಗಾವಳಿ ನದಿ ದಂಡೆಯಿಂದ ಸುಮಾರು 130 ಅಡಿಗಳಷ್ಟು ಉದ್ದ ಹಾಗೂ 300 ಅಡಿಗಳಷ್ಟು ವಿಶಾಲವಾಗಿ ಹರಡಿಕೊಂಡಿರುವ ಮಣ್ಣಿನ ರಾಶಿಯಲ್ಲಿ ತುಂಬಿಕೊಂಡಿರುವ ಕಲ್ಲು ಬಂಡೆಗಳು ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದೆ.
ಹುದುಗಿಕೊಂಡಿರುವ ಬೆಂಜ್ ಲಾರಿಯನ್ನು ರೆಡಾರ್ ಬಳಸಿ ಶೋಧ ಮಾಡಲು ಮುಂದಾಗಿದ್ದರು. ಆದರೆ ಒಣಮಣ್ಣಿನಲ್ಲಿ ಶೋಧ ಕಾರ್ಯದ ವರದಿಯನ್ನು ಮಾತ್ರವೇ ನೀಡುವ ರೆಡಾರ್ ತೇವಾಂಶವಿರುವ ಮಣ್ಣಿನಲ್ಲಿರುವ ಮಾಹಿತಿ ಒದಗಿಸಲಾರದೇ ಕೈಗೊಂಡ ಪ್ರಯತ್ನ ವಿಫಲವಾದಂತಾಗಿದೆ.ಆದರೆ ಕಣ್ಮರೆಯಾದ ಲಾರಿಯಲ್ಲಿದ್ದ 32 ಸಾಗುವಾನಿ ಕಟ್ಟಿಗೆ ತುಂಡುಗಳು ಸಮುದ್ರದಲ್ಲಿ ಪತ್ತೆಯಾಗಿದ್ದರಿಂದ ಲಾರಿ ಗಂಗಾವಳಿ ನದಿಯಲ್ಲೇ ಇದೆ ಎಂಬುದು ಖಚಿತವಾಗಿದ್ದು, ಗುರುವಾರ ಕಾರ್ಯಾಚರಣೆ ತೀವ್ರಗೊಳ್ಳಲಿದೆ.
ಕಣ್ಮರೆಯಾದ ಲಾರಿಯಲ್ಲಿದ್ದ ಕಟ್ಟಿಗೆ ತುಂಡುಗಳಲ್ಲಿ 32 ತುಂಡುಗಳು ಅಗ್ರಗೋಣ ಬಳಿಯ ಸಮುದ್ರದಲ್ಲಿ ಪತ್ತೆಯಾಗಿವೆ. ಹೀಗಾಗಿ ಲಾರಿ ನದಿಯಲ್ಲಿ ಮುಳುಗಿರುವುದು ಸ್ಪಷ್ಟವಾಗಿದೆ. ದುರಂತ ಸಮಯದಲ್ಲಿ ಲಾರಿಯ ಕ್ಯಾಬಿನ್‌ನಲ್ಲಿ ಚಾಲಕ ಅರ್ಜುನ್ ಮಲಗಿದ್ದ. ದುರಂತಕ್ಕೆ ಮುನ್ನ ಲಾರಿ ಅಂಕೋಲಾದಿಂದ ಶಿರೂರಿನತ್ತ ತೆರಳಿರುವುದು ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಬೂಮ್ ಯಂತ್ರಕ್ಕೆ ಶಾಸಕ ಸತೀಶ ಸೈಲ್ ಬುಧವಾರ ಬೆಳಗ್ಗೆ ಪೂಜೆ ಮಾಡಿ ಕಾರ್ಯಾಚರಣೆಗೆ ಚಾಲನೆ ನೀಡಿದರು. ಬೆಳಗ್ಗೆ 11 ಗಂಟೆಯಿಂದ ಸಂಜೆ 6.30 ವೇಳೆಯ ತನಕವು ಬೂಮ್ ಯಂತ್ರ ಕಾರ್ಯಾಚರಣೆ ನಡೆಸಿತು. ಉದ್ದನೆಯ ಕೊಂಡಿಯನ್ನು ಹೊಂದಿರುವ ಬೂಮ್ ಯಂತ್ರ ಭೂಮಿಯ ಒಳ ಭಾಗದಲ್ಲಿ ಸುಮಾರು 70 ಅಡಿಗಳಷ್ಟು ಆಳಕ್ಕಿಳಿದು ಟನ್ ಭಾರದ ಮಣ್ಣನ್ನು ಕ್ಷಣಮಾತ್ರದಲ್ಲಿ ಹೊರಹಾಕಿತು.ಇಂದು ಕಾರ್ಯಾಚರಣೆ ಯಶಸ್ವಿ
ಬುಧವಾರ ದೆಹಲಿ ಹಾಗೂ ಬೆಂಗಳೂರಿನಿಂದ ರಾಷ್ಟ್ರೀಯ ಡಿಟೆಕ್ಟರ್ ಏಜೆನ್ಸಿಯ ಕಾರ್ಯಾಚರಣೆ ನಡೆಸುವುದರಿಂದ ಎಲೆಕ್ಟ್ರಾನಿಕ್ ಸಾಧನದ ಉಪಯೋಗಕ್ಕೆ 300 ಮೀ.ವರೆಗೆ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಅಧಿಕಾರಿಗಳು ಸಹಿತ ಯಾರು ಕೂಡ ಎಲೆಕ್ಟ್ರಾನಿಕ್ ಮಷಿನ್ ತೆಗೆದುಕೊಂಡು ಹೋಗುವ ಹಾಗೆ ಇಲ್ಲ. ಹಾಗೆ ಗುರುವಾರ ಟ್ರಕ್ ಪತ್ತೆ ಆದರೂ ನಾಪತ್ತೆಯಾದ ಇನ್ನೂ ಮೂವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.