ಕೇಂದ್ರದೊಂದಿಗೆ ಚುನಾವಣಾ ಆಯೋಗ ಒಳಒಪ್ಪಂದ ಮಾಡಿಕೊಂಡಿರುವ ಅನುಮಾನ

KannadaprabhaNewsNetwork |  
Published : Nov 11, 2025, 02:15 AM IST
10ಎಚ್‌ವಿಆರ್‌6-ಎಚ್.ಆಂಜನೇಯ | Kannada Prabha

ಸಾರಾಂಶ

ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕೇಂದ್ರ ಬಿಜೆಪಿ ಸರ್ಕಾರದೊಂದಿಗೆ ಚುನಾವಣಾ ಆಯೋಗವು ಒಳಒಪ್ಪಂದ ಮಾಡಿಕೊಂಡ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಹಾವೇರಿ:ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕೇಂದ್ರ ಬಿಜೆಪಿ ಸರ್ಕಾರದೊಂದಿಗೆ ಚುನಾವಣಾ ಆಯೋಗವು ಒಳಒಪ್ಪಂದ ಮಾಡಿಕೊಂಡ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕಾದರೆ, ಜನತಂತ್ರ ಉಳಿಯಬೇಕಾದರೆ ಎಲ್ಲರಿಗೂ ಒಂದೇ ಮತ ನೀಡುವ ಹಕ್ಕು ಪಡೆಯಲಾಗಿದೆ. ದೇಶದಲ್ಲಿ ಆಳುವ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರಿಗೆ ಇದೆ. ಮತದಾರರ ಪಟ್ಟಿಯಲ್ಲಿ ಮೋಸ ಆಗುತ್ತಿದೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತ ಕಳುವು ಆಗಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಜನರ ಮುಂದೆ ತೆರೆದಿಟ್ಟಿದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಉತ್ತರ ಕೊಡುತ್ತಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.ಈ ಹಿಂದೆ ಟಿ.ಎನ್. ಶೇಷನ್ ಅವರು ಚುನಾವಣಾ ಕಮೀಷನರ್ ಇದ್ದಾಗ ಕಟ್ಟುನಿಟ್ಟಿನ ವ್ಯವಸ್ಥೆ ಇತ್ತು. ಭ್ರಷ್ಟ ವ್ಯವಸ್ಥೆಗೆ ಭಯ ಹುಟ್ಟಿಸಿ, ನೋಟು ಕೊಟ್ಟು ಓಟ್ ಹಾಕಿಸಿಕೊಳ್ಳುವವರಿಗೆ ಕಡಿವಾಣ ಹಾಕಿದ್ದರು. ಆದರೀಗ ಅಪವಿತ್ರತೆ ನಡೆಯುತ್ತಿದೆ. ನಿಷ್ಪಕ್ಷಪಾತವಾಗಿ, ಸಂವಿಧಾನ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅನ್ಯಾಯ, ಅಕ್ರಮ ಖಂಡಿಸಿ ರಾಷ್ಟ್ರಪತಿಗಳ ಮಧ್ಯ ಪ್ರವೇಶಕ್ಕೆ ಆಗ್ರಹಿಸಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 1.80 ಲಕ್ಷ ಸಹಿ ಸಂಗ್ರಹ ಮಾಡಲಾಗಿದೆ ಎಂದರು.

ನಾಯಕತ್ವ ಬದಲಾವಣೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರಿಗೆ ಹೆಚ್ಚು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಮಲ್ಲಿಕಾರ್ಜುನ ಖರ್ಗೆ ಒಂದಲ್ಲ ಒಂದು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಇದ್ದಾರೆ. 2008ರಲ್ಲಿ ರಾಜ್ಯಾಧ್ಯಕ್ಷರಿದ್ದರು. ಅವರ ನೇತೃತ್ವದಲ್ಲಿ ಚುನಾವಣೆ ಮಾಡಿದ್ದೇವೆ. ಸ್ಪಷ್ಟ ಬಹುಮತ ಸಿಕ್ಕಿದ್ದರೆ ಆವಾಗ ಅವರೇ ಸಿಎಂ ಆಗುತ್ತಿದ್ದರು. ಈಗ ಸಮರ್ಥ ಸಿಎಂ ಇದ್ದಾರೆ. ಬಡವರು, ಹಿಂದುಳಿದವರ ಮುಖ್ಯಮಂತ್ರಿ ಇದ್ದಾರೆ. ದಲಿತ ಸಿಎಂ ಬಗ್ಗೆ 2028ಕ್ಕೆ ಚರ್ಚೆ ಮಾಡಲಿ ಎಂದರು.ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಎಸ್ಎಫ್ಎನ್ ಗಾಜಿಗೌಡ್ರ, ಡಿ. ಬಸವರಾಜ, ಎಂ.ಎಂ. ಮೈದೂರ, ದುರಗಪ್ಪ ನೀರಲಗಿ, ಬಸವರಾಜ ಹೆಡಿಗ್ಗೊಂಡ, ಶಂಕರ ಮೆಹರವಾಡೆ, ಏಳುಕೋಟಿ ಪಾಟೀಲ, ಪ್ರಸನ್ನ ಹಿರೇಮಠ ಇತರರು ಇದ್ದರು.

ಏರ್‌ಪೋರ್ಟ್‌ನಲ್ಲಿ ನಮಾಜ್‌ ಮಾಡಿದ್ದಕ್ಕೆ ಸಮರ್ಥನೆ: ಏರ್‌ಪೋರ್ಟ್‌ನಲ್ಲಿ ಸಾಮೂಹಿಕ ನಮಾಜ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಎಚ್.ಆಂಜನೇಯ, ಅದು ಪ್ರಾರ್ಥನೆ ಮಾಡೋದು, ಕೋಲು ಹಿಡಿದುಕೊಂಡು ಹೋಗುವುದಲ್ಲ. ನಮಾಜ್ ಮಾಡಬಾರದಾ? ಪಾಪ ಪಾರ್ಥನೆ ಮಾಡುತ್ತಾನೆ. ಅವರಲ್ಲಿರುವ ಶ್ರದ್ಧೆ ನೋಡಿ ಆರ್‌ಎಸ್‌ಎಸ್ ಕಲಿತುಕೊಳ್ಳಬೇಕು. ಅವನು ಎಲ್ಲಿದ್ದರೇನು, ಅವನ ಮನ ನೆಮ್ಮದಿಗೆ ಪ್ರಾರ್ಥನೆ ಮಾಡುತ್ತಾನೆ. ಎಲ್ಲಾದರೂ ಟೈಂ ಇದ್ದರೆ, ಬಸ್ ಸ್ಟ್ಯಾಂಡ್‌ನಲ್ಲೇ ಪ್ರಾರ್ಥನೆ ಮಾಡುತ್ತಾನೆ. ಸಾಮೂಹಿಕ ಪ್ರಾರ್ಥನೆ ಸರಿಯಾಗಿ ಮಾಡಿಕೊಂಡಿದ್ದಾರೆ. ಇವರ ಹಾಗೆ ನಾಮ ಹಾಕಿಕೊಂಡು, ಪೂಜೆ ಇಟ್ಟುಕೊಂಡು ತಟ್ಟೆಗೆ ಹಾಕಯ್ಯ ಅಂತ ಕೇಳಿಲ್ಲ. ಅವರು ಮೂರ್ಖರಲ್ಲ. ಮಸೀದಿ ಇಲ್ಲ ಅಂತೇಳಿ ಅಲ್ಲಿ ಮಾಡಿರಬಹುದು ಎಂದು ಸಮರ್ಥನೆ ಮಾಡಿಕೊಂಡರು.

PREV

Recommended Stories

ಪ್ರತಿಯೊಂದು ಕಾರ್ಯವನ್ನು ಭಗವಂತನ ಪ್ರೀತಿಗಾಗಿ ಮಾಡಿ
ಹಿಂದುಳಿದ ವರ್ಗಕ್ಕೆ ಕಾನೂನು ನೆರವು