ಪ್ರಾಂಶುಪಾಲರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿದೆ

KannadaprabhaNewsNetwork |  
Published : Mar 12, 2026, 03:15 AM IST
ಹಸದಜಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಮೇಲೆ ಕೇಳಿ ಬಂದಿರುವ ಆರೋಪಗಳಲ್ಲಿ ಕೆಲವು ಆರೋಪಗಳು ಸತ್ಯವಾಗಿದ್ದು, ಈ ಕೂಡಲೇ ಅವರನ್ನು ಪ್ರಾಂಶುಪಾಲರ ಹುದ್ದೆಯಿಂದ ಬದಲಾಯಿಸುವಂತೆ ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಮೇಲೆ ಕೇಳಿ ಬಂದಿರುವ ಆರೋಪಗಳಲ್ಲಿ ಕೆಲವು ಆರೋಪಗಳು ಸತ್ಯವಾಗಿದ್ದು, ಈ ಕೂಡಲೇ ಅವರನ್ನು ಪ್ರಾಂಶುಪಾಲರ ಹುದ್ದೆಯಿಂದ ಬದಲಾಯಿಸುವಂತೆ ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಮಿತಿ ಸದಸ್ಯರು, ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಮಾಡಿರುವ ಆರೋಪಗಳಲ್ಲಿ ಶೇ.60ರಷ್ಟು ಸತ್ಯವಾಗಿವೆ. ಅದರಂತೆ ಗ್ರಂಥಪಾಲಕರ ಹಾಗೂ ದೈಹಿಕ ಶಿಕ್ಷಕರ ವಿರುದ್ಧವೂ ಆರೋಪಗಳು ಕೇಳಿ ಬಂದಿದ್ದು ಅವುಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಕಾಲೇಜಿನ ಅಭಿವೃದ್ಧಿಗಾಗಿ ಸಮಿತಿಯು ಸಿದ್ಧವಾಗಿದೆ. ವಿದ್ಯಾರ್ಥಿಗಳು ಆತಂಕ ಪಡದೆ ಯಾವುದೇ ತೊಂದರೆ ಉಂಟಾದಲ್ಲಿ ಕೂಡಲೇ ಸಮಿತಿಯ ಸದಸ್ಯರನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ಇನ್ನುಳಿಂದತೆ ಕೆಲವು ಆರೋಪಗಳು ಪ್ರಾಂಶುಪಾಲರ ವಿರುದ್ಧ ಕೇಳಿ ಬಂದಿದ್ದು, ಅವುಗಳ ಬಗ್ಗೆ ಇಲಾಖೆಯೂ ತನಿಖೆ ನಡೆಸಲಿದೆ. ನಂತರ ಈ ಕುರಿತು ಪ್ರಾಂಶುಪಾಲರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಇಲಾಖೆಗೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕರ ಸೂಚನೆಯ ಮೇರೆಗೆ ಸಿಡಿಸಿ ಸದಸ್ಯರ ಸಭೆ ನಡೆಸಲಾಗಿತ್ತು. ನಂತರ ಅದನ್ನು ಠರಾಯಿಸಿ ಶಿಫಾರಸ್ಸು ಮಾಡುವಂತೆ ಶಾಸಕರು ಸೂಚಿಸಿದ ಹಿನ್ನಲ್ಲೆಯಲ್ಲಿ ಠರಾವನ್ನು ಶಿಫಾರಸ್ಸು ಮಾಡಲಾಗಿದ್ದು, ಈ ಕುರಿತು ಮುಂದಿನ ಕ್ರಮವನ್ನು ಇಲಾಖೆಯ ಅಧಿಕಾರಿಗಳು ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಾಸಕ ಬಾಬಾಸಾಹೇಬ ಪಾಟೀಲರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನಿವೃತ್ತ ಪ್ರಾಚಾರ್ಯ ಎನ್.ಎಸ್.ಗಲಗಲಿ, ಮಂಜುನಾಥ ದೊಡ್ಡಣ್ಣವರ, ಮಕಸೂರ ಉಸ್ತಾದ, ಸಂಜೀವ ಲೋಕಾಪೂರ, ಸುರೇಶ ಕಿತ್ತೂರು, ಪುಂಡಲೀಕ ವಾಲೀಕಾರ, ಕಾಶೀನಾಥ ಕಿನಾರೆ, ಉಪನ್ಯಾಸಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಇತರರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

-----ಬಾಕ್ಸ್‌

ಪ್ರಾಂಶುಪಾಲರಿಗೆ ಪ್ರಶ್ನೆಗಳ ಸುರಿಮಳೆ

ಮಾ.೯ ರಂದು ಕಾಲೇಜು ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಪ್ರಾಂಶುಪಾಲರ, ಉಪನ್ಯಾಸಕರ ಹಾಗೂ ಸಿಬ್ಬಂದಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ದಿಢೀರ್‌ ಪ್ರತಿಭಟನೆ ನಡೆಸಿದ್ದರು. ಶಾಸಕ ಬಾಬಾಸಾಹೇಬ ಪಾಟೀಲ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ಮರುದಿನವೇ ತುರ್ತು ಸಭೆ ಕೈಗೊಂಡು ವರದಿ ನೀಡುವಂತೆ ಸೂಚಿಸಿದ್ದರು.

ಶಾಸಕ ಬಾಬಾಸಾಹೇಬ ಪಾಟೀಲರ ಸೂಚನೆಯ ಮೇರೆಗೆ ಮಂಗಳವಾರ ಸಿಡಿಸಿ ಸದಸ್ಯರು ಹಾಗೂ ಪ್ರಾಂಶುಪಾಲರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರಾಂಶುಪಾಲರನ್ನು, ಉಪನ್ಯಾಸಕರನ್ನು ಹಾಗೂ ಸಿಬ್ಬಂದಿಯನ್ನು ಸರತಿ ಸಾಲಿನಲ್ಲಿ ಆರೋಪಗಳ ಬಗ್ಗೆ ಪ್ರಶ್ನೆ ಮಾಡಿದ್ದು, ಆಗ ಗಲಿಬಿಲಿಗೊಳಗಾದ ಪ್ರಾಂಶುಪಾಲರು ಜಂಟಿ ನಿರ್ದೇಶಕರ ಕಚೇರಿಗೆ ತೆರಳುವುದಾಗಿ ಸಮಿತಿ ಸದಸ್ಯರಿಗೆ ತಿಳಿಸಿ ಸಭೆಯಿಂದ ಹೊರನಡೆದಿದ್ದರು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಮೂಲಗಳಿಂದ ಪತ್ರಿಕೆಗೆ ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪ ನೋಂದಣಾಧಿಕಾರಿಗೆ ಧಮ್ಕಿ ಹಾಕಿದ್ದ ಆರೋಪಿ ಸೆರೆ
ನಿಯಮ ಉಲ್ಲಂಘಿಸಿ ಸಿಬ್ಬಂದಿ ನೇಮಕ ಶಂಕೆ