ಕನ್ನಡಪ್ರಭ ವಾರ್ತೆ ಅಥಣಿ ತಾಲೂಕಿನ ತಾಂವಶಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಎಸ್‌ಡಿಸಿ (ಕಂಪ್ಯೂಟರ್ ಆಪರೇಟರ್) ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಹಕಾರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ. ನೊಂದ ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ತಾಂವಶಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಎಸ್‌ಡಿಸಿ (ಕಂಪ್ಯೂಟರ್ ಆಪರೇಟರ್) ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಹಕಾರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ. ನೊಂದ ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ರಾವಸಾಬ ಮಸರಗುಪ್ಪಿ, ತಾವಂಶಿ ಗ್ರಾಮದ ಸಂಘದಲ್ಲಿ ಖಾಲಿ ಇದ್ದ ಎಸ್‌ಡಿಸಿ ಹುದ್ದೆಗೆ ನೇಮಕಾತಿ ಮಾಡುವಾಗ ಸಹಕಾರ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ಮಾಡಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡದೇ, ಹಣಕ್ಕೆ ಮಾರಾಟವಾಗಿರುವ ಸಂಶಯ ಮೂಡಿದೆ. ಈ ಸಂಘದಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿ ಇದ್ದ ವ್ಯಕ್ತಿಯ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ನ್ಯಾಯಯುತ ಕ್ರಮಕೈಗೊಳ್ಳಬೇಕು. ಸಹಕಾರಿ ನಿಯಮಗಳನ್ನು ಉಲ್ಲಂಘಿಸಿ, ಭ್ರಷ್ಟಾಚಾರ ಎಸಿಗಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಅಗ್ರಹಿಸಿದರು.ಈ ವೇಳೆ ಪ್ರತಿಭಟನಾಕಾರರು ಸಂಘದ ಕಾರ್ಯದರ್ಶಿ ಬಸಪ್ಪ ಮಸರಗುಪ್ಪಿ ವಿರುದ್ದ ಘೋಷಣೆಗಳನ್ನು ಕೂಗಿ ಸಂಘದ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. -------

ಕೋಟ್‌ಯಾವುದೇ ಪೇಪರ್ ನೋಟಿಫಿಕೇಷನ್ ನೀಡದೆ ರಹಸ್ಯವಾಗಿ ಹಣ ಬಲದ ಮೂಲಕ ಕಾರ್ಯದರ್ಶಿ ಹಾಗೂ ಸದಸ್ಯರು ಸೇರಿ ಅವ್ಯವಹಾರ ನಡೆಸಿ ನಿಯಮ ಬಾಹಿರವಾಗಿ ಎಸ್‌ಡಿಸಿ ಹುದ್ದೆ ಭರ್ತಿ ಮಾಡಿಕೊಂಡಿದ್ದಾರೆ. ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಸ್ವೀಕರಿಸದೆ ಗ್ರಾಮೀಣ ಪ್ರತಿಭೆಗಳಿಗೆ ಅನ್ಯಾಯ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.- ಮುರುಗೇಶ ಲಕ್ಕೆಗೌಡರ, ಉದ್ಯೋಗ ವಂಚಿತ ಅಭ್ಯರ್ಥಿ.

--------

ಕೋಟ್‌ಸಹಕಾರ ಇಲಾಖೆ ಎಲ್ಲ ನಿಯಮಗಳನ್ನು ಪಾಲಿಸಿ ಸಂಘದ ಸದಸ್ಯರ ಸರ್ವಾನುಮತದ ನಿರ್ಣಯದಂತೆ ಠರಾವು ಪಾಸ್ ಮಾಡಿ ಹುದ್ದೆ ಭರ್ತಿ ಮಾಡಲಾಗಿದೆ.

ಪತ್ರಿಕಾ ಪ್ರಕಟಣೆ ಹಾಗೂ ನೋಟಿಸ್ ಬೋರ್ಡ್‌ನಲ್ಲಿ ಮಾಹಿತಿ ನೀಡಲಾಗಿದೆ. ಸಂಬಂಧಿಸಿದ ಹುದ್ದೆಗೆ ಒಂದೇ ಅರ್ಜಿ ಬಂದಿತ್ತು, ಅದನ್ನು ಆಡಳಿತ ಮಂಡಳಿ ಅನುಮೋದಿಸಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ. - ಬಸಪ್ಪ ಮಸರಗುಪ್ಪಿ, ಸಂಘದ ಕಾರ್ಯದರ್ಶಿ -----

ಕೋಟ್‌ತಾಂವಶಿ ಗ್ರಾಮದ ಸಹಕಾರ ಸಂಘದಲ್ಲಿ ನಿಯಮ ಬಾಹಿರ ನೇಮಕಾತಿ ಕುರಿತು ಅಲ್ಲಿನ ಕಾರ್ಯದರ್ಶಿಗಳಿಂದ ಅಗತ್ಯ ಮಾಹಿತಿ ತರಿಸಿಕೊಂಡು ಪರಿಶೀಲಿಸುತ್ತೇವೆ. ತಪ್ಪು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವದು.

- ರಾಘವೇಂದ್ರ ನೂಲಿ, ಸಹಕಾರ ಅಭಿವೃದ್ಧಿ ಅಧಿಕಾರಿ, ಅಥಣಿ