ಪ್ರತಿಯೊಬ್ಬ ಮಹಿಳೆಯಲ್ಲೂ ಒಬ್ಬ ಸಾಧಕಿ ಇರುತ್ತಾಳೆ: ಡಾ.ಪೂರ್ಣಿಮಾ ಅಭಿಪ್ರಾಯ

KannadaprabhaNewsNetwork | Published : Mar 20, 2024 1:22 AM

ಸಾರಾಂಶ

ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ದಾಪುಗಾಲು ಇಡುತ್ತಿದ್ದಾರೆ. ನಾವು ನಡೆಯುವ ಹಾದಿ ಒಳ್ಳೆಯದಾದರೆ ನಮ್ಮನ್ನು ನೋಡಿ ಇತರರು ಒಳ್ಳೆಯ ಹಾದಿಯಲ್ಲೇ ಬರುತ್ತಾರೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯು ಛಲದಿಂದ ಗುರಿ ಸಾಧಿಸಬೇಕು. ಹೆಣ್ಣು-ಗಂಡಿನಲ್ಲಿ ಸಾಮರಸ್ಯ ಜೀವನ ಇರಬೇಕೇ ಹೊರತು ಮೇಲುಕೀಳು ಇರಬಾರದು.

ಕನ್ನಡಪ್ರಭ ವಾರ್ತೆ ಭಾರತೀನಗರ ಪ್ರತಿಯೊಬ್ಬ ಮಹಿಳೆಯಲ್ಲೂ ಒಬ್ಬ ಸಾಧಕಿ ಇರುತ್ತಾಳೆ. ಗಂಡು-ಹೆಣ್ಣು ಎಂಬ ತಾರತಮ್ಯ ನಿಲ್ಲಿಸಿದಾಗ ಮಾತ್ರ ನಮ್ಮ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿಶ್ರಾಂತ ಉಪನಿರ್ದೇಶಕಿ ಡಾ.ಟಿ.ಸಿ ಪೂರ್ಣಿಮಾ ತಿಳಿಸಿದರು.

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದ್ಮಾ ಜಿ.ಮಾದೇಗೌಡಪ್ರತಿಷ್ಠಾನ ಸಹಯೋಗದಲ್ಲಿ ನಡೆದ 10ನೇ ವರ್ಷದ ಪದ್ಮಾ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ದಾಪುಗಾಲು ಇಡುತ್ತಿದ್ದಾರೆ. ನಾವು ನಡೆಯುವ ಹಾದಿ ಒಳ್ಳೆಯದಾದರೆ ನಮ್ಮನ್ನು ನೋಡಿ ಇತರರು ಒಳ್ಳೆಯ ಹಾದಿಯಲ್ಲೇ ಬರುತ್ತಾರೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯು ಛಲದಿಂದ ಗುರಿ ಸಾಧಿಸಬೇಕು. ಹೆಣ್ಣು-ಗಂಡಿನಲ್ಲಿ ಸಾಮರಸ್ಯ ಜೀವನ ಇರಬೇಕೇ ಹೊರತು ಮೇಲುಕೀಳು ಇರಬಾರದು ಎಂದು ಸಲಹೆ ನೀಡಿದರು.

ಸಾಹಿತಿ ಡಾ. ಶೂಭಶ್ರೀ ಪ್ರಸಾದ್ ಮಾತನಾಡಿ, ಅಸಮಾನತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಹೆಣ್ಣು ಭ್ರೂಣ ಹತ್ಯೆಯೇ ಪ್ರಮುಖ ಸಾಕ್ಷಿ. ಹೆಣ್ಣು ಭ್ರೂಣ ಹತ್ಯೆಯಲ್ಲಿ ಪುರುಷರ ಪಾತ್ರ ಎಷ್ಟಿದೆಯೋ ಮಹಿಳೆಯರ ಪಾತ್ರವೂ ಕೂಡ ಅಷ್ಟೆ ಇದೆ ಎಂಬುದನ್ನು ಹೇಳಿಕೊಳ್ಳಲು ಹೆಣ್ಣಾದ ನಮಗೇ ನಾಚಿಕೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾಕೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದಿಲ್ಲ?. ಯಾಕೆ ನಾವು ಹೆಣ್ಣಾಗಿ ಮತ್ತೊಂದು ಹೆಣ್ಣು ಮಗು ಈ ಭೂಮಿಗೆ ಕಾಲಿಡಬಾರದು ಎಂಬುದನ್ನು ಪ್ರಶ್ನಿಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.

ಶಾರೀರಿಕ ವ್ಯತ್ಯಾಸವನ್ನು ಹೊರತುಪಡಿಸಿದರೆ ಗಂಡು, ಹೆಣ್ಣಿನ ನಡುವೆ ಯಾವುದೇ ರೀತಿಯ ಬೇಧವಿಲ್ಲ. ಆದರೂ ಸಮಾಜದಲ್ಲಿ ಗಂಡು, ಹೆಣ್ಣಿನ ನಡುವೆ ಬೇಧ ಕಲ್ಪಿಸಲಾಗುತ್ತಿದೆ. ಪುರುಷ, ಸ್ತ್ರೀ ಎಂಬ ಸಮಾನತೆ ವಿಚಾರ ಕುರಿತು ಮಾತನಾಡುವ ಅವಶ್ಯಕತೆಯಿಲ್ಲ. ಪುರುಷ, ಮಹಿಳೆಯರು ತಾನೇ ಹೆಚ್ಚು ಎಂಬುದನ್ನು ಬಿಡಬೇಕು. ಹಾಗಾದಲ್ಲಿ ಮಾತ್ರ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದು ಹೇಳಿದರು.

ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮಧು ಜಿ. ಮಾದೇಗೌಡ ಮಾತನಾಡಿ, ಪ್ರತೀ ವರ್ಷವು ನಮ್ಮ ತಾಯಿ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ವೇದಿಕೆಯಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ನಮಗೆ ಸಂತಸ ತಂದಿದೆ. ತಂದೆ ಕಟ್ಟಿದ ವಿದ್ಯಾಸಂಸ್ಥೆಯನ್ನು ಮತ್ತಷ್ಟು ಅಭಿವೃದ್ದಿ ಪಡಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಮುಂದಾಗುತ್ತೇನೆ ಎಂದರು.

ಇದೇ ವೇಳೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಿಬ್ಬಂದಿಗಳಿಗೆ ನಡೆಸಲಾದ ಹಲವು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾರತೀ ಕಾಲೇಜಿನ ಉಪನ್ಯಾಸಕಿ ಮಮತಾ ನಾಗ್ ಅವರು ರಚಿಸಿರುವ ಪ್ರಮುಖ ಧಾರ್ಮಿಕ ಹಬ್ಬಗಳ ಆಚರಣೆ ಕುರಿತ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಎಚ್ ಕೆವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಲತಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದಿ.ಜಿ.ಮಾದೇಗೌಡ ಪತ್ನಿ ಪದ್ಮ ಜಿ.ಮಾದೇಗೌಡ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ.ನಂಜೇಗೌಡ, ಬಿಇಟಿ ಸಿಇಒ ಆಶಯ್‌ ಜಿಮಧು, ಕಾರ್ಯದರ್ಶಿ ಸಿದ್ದೇಗೌಡ, ಟ್ರಸ್ಟಿ ಬಸವೇಗೌಡ, ಗ್ರಾಪಂ ಅಧ್ಯಕ್ಷೆ ಕೌಶಲ್ಯ, ಪ್ರಾಂಶುಪಾಲ ಡಾ.ಪಿ.ನಾಗೇಂದ್ರ ಮುಖ್ಯ ಶಿಕ್ಷಕಿ ಎಚ್.ಪಿ.ಪ್ರತಿಮಾ ಉಪಸ್ಥಿತರಿದ್ದರು.

Share this article