ಪೊಲೀಸ್-ಜನಸಮುದಾಯದ ನಡುವೆ ನಿಕಟ ಸಂಬಂಧ ಇರಲಿ

KannadaprabhaNewsNetwork | Published : Oct 22, 2023 1:01 AM

ಸಾರಾಂಶ

ಬಳ್ಳಾರಿ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಶನಿವಾರ ಪೊಲೀಸ್ ಹುತಾತ್ಮ ದಿನಾಚರಣೆ ನಡೆಯಿತು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಪಾಲ್ಗೊಂಡು ಮಾತನಾಡಿ, ಪೊಲೀಸ್ ಮತ್ತು ಜನಸಮುದಾಯದ ನಡುವಿನ ಸಂಬಂಧ ನಿಕಟವಾಗಿರಬೇಕು ಹಾಗೂ ಪರಸ್ಪರ ನಂಬಿಕೆಗಳು ಬೆಳೆಯಬೇಕು ಎಂದು ಆಶಿಸಿದರು. ಸಮಾರಂಭದಲ್ಲಿ ಹಾಜರಿದ್ದ ನಗರದ ಗಣ್ಯರು, ಹಿರಿಯ ಪೊಲೀಸ್ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಹುತಾತ್ಮರ ಗೌರವ ಸೂಚಕವಾಗಿ ಮೂರು ಬಾರಿ ಕುಶಾಲುತೋಪು ಹಾರಿಸುವ ಮೂಲಕ ಸಂತಾಪ ಸೂಚಿಸಲಾಯಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿಪೊಲೀಸ್ ಮತ್ತು ಜನಸಮುದಾಯದ ನಡುವಿನ ಸಂಬಂಧ ನಿಕಟವಾಗಿರಬೇಕು ಹಾಗೂ ಪರಸ್ಪರ ನಂಬಿಕೆಗಳು ಬೆಳೆಯಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಶನಿವಾರ ಜರುಗಿದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾರ್ವಜನಿಕರ ಸೇವೆಯಲ್ಲಿರುವ ಪೊಲೀಸರು ನಿತ್ಯ ಅನೇಕ ಸವಾಲುಗಳು ಹಾಗೂ ಅಪಾಯಕಾರಿ ಸಂದರ್ಭಗಳನ್ನು ಎದುರಿಸುತ್ತಾರೆ. ಸೇವೆಯಲ್ಲಿರುವಾಗಲೇ ಅನೇಕರು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತವೆ. ಅಂತಹ ಪೊಲೀಸರ ತ್ಯಾಗ-ಬಲಿದಾನಗಳನ್ನು ಎಂದೂ ಮರೆಯಬಾರದು. ಉತ್ತಮ ಹಾಗೂ ಸುರಕ್ಷಿತ ನಾಳೆಗಳಿಗೆ ಪೊಲೀಸರಿಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್. ಲೋಕೇಶ್ ಕುಮಾರ್ ಮಾತನಾಡಿ, ಪೊಲೀಸರ ತ್ಯಾಗ-ಬಲಿದಾನ ಸ್ಮರಿಸಲು ಅ. 21ರಂದು ಇಡೀ ದೇಶದಾದ್ಯಂತ ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಪೊಲೀಸರನ್ನು ಗೌರವಪೂರ್ವಕವಾಗಿ ಸ್ಮರಿಸುವ ಹಾಗೂ ಮನಮಿಡಿಯುವ ಕಾರ್ಯಕ್ರಮ ಇದಾಗಿದೆ. ಸೇವೆಯಲ್ಲಿರುವಾಗಲೇ ಹುತಾತ್ಮರಾದ ಪೊಲೀಸರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ ಎಂದರಲ್ಲದೆ, ನಮಗಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಕುಟುಂಬಗಳಿಗೆ ಒಳಿತಾಗಲಿ ಹಾಗೂ ಪೊಲೀಸ್ ಬಲಿದಾನಗಳು ಕಡಿಮೆಯಾಗಲಿ ಎಂದು ಆಶಿಸಿದರು.

ಪೊಲೀಸ್ ಹುತಾತ್ಮ ದಿನಾಚರಣೆ ಹಿನ್ನೆಲೆ ಕುರಿತು ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ೧೯೫೯ರ ಅ. ೨೧ರಂದು ಸಿಆರ್‌ಪಿಎಫ್‌ನ ಡಿವೈಎಎಸ್ಪಿ ಕರಣ್‌ಸಿಂಗ್ ಅವರ ನೇತೃತ್ವದಲ್ಲಿ ಒಂದು ಸಿಆರ್‌ಪಿಎಫ್ ತುಕಡಿ ಲಡಾಕ್ ಪ್ರದೇಶದಲ್ಲಿರುವ ಹಾಟ್ ಸ್ಟ್ರಿಂಗ್ ಹತ್ತಿರ ಗಸ್ತು ನಡೆಸುತ್ತಿರುವಾಗ, ಸುಸಜ್ಜಿತ ಮದ್ದುಗುಂಡುಗಳು ಮತ್ತು ಆಯುಧಗಳನ್ನು ಹೊಂದಿದ್ದ ಚೀನಾ ದೇಶದ ಸೈನಿಕರು ದಾಳಿ ನಡೆಸುತ್ತಾರೆ. ಭಾರತದ ಜವಾನರು ಧೈರ್ಯ ಮತ್ತು ಸಾಹಸದಿಂದ ಚೀನಾ ದೇಶದ ಸೈನಿಕರೊಂದಿಗೆ ಹೋರಾಡುತ್ತಾರೆ. ಹೋರಾಟದಲ್ಲಿ ೧೦ ಮಂದಿ ಸಿ.ಆರ್.ಪಿ.ಎಫ್. ಜವಾನರು ವೀರ ಮರಣ ಹೊಂದುತ್ತಾರೆ ಹಾಗೂ ೯ ಮಂದಿಯನ್ನು ಚೀನಾ ದೇಶದ ಸೈನಿಕರು ದಸ್ತಗಿರಿ ಮಾಡುತ್ತಾರೆ. ಸಿಆರ್‌ಪಿಎಫ್ ಜವಾನರ ಧೈರ್ಯ, ಸಾಹಸ ಹಾಗೂ ಆತ್ಮ ಸಮರ್ಪಣೆಯನ್ನು ಭಾರತ ದೇಶದ ಎಲ್ಲ ಪ್ರಜೆಗಳು ಇಂದಿಗೂ ಸ್ಮರಿಸುತ್ತಾರೆ. ಅವರ ಸವಿನೆನಪಿಗಾಗಿ ಒಂದು ಸ್ಮಾರಕವನ್ನೂ ನಿರ್ಮಿಸಲಾಗಿದೆ. ವೀರ ಮರಣವನ್ನು ಅಪ್ಪಿದ ಎಲ್ಲ ಸಮವಸ್ತ್ರಧಾರಿ ಅಧಿಕಾರಿ ಮತ್ತು ಸಿಬ್ಬಂದಿ ನೆನಪು ಹಾಗೂ ಶಾಂತಿಗಾಗಿ ದೇಶಾದ್ಯಂತ ಅ. ೨೧ರಂದು ಪೊಲೀಸ್ ಹುತಾತ್ಮ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ೨೦೨೨-೨೩ನೇ ಸಾಲಿನಲ್ಲಿ ಇಡೀ ಭಾರತ ದೇಶದಲ್ಲಿ ಮರಣ ಹೊಂದಿದ ಒಟ್ಟು ೧೮೯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಲ್ಲಿ ಕರ್ನಾಟಕ ರಾಜ್ಯದ ೧೬ ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸಹ ಕರ್ತವ್ಯ ಪಾಲನೆಯಲ್ಲಿ ಮರಣ ಹೊಂದಿದ್ದಾರೆ ಎಂದರು.

ಸಮಾರಂಭದಲ್ಲಿ ಹಾಜರಿದ್ದ ನಗರದ ಗಣ್ಯರು, ಹಿರಿಯ ಪೊಲೀಸ್ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಹುತಾತ್ಮರ ಗೌರವ ಸೂಚಕವಾಗಿ ಮೂರು ಬಾರಿ ಕುಶಾಲುತೋಪು ಹಾರಿಸುವ ಮೂಲಕ ಸಂತಾಪ ಸೂಚಿಸಲಾಯಿತು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಎಎಸ್ಪಿ ಕೆ.ಪಿ. ರವಿಕುಮಾರ್, ಲೋಕಾಯುಕ್ತ ಎಸ್ಪಿ ಎಂ.ಎನ್. ಶಶಿಧರ ಮತ್ತಿತರರಿದ್ದರು.

Share this article