ಪ್ರತಿದಿನ ಜ್ಞಾನ ಪಡೆಯುವ ತುಡಿತ ಇರಬೇಕು: ನ್ಯಾ. ಇ.ಎಸ್. ಇಂದಿರೇಶ್

KannadaprabhaNewsNetwork |  
Published : Jul 06, 2025, 01:48 AM IST
05ಜಡ್ಜ್‌ | Kannada Prabha

ಸಾರಾಂಶ

ಉಡುಪಿ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಸಿವಿಲ್ ಜಡ್ಜ್ ಪರೀಕ್ಷಾರ್ಥಿಗಳ ತರಬೇತಿ ಕಾರ್ಯಕ್ರಮ ಮತ್ತು ಇ-ಲೈಬ್ರರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಐದು ವರ್ಷ ನ್ಯಾಯಾಧೀಶರ ಪರೀಕ್ಷಾರ್ಥಿಗಳ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ್ದೇನೆ. ಅನೇಕ ಸಂಗತಿಗಳ ಬಗ್ಗೆ ಅಭ್ಯರ್ಥಿಗಳು ಗಮನ ಹರಿಸುತ್ತಿಲ್ಲ ಎಂಬುದು ನನ್ನ ಗಮನದಲ್ಲಿದೆ. ಉಡುಪಿ ವಕೀಲರ ಸಂಘದ ಈ ಕಾರ್ಯಕ್ರಮ ಅಂತಹ ಅನೇಕ ವಿಷಯಗಳನ್ನು ಪರೀಕ್ಷಾರ್ಥಿಗಳಿಗೆ ತಿಳಿದುಕೊಳ್ಳಲು ಸಹಕಾರಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗು ಜಿಲ್ಲಾ ಆಡಳಿತಾತ್ಮಕ ನ್ಯಾ. ಇ.ಎಸ್ ಇಂದಿರೇಶ್ ಅಭಿಪ್ರಾಯಪಟ್ಟರು.ಅವರು ಶನಿವಾರ, ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಸಿವಿಲ್ ಜಡ್ಜ್ ಪರೀಕ್ಷಾರ್ಥಿಗಳ ತರಬೇತಿ ಕಾರ್ಯಕ್ರಮ ಮತ್ತು ಇ-ಲೈಬ್ರರಿ ಉದ್ಘಾಟಿಸಿ ಮಾತನಾಡಿದರು.ಕಾನೂನು ವಿದ್ಯಾರ್ಥಿಗಳು ಸಂವಿಧಾನ ವಿಷಯವನ್ನು ಭಿನ್ನ ರೀತಿಯಲ್ಲಿ ನೋಡುವ ಅಗತ್ಯವಿದೆ. ಬುದ್ದಿವಂತಿಕೆ ಮಾತ್ರವಲ್ಲದೇ, ವಿಷಯವನ್ನು ಹೇಗೆ ಪ್ರತಿಪಾದಿಸುತ್ತೇವೆ ಎಂಬುದು ಗಣನೀಯ ಅಂಶವಾಗಲಿದೆ. ಕಾನೂನು ಬದಲಾಗುತ್ತಿರುತ್ತದೆ. ಇಂದು ಸರಿ ಅನಿಸಿದ್ದು, ನಾಳೆಗೆ ಬೇರೆಯದ್ದೇ ವ್ಯಾಖ್ಯಾನವನ್ನು ನೀಡುತ್ತಿರುತ್ತದೆ. ಕಾನೂನು ಪದವಿ ಪಡೆದ ಕೂಡಲೇ ಆತನ ವಿದ್ಯಾರ್ಥಿ ಜೀವನ ಕೊನೆಗೊಳ್ಳದು. ವಕೀಲನಾದ ಬಳಿಕ ಆತನ ನಿಜವಾದ ಕಲಿಯುವಿಕೆ ಆರಂಭಗೊಳ್ಳುತ್ತದೆ. ಪ್ರತಿದಿನ ಜ್ಞಾನವನ್ನು ಪಡೆಯುವ ತುಡಿತ ಇರಬೇಕು ಎಂದರು. ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಹಾಗೂ ವಿಶ್ರಾಂತ ಹೈಕೋರ್ಟ್ ನ್ಯಾ. ಟಿಜಿ ಶಿವಶಂಕರೇಗೌಡ, ಸಿವಿಲ್ ನ್ಯಾಯಧೀಶರಾಗ ಬಯಸುವ ಅಭ್ಯರ್ಥಿಗಳಿಗೆ ಸಲಹೆ ಮತ್ತು ತಂತ್ರಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್.ಎಸ್.ಗಂಗಣ್ಣನವರ್ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಬಸವರಾಜ್ ಶುಭ ಹಾರೈಸಿದರು. ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಿಗೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎಆರ್ ಮನವಿ ಪತ್ರ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಯೊಗೇಶ್ ಪಿಆರ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.

PREV