ಕನ್ನಡ ಭಾಷೆ ಉಳಿಸಿ ಬೆಳೆಸಲು ಜನಾಂದೋಲನ ವಾಗಬೇಕು: ಡಾ.ಸಂತೋಷ್ ಹಾನಗಲ್

KannadaprabhaNewsNetwork |  
Published : Aug 30, 2025, 01:00 AM IST
ರಂಗೇನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರದ ಉದ್ಗಾಟನಾ ಸಮಾರಂಭ | Kannada Prabha

ಸಾರಾಂಶ

ತರೀಕೆರೆ, ನಮ್ಮ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಒಂದು ಜನಾಂದೋಲನವೇ ನಡೆಯಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಅಭಿಪ್ರಾಯ ಪಟ್ಟರು.

- ರಂಗೇನಹಳ್ಳಿಯಲ್ಲಿ ರಾಷ್ಟ್ರಮಟ್ಟದ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ನಮ್ಮ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಒಂದು ಜನಾಂದೋಲನವೇ ನಡೆಯಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಅಭಿಪ್ರಾಯ ಪಟ್ಟರು.ಶುಕ್ರವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಸದ್ಗುರು ಜನಸೇವಾ ಫೌಂಡೇಶನ್ ತರೀಕೆರೆ, ಅರಿವು ವೇದಿಕೆ ತರೀಕೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಜಿಲ್ಲೆ, ತಾಲೂಕು ಕಸಾಪ ಸಹಯೋಗದಲ್ಲಿ ರಂಗೇನಹಳ್ಳಿ ಶ್ರೀ ಅಂಭಾಭವಾನಿ ಸಮುದಾಯ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಶಾಲೆಗಳು ಮುಚ್ಚುತ್ತಿರುವ ಹಾಗೂ ಅವು ಆಂಗ್ಲ ಶಾಲೆಗಳಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಶಿಕ್ಷಕರು ಆಂಗ್ಲಭಾಷೆ ಭೋಧಿಸುವ ಪರಿಸ್ಥಿತಿ ಎದುರಾಗಿದೆ. ಇಂತಹ ಸ್ಥಿತಿ ಬದಲಾಗಲು ಜನಾಂದೋಲನದ ಅಗತ್ಯವಿದೆ ಎಂದರು.ಕನ್ನಡ ಬಾಷೆ, ಸಂಸ್ಕೃತಿ ಬಗ್ಗೆ ಜನರು ಅಭಿಮಾನ ತೋರಿಸಬೇಕು. ಸಂಸ್ಕೃತಿ, ಸಮಾನತೆ ಮತ್ತು ಸಹೋದರತೆ ಇಂದು ಬಹುಮುಖ್ಯವಾಗಿದೆ. ಕನ್ನಡ ಭಾಷಾ ಅಸ್ಮಿತೆಯನ್ನು ಕಟ್ಟಿ ಬೆಳೆಸಬೇಕು. 12ನೇ ಶತಮಾನದಲ್ಲೇ ಶರಣರು ಕನ್ನಡಕಟ್ಟಿ ಬೆಳೆಸಿದ್ದರು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರತಿಯೊಂದು ಜಿಲ್ಲೆಯಲ್ಲೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಾಗಾರ ಆಯೋಜಿಸುತ್ತಿದೆ. ಚಿಕ್ಕ ಗ್ರಾಮಕ್ಕೆ ದೊಡ್ಡವರನ್ನು ಆಹ್ವಾನಿಸಿ ಭಾಷೆ ಸ್ಥಾನ ಮಾನ, ಭಾಷೆ ಉಳಿಸಿ ಬೆಳೆಸುವ ಕುರಿತು ಚರ್ಚಿಸಲಾಗುತ್ತಿದೆ. ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಎಲ್ಲರನ್ನೂ ಒಳಗೊಂಡಂತೆ ಕನ್ನಡಿಗರು ಏನು ಮಾಡಬೇಕು ? ಏನು ಮಾಡಬಹುದು ಎಂಬ ಬಗ್ಗೆ ಶಿಬಿರಾರ್ಥಿಗಳ ಜೊತೆ ಚಿಂತನೆ ನಡೆಸಿ ಸರ್ಕಾರಕ್ಕೆ ಪುಸ್ತಕ ರೂಪದಲ್ಲಿ ವರದಿ ಕೊಡಬೇಕೆಂಬುದು ಈ ಕಾರ್ಯಾಗಾರದ ಮೂಲ ಉದ್ದೇಶ ಎಂದು ಹೇಳಿದರು.

ರಾಜಧಾನಿ ಬೆಂಗಳೂರಲ್ಲಿ ಜನರು 116 ಉಪ ಭಾಷೆಗಳನ್ನು ಉಪಯೋಗಿಸುತ್ತಾರೆ. ಕನ್ನಡ ಭಾಷೆಗೆ ಅಧ್ಯತೆ ಕೊಡಬೇಕು. ಜನರ ಮದ್ಯೆಯೇ ಕನ್ನಡ ಭಾಷೆ ಬೆಳೆಯಬೇಕು ಎಂದು ಪ್ರತಿಪಾದಿಸಿದರು.ಸಂಸ್ಕೃತಿ ಚಿಂತಕ ಹಾಗೂ ಶಿಬಿರದ ನಿರ್ದೇಶಕ ಡಾ.ರಾಜಪ್ಪ ದಳವಾಯಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ ನಡೆಯುತ್ತಿದೆ. ಕಾರ್ಯಾಗಾರ ಎಂದರೆ ಕಮ್ಮಟ ಎಂದು ಅರ್ಥ. ಇದು ಅತ್ಯಂತ ಮಹತ್ವದ್ದು, ಶಿಕ್ಷಕರು ಒಳ್ಳೆಯ ಅಭಿಪ್ರಾಯ ಮೂಡಿಸುತ್ತಾರೆ. ಸಮಾಜದ ವಿಜ್ಞಾನಿಗಳಾದ ಶಿಕ್ಷಕರಿಂದ ರೂಪುಗೊಂಡ ವಿದ್ಯಾರ್ಥಿಗಳೇ ದೇಶದ ಭವಿಷ್ಯ ನಿರ್ಮಾಣ ಮಾಡುವವರು ಎಂದರು.ಸಮಾನತೆ, ಸಹೋದರತೆಯನ್ನು ನಮ್ಮ ಮುಂದಿನ ಪೀಳಿಗೆಗೆ ಭಾಷೆ, ಸಂಸ್ಕೃತಿ ಸಾಹಿತ್ಯದ ಹಿನ್ನೆಲೆ ಯಲ್ಲಿ ತಿಳಿಸಬೇಕು. ಕಮ್ಮಟದಲ್ಲಿ ಬೌದ್ದಿಕ ತಿಳುವಳಿಕೆ ನೀಡುವ ಮೂಲಕ ವೈಚಾರಿಕವಾಗಿ ಯೋಚಿಸುವವರ ಸಂಖ್ಯೆ ಹೆಚ್ಚಾಗಲು ಪ್ರೇರೆಪಿಸ ಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಡಳಿತದಲ್ಲಿ ಕನ್ನಡ ಭಾಷೆ ಜಾರಿ ಮಾಡಿದೆ. ಕನ್ನಡೇ ತರರಿಗೆ ಕನ್ನಡ ಕಲಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಜಿಲ್ಲೆಯಲ್ಲಿ ಈ ಹಿಂದೆ ಪ್ರಾಧಿಕಾರದಿಂದ ಕನ್ನಡದಲ್ಲಿ ಓದು-ಗ್ರಹಿಕೆ ಕಾರ್ಯಾಗಾರ ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ವಿಶ್ವ ವಿದ್ಯಾನಿಲಯ ಉಪನ್ಯಾಸಕರನ್ನು ಆಹ್ವಾನಿಸೋಣ ಎಂದು ಸಲಹೆ ಮಾಡಿದರು. ಶಿಬಿರದ ನಿರ್ದೇಶಕರಾದ ಡಾ.ರಾಜಪ್ಪ ದಳವಾಯಿ ರಾಷ್ಟ್ರಮಟ್ಟದಲ್ಲಿ ಬೆಳೆದಿದ್ದಾರೆ ಎಂದು ಶ್ಲಾಘಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ ಚಿಕ್ಕಗ್ರಾಮದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ.ರವಿಕುಮಾರ್ ನೀಹ ಮಾತನಾಡಿ ಕಾರ್ಯಾಗಾರ ಒಂದು ವಿನೂತನ ಕಾರ್ಯಕ್ರಮ ಎಂದು ಹೇಳಿದರು.

ಸದ್ಗುರು ಜನಸೇವಾ ಫೌಂಡೇಶನ್ ಅಧ್ಯಕ್ಷ ಟಿ.ಎನ್.ಜಗದೀಶ, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಎಸ್.ಎಸ್.ವೆಂಕಟೇಶ್, ತಾ.ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಉಮಾ ಪ್ರಕಾಶ್, ಡಾ.ಮರುಳಸಿದ್ದಯ್ಯ ಪಟೇಲ್, ಮಂಜುನಾಥ್, ಎಚ್.ಬಿ.ಶ್ರೀಕಂಠಮೂರ್ತಿ, ಶಂಕರಪ್ಪ, ಗಾಯಿತ್ರಿ ರವಿ, ಪ್ರತಿಭಾ ಮತ್ತಿತರರು ಭಾಗವಹಿಸಿದ್ದರು.

-29ಕೆಟಿಆರ್.ಕೆ.4ಃ ತರೀಕೆರೆ ಸಮೀಪದ ರಂಗೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕರು, ರಂಗಕರ್ಮಿಗಳು ಡಾ.ರಾಜಪ್ಪ ದಳವಾಯಿ ಉದ್ಘಾಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್, ತಾ.ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಭಾಗವಹಿಸಿದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ