ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರಿ ಇಲಾಖೆಗಳೊಂದಿಗೆ ಬ್ಯಾಂಕ್‌ಗಳು ಸಮನ್ವಯ, ಸಹಕಾರ ನೀಡಿದಾಗ ಮಾತ್ರ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಲು ಸಾದ್ಯವಾಗಲಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಸೋಮವಾರ ಜರುಗಿದ ಲೀಡ್ ಬ್ಯಾಂಕ್ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಘೋಷಿಸುವದಷ್ಟೇ ಅಲ್ಲ ಅವುಗಳನ್ನು ಅನುಷ್ಠಾನಗೊಳಿಸುವುದು ಕೂಡ ಮುಖ್ಯವಾಗಿರುತ್ತದೆ. ಫಲಾನುಭಿಗಳನ್ನು ಅನಗತ್ಯವಾಗಿ ಅಲೆದಾಡಿಸುವ ಪದ್ದತಿ ಬಿಟ್ಟು, ಪ್ರಾಥಮಿಕ ಹಂತದಲ್ಲೇ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಬ್ಯಾಂಕ್ ಅಧಿಕಾರಿಗಳು ಸಾಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಸೂಚಿಸಿದರು.
ಸರಕಾರದ ವಿವಿಧ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿ ಸೂಕ್ತ ಮಾರ್ಗದರ್ಶನ ನೀಡಬೇಕು. ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು, ಜನರಿಗೆ ತೊಂದರೆ ಕೊಡದೆ, ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲಿಸಬೇಕು, ಯಾವ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಫಲಕಗಳಲ್ಲಿ ಪ್ರದರ್ಶಿಸಿ, ತಾಂತ್ರೀಕ ತೊಂದರೆಗಳಿದ್ದಲ್ಲಿ ತಿಳಿಸಿ, ಅವಶ್ಯಕತೆ ಇರುವವರಿಗೆ ಆಧ್ಯತೆಯ ಮೇರೆಗೆ ಸಾಲ ಸೌಲಭ್ಯ ಒದಗಿಸಬೇಕು. ಒಟ್ಟಾರೆಯಾಗಿ ಸಾರ್ವಜನಿಕರಿಗೆ ತೊಂದರೆ ಆಗದಂಂತೆ ಕಾರ್ಯನಿರ್ವಹಿಸಬೇಕು ಎಂದರು.ಇಲಾಖೆಯ ಅಧಿಕಾರಿಗಳು ಬ್ಯಾಂಕ್ಗಳಿಗೆ ತೆರಳಿ ಆಸಕ್ತಿ ವಹಿಸಿ ವಿವಿಧ ಯೋಜನೆಯಡಿ ಸಿಗುವ ಸಾಲ ಸೌಲಭ್ಯ ದೊರಕಿಸಿಕೊಡಿ, ಸಣ್ಣಪುಟ್ಟ ಕಾರಣಕ್ಕೆ ತಡೆ ಹಿಡಿಸುವ ಕೆಲಸ ಮಾಡಬೇಡಿ ಎಂದು ಅಂಬೇಡ್ಕರ್ ನಿಗಮ ಸೇರಿ ವಿವಿಧ ನಿಗಮಗಳ ಅಧಿಕಾರಿಗಳನ್ನು ಎಚ್ಚರಿಸಿದರು.
ಇಂದಿನ ದಿನಮಾನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿರವದರಿಂದ ಯುವ ಸಮೂಹವನ್ನು ಸ್ವಯಂ ಉದ್ಯೋಗಕ್ಕೆ ಉತ್ತೇಜಿಸಬೇಕಾಗಿದೆ. ರೈತರೇ ಆಸಕ್ತಿ ಕಳೆದುಕೊಳ್ಳುತ್ತಿರುವದರಿಂದ ಯುವಕರು ಕೃಷಿಗಿಂತ ಇತರೇ ಉದ್ಯಮಗಳತ್ತ ಒಲವು ತೋರುತ್ತಿದ್ದು, ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ಯೋಜನೆಗಳ ಬಗ್ಗೆ ಪ್ರಚಾರ ಪಡಿಸಿ ಸೂಕ್ತ ಮಾರ್ಗದರ್ಶನ ನೀಡಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಿ ಯುವಕರು ನವ ಉದ್ಯಮಿಗಳಾಗಲು ಪ್ರೇರಪಿಸಬೇಕಾಗಿದೆ ಎಂದರು.ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಮಾತನಾಡಿ, ಬ್ಯಾಂಕ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭಿಗಳ ಅರ್ಜಿಗಳು ತಿರಸ್ಕೃತಗೊಂಡಿದ್ದು, ಈ ಬಗ್ಗೆ ಆಯಾ ಬ್ಯಾಂಕ್ ವ್ಯವಸ್ಥಾಪಕರು ಗಮನ ಹರಿಸಬೇಕು. ಯಾವ ಬ್ಯಾಂಕಿನಲ್ಲಿ ಅರ್ಜಿಗಳು ಬಾಕಿ ಉಳಿದಿವೆಯೋ ಅವೆಲ್ಲವೂ ಮುಂದಿನ ಹದಿನೈದು ದಿನದೊಳಗಾಗಿ ವಿಲೆವಾರಿಯಾಗಬೇಕು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಬಾಗಲಕೋಟೆ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಆರ್ ಬಿ ಐ ಬ್ಯಾಂಕ್ ಅಧಿಕಾರಿ ವಿಜಯಶ್ರಿ, ನಬಾರ್ಡ ಡಿ ಡಿ ಎಮ್ ಮಂಜುನಾಥ ರೆಡ್ಡಿ ಎಸ್ ಸೇರಿದಂತೆ ಇತರರು ಇದ್ದರು.