- ಕೃಷಿ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ । ಮುಂಗಾರು ಹಂಗಾಮು ಪೂರ್ವಭಾವಿ ಸಭೆ - - -
ನಗರದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಮುಂಗಾರು ಆರಂಭದ ಪೂರ್ವದಲ್ಲೇ ಉತ್ತಮ ಮಳೆ ಶುರುವಾಗಿದೆ. ರೈತರು ಸಹ ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ ಎಂದರು.
ರೈತರಿಗೆ ಯಾವುದೇ ರೀತಿಯಲ್ಲೂ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಕೃತಕ ಅಭಾವ ಉಂಟಾಗಬಾರದು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಠಿಸುವವರು ಯಾರೇ ಆಗಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಆಗದಂತೆ ಜಾಗ್ರತೆ ವಹಿಸಬೇಕು. ಪ್ರತಿ ವರ್ಷ ರೈತರಿಂದ ಬಿತ್ತನೆ ಬೀಜ, ರಸಗೊಬ್ಬರ ಕಳಪೆಯಾಗಿವೆ ಎಂಬ ಆರೋಪಗಳು ಕೇಳಿಬರುತ್ತವೆ. ಇನ್ನು ಅಂಥ ಆರೋಪಗಳಿಗೆಲ್ಲಾ ಅವಕಾಶ ಕೊಡಬೇಡಿ. ಬಿತ್ತನೆಬೀಜ, ರಸಗೊಬ್ಬರ ರೈತರಿಗೆ ಪೂರೈಸುವ ಪೂರ್ವದಲ್ಲಿ ಪರೀಕ್ಷೆಗೆ ಒಳಪಡಿಸಿ, ಗುಣಮಟ್ಟ ಖಾತ್ರಿಪಡಿಸಿಕೊಂಡು ರೈತರಿಗೆ ಬೀಜ, ರಸಗೊಬ್ಬರ ಪೂರೈಸಬೇಕು ಎಂದು ಹೇಳಿದರು.
ಒಂದುವೇಳೆ ಕಳಪೆ ಬೀಜ, ರಸಗೊಬ್ಬರ ಪೂರೈಕೆ ಮಾಡಿರುವ ಬಗ್ಗೆ ಆರೋಪಗಳು ಕೇಳಿಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಳಪೆ ಬಿತ್ತನೆಬೀಜ, ಗೊಬ್ಬರ ಪೂರೈಕೆ ಆಗುತ್ತಿದ್ದರೂ ಕಣ್ಣುಮುಚ್ಚಿ ಕುಳಿತುಕೊಳ್ಳುವ ಕೃಷಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದೀತು. ಯಾವುದೇ ಕಾರಣಕ್ಕೂ ನಮ್ಮ ರೈತರಿಗೆ ಕಳಪೆ ಬಿತ್ತನೆಬೀಜ, ರಸಗೊಬ್ಬರ ಮಾರಾಟ ಆಗದಂತೆ ನೋಡಿಕೊಳ್ಳಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸರ್ಕಾರಿ ದರದಲ್ಲೇ ಮಾರಾಟ ಮಾಡಿ:
ಸಭೆಯಲ್ಲಿ ಶಾಸಕರು ಮುಂಗಾರು ಬೆಳೆಗಳ ಮಾಹಿತಿ ಪತ್ರ ಬಿಡುಗಡೆ ಬಿಡುಗಡೆಗೊಳಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ, ಕೃಷಿ ಅಧಿಕಾರಿಗಳಾದ ಬೀರಪ್ಪ, ಚಂದ್ರಪ್ಪ, ಸಂಜೀವ, ಶ್ರೀನಿವಾಸ ಮತ್ತಿತರರು ಇದ್ದರು.
(ಬಾಕ್ಸ್) ಹಾವೇರಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಬಂದು ಬ್ರ್ಯಾಂಡ್ ಇಲ್ಲದ ಬಿತ್ತನೆ ಬೀಜಗಳನ್ನು ನಮ್ಮ ರೈತರಿಗೆ ಮಾರಾಟ ಮಾಡುತ್ತಾರೆ. ಅಮಾಯಕ ರೈತರು ಕಡಿಮೆ ದರದಲ್ಲಿ ಅಂತಹ ಕಳಪೆ ಬೀಜಗಳೆಂಬ ಅರಿವಿಲ್ಲದೇ ಖರೀದಿಸಿ, ಬಿತ್ತನೆ ಮಾಡುತ್ತಾರೆ. ಕೊನೆಗೆ ಬೆಳೆ, ಇಳುವರಿ ಕೈ ಕೊಟ್ಟಾಗ ಪರಿತಪ್ಪಿಸುತ್ತಾರೆ. ಮೊದಲು ಹೊರಗಡೆಯಿಂದ ನಕಲಿ ಬಿತ್ತನೆ ಬೀಜಗಳನ್ನು ತಂದು ಮಾರಾಟ ಮಾಡುವುದನ್ನು ತಡೆಯಬೇಕು. ಅನಧಿಕೃತ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- - -
ದಾವಣಗೆರೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಮುಂಗಾರು ಬೆಳೆಗಳ ಮಾಹಿತಿ ಪತ್ರ ಬಿಡುಗಡೆ ಮಾಡಿದರು.