ಭಾಷೆ, ಜಾತಿ, ಧರ್ಮದ ಹೆಸರಲ್ಲಿ ಭಿನ್ನತೆ ಇರಬಾರದು: ಡಾ. ನಾಗರಾಜು ಬೂದಾಳು

KannadaprabhaNewsNetwork |  
Published : Oct 07, 2024, 01:36 AM IST
ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿರುವ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ | Kannada Prabha

ಸಾರಾಂಶ

ಸಾಮಾಜಿಕ ನ್ಯಾಯ ವಿಲ್ಲದೆ ಸಮಾನತೆ ಎಂಬುದು ಮರೀಚಿಕೆ. ಹಾಗಾಗಿ ಈ ಎರಡು ವಿಷಯಗಳೂ ದಸಂಸಕ್ಕೆ ಪ್ರಮುಖವಾಗಿವೆ. ಸಂವಿಧಾನದ ಆಧಾರದಲ್ಲಿ ಸಮಾಜ ಶಾಸ್ತ್ರೀಯ ವಾಸ್ತವವನ್ನು ಮುಂದಿಟ್ಟುಕೊಂಡು, ಈಗಿರುವ ಎಜೆ ಸದಾಶಿವ ಆಯೋಗದ ವರದಿ ಮತ್ತು ಕಾಂತರಾಜು ಆಯೋಗದ ವರದಿಯನ್ನು ದತ್ತಾಂಶಗಳ ಮೂಲಕ ಒಳಮೀಸಲಾತಿ ಜಾರಿಗೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ತುಮಕೂರು

ಭಾರತೀಯರೆಲ್ಲಾ ಒಂದೇ. ಅವರ ನಡುವೆ ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ಭಿನ್ನತೆ ಇರಬಾರದು ಎಂಬುದು ನಿಸರ್ಗಕ್ಕೆ ವಿರುದ್ಧವಾಗಿದೆ. ಬಹುತ್ವವೇ ಭಾರತದ ನಿಜವಾದ ತಿರುಳು ಎಂದು ಹಿರಿಯ ಚಿಂತಕ ಹಾಗೂ ನಿವೃತ್ತ ಪ್ರಾದ್ಯಾಪಕ ಡಾ.ನಟರಾಜು ಬೂದಾಳ್ ಪ್ರತಿಪಾದಿಸಿದ್ದಾರೆ.

ನಗರದ ಎಂಪ್ರೆಸ್ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿರುವ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ‘ದಲಿತ ಚಳವಳಿಯ ಚಾರಿತ್ರಿಕ ಮಹತ್ವ ಮತ್ತು ವರ್ತಮಾನದ ಸವಾಲುಗಳು’ ಎಂಬ ವಿಷಯ ಕುರಿತು ಮಾತನಾಡಿದರು.

ನಿಸರ್ಗ ಹೇಗೆ ಎಲ್ಲಾ ಪ್ರಾಣಿ, ಪಕ್ಷಿಗಳಿಗೆ ಅದರದ್ದೇ ಆದ ರೀತಿಯಲ್ಲಿ ಬದುಕಲು ಅವಕಾಶ ನೀಡಿದೆಯೋ, ಅದೇ ರೀತಿ ದೇಶದಲ್ಲಿ ಬದುಕುತ್ತಿರುವ ಎಲ್ಲಾ ಸಮುದಾಯಗಳ ನಡುವೆ ಭಿನ್ನತೆ ಇದೆ. ಅವರ ಆಚಾರ, ವಿಚಾರಗಳು ಬೇರೆ ಬೇರೆಯಾಗಿವೆ. ಎಲ್ಲವೂ ಒಂದೇ ಎಂಬುದು ಪ್ರಕೃತಿಗೆ ವಿರುದ್ಧವಾಗಿದೆ ಎಂದರು.

ಪುರಾಣದ ಬಲಿ ಚಕ್ರವರ್ತಿ ಪ್ರಕರಣ ಇಂದಿಗೂ ಮುಂದುವರೆದಿದೆ. ಶೇ. 2.5 ರಷ್ಟಿರುವ ಬ್ರಾಹ್ಮಣ ಧರ್ಮ, ಶೇ. 97 ರಷ್ಟಿರುವ ಶೂದ್ರ ಸಮಾಜವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಶೂದ್ರ ಸಮಾಜ ತಮ್ಮ ಆಚಾರ,ವಿಚಾರಗಳನ್ನು ಬದಿಗಿರಿಸಿ ನಿಧಾನವಾಗಿ ಬ್ರಾಹ್ಮಣ ಧರ್ಮವನ್ನು ಅನುಸರಿಸಲು ಮುಂದಾಗುತ್ತಿದ್ದೇವೆ. ಮನೆ ಕಟ್ಟುವುದು, ಮಗುವಿನ ಹೆಸರಿಡುವುದು. ಮಗನಿಗೆ ಮದುವೆ ಇಂತಹ ವಿಚಾರಗಳಲ್ಲಿ ಈಗಾಗಲೇ ಹಾಸು ಹೊಕ್ಕಾಗಿದೆ. ಇದನ್ನು ತಿರಸ್ಕರಿಸುವ ಧೈರ್ಯವನ್ನು ವಿದ್ಯಾವಂತ ದಲಿತರು ತೋರುತ್ತಿಲ್ಲ. ಇದು ವಿಪರ್ಯಾಸದ ಸಂಗತಿ. ವೈಜ್ಞಾನಿಕವಾಗಿ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕಿದೆ. ಇದೇ ಮುಂದಿರುವ ದೊಡ್ಡ ಸವಾಲು ಎಂದು ಡಾ.ನಟರಾಜ್ ಬೂದಾಳ್ ತಿಳಿಸಿದರು.

ಒಳ ಮೀಸಲಾತಿ ಸುಪ್ರಿಂಕೋರ್ಟಿನ ತೀರ್ಪು ಮತ್ತು ಸಾಮಾಜಿಕ ನ್ಯಾಯ ಕುರಿತು ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ, ಪರಿಶಿಷ್ಟರೆಲ್ಲಾ ಒಂದೇ ಎಂಬ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರ ತೀರ್ಪನ್ನು 2024ರ ಆಗಸ್ಟ್ 1 ರಂದು ಬಂದ ಸುಪ್ರಿಂಕೋರ್ಟು ತೀರ್ಪು ಒಡೆದು ಹಾಕಿದೆ. ಹೇಗೆ ಪ್ರಕೃತಿಯಲ್ಲಿ ಭಿನ್ನತೆ ಇದೆಯೋ, ಅದೇ ರೀತಿ ಪರಿಶಿಷ್ಟ ಜಾತಿಗಳಲ್ಲಿಯೂ ಭಿನ್ನತೆ ಇದೆ ಎಂಬುದು ಒಪ್ಪಿಕೊಂಡೇ ಸಾಮಾಜಿಕ ನ್ಯಾಯ ಹಾಗೂ ಸಮಾನ ಪ್ರಾತಿನಿದ್ಯ ಹಾಗೂ ಅದಕ್ಕೆ ಬೇಕಾದ ದತ್ತಾಂಶಗಳೊಂದಿಗೆ ಹೆಜ್ಜೆ ಇಡುವಂತೆ ಸೂಚಿಸಿದೆ ಎಂದರು.

ಸಾಮಾಜಿಕ ನ್ಯಾಯ ವಿಲ್ಲದೆ ಸಮಾನತೆ ಎಂಬುದು ಮರೀಚಿಕೆ. ಹಾಗಾಗಿ ಈ ಎರಡು ವಿಷಯಗಳೂ ದಸಂಸಕ್ಕೆ ಪ್ರಮುಖವಾಗಿವೆ. ಸಂವಿಧಾನದ ಆಧಾರದಲ್ಲಿ ಸಮಾಜ ಶಾಸ್ತ್ರೀಯ ವಾಸ್ತವವನ್ನು ಮುಂದಿಟ್ಟುಕೊಂಡು, ಈಗಿರುವ ಎಜೆ ಸದಾಶಿವ ಆಯೋಗದ ವರದಿ ಮತ್ತು ಕಾಂತರಾಜು ಆಯೋಗದ ವರದಿಯನ್ನು ದತ್ತಾಂಶಗಳ ಮೂಲಕ ಒಳಮೀಸಲಾತಿ ಜಾರಿಗೆ ಮುಂದಾಗಬೇಕು. ಒಳಮೀಸಲಾತಿಯನ್ನು ಅನುಮಾನದಿಂದ ನೋಡುತ್ತಿರುವವರು, ಫಲಾನುಭವಿಗಳ ಗುಂಪು, ಹೊಲ, ಮಾದಿಗರ ವಿಘಟನೆ ಈ ಎಲ್ಲಾ ಸವಾಲುಗಳ ಮೆಟ್ಟಿನಿಂತು ಒಳಮೀಸಲಾತಿ ಜಾರಿಗೆ ತರಬೇಕಾದ ಸವಾಲು ನಮ್ಮ ಮುಂದಿದೆ ಎಂದರು.

ಗೋಷ್ಠಿಯ ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಮಿತಿ ಸದಸ್ಯ ರಮೇಶ್ ಡಾಕುಳಕಿ ವಹಿಸಿದ್ದರು. ಈ ವಿಚಾರವಾಗಿ ಸಿಂಗದಹಳ್ಳಿ ರಾಜಕುಮಾರ್, ರಂಗನಾಥ್ ಕೆ.ಜೆ.ಎಪ್,ಗುರುಪ್ರಸಾದ್ ಕಂಟಲಗೆರೆ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ