ನೀರು, ಪಡಿತರ, ವಸತಿ, ಶಿಕ್ಷಣ ನೀಡುವಲ್ಲಿ ತಾರತಮ್ಯ ಬೇಡ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jan 07, 2026, 02:30 AM IST
ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಅವಳಿ ನಗರದ ನೀರು ಪೂರೈಕೆ ಸಂಬಂಧ ವ್ಯವಸ್ಥಿತವಾಗಿ ಯೋಜನೆ ಕೊಲ್ಲುವ ಪಿತೂರಿ ನಡೆಯುತ್ತಿದೆ. ಅಮೃತ ಯೋಜನೆಯ ಅನುದಾನ ಕೇಂದ್ರ ಸರ್ಕಾರದ್ದು, ಅದನ್ನು ಸದ್ಬಳಕೆ ಮಾಡಬೇಕು.

ಗದಗ: ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಜನಪರ ವಿಚಾರಗಳಲ್ಲಿ ಅಧಿಕಾರಿಗಳು ಜನರಿಗೆ ಮೂಗಿಗೆ ತುಪ್ಪ ವರೆಸುವ ಕ್ರಮ ವಹಿಸಬಾರದು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯ ಸಲ್ಲದು ಎಂದು ಸ್ಪಷ್ಟಪಡಿಸಿದರು.

ಅವಳಿ ನಗರದ ನೀರು ಪೂರೈಕೆ ಸಂಬಂಧ ವ್ಯವಸ್ಥಿತವಾಗಿ ಯೋಜನೆ ಕೊಲ್ಲುವ ಪಿತೂರಿ ನಡೆಯುತ್ತಿದೆ. ಅಮೃತ ಯೋಜನೆಯ ಅನುದಾನ ಕೇಂದ್ರ ಸರ್ಕಾರದ್ದು, ಅದನ್ನು ಸದ್ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಡವರು ಮತ್ತು ಅರ್ಹರಿಗೆ ಮನೆ ಮಂಜೂರು ಮಾಡುವ ಮನಸ್ಸು ಅಧಿಕಾರಿಗಳಲ್ಲಿ ಇರಬೇಕು. ಮನೆ ಮಂಜೂರು ಮಾಡದಿರುವುದಕ್ಕೆ ನಿಮ್ಮಲ್ಲಿ 101 ಕಾರಣಗಳಿರುತ್ತವೆ. ಆ ಮನೋಭಾವ ಬಿಡಿ. ಜತೆಗೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ನಡೆದಿದೆ ಎಂಬ ದೂರುಗಳು ಕೇಳಿ ಬರುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು.ಪಿಎಂ ಕುಸುಮ್‌- ಬಿ ಯೋಜನೆ ಕುರಿತು ಇಂಧನ ಇಲಾಖೆಯೊಂದಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಒಟ್ಟಾಗಿ ರೈತರಿಗೆ ಸಮಗ್ರ ಅರಿವು ಮೂಡಿಸಬೇಕು ಎಂದು ಸೂಚಿಸಿದರು. ಜತೆಗೆ ಜಿ ರಾಮ್ ಜಿ ಹೊಸ ಯೋಜನೆಯ ಬದಲಾವಣೆಗಳು ಹಾಗೂ ಅನುಷ್ಠಾನ ಕ್ರಮಗಳ ಕುರಿತು ಚರ್ಚೆ ನಡೆಯಿತು.

ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ತಲುಪುವಂತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಪಡಿತರ ಅಕ್ಕಿ ಗದಗ ಜಿಲ್ಲೆಯಿಂದ ಗಂಗಾವತಿ ಮೂಲಕ ಆಂಧ್ರ ಪ್ರದೇಶಕ್ಕೆ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಉಲ್ಲೇಖಿಸಿದ ಅವರು, ಇದನ್ನು ಅಧಿಕಾರಿಗಳು ಹಿಡಿಯದೇ ಇದ್ದರೆ ಅವರ ಕಣ್ಣು ತಪ್ಪಿಸಿದೆ ಅಥವಾ ಅವರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬರ್ಥ ಎಂದು ತೀವ್ರ ಎಚ್ಚರಿಕೆ ನೀಡಿದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕಳ್ಳ ಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಗೆ ಸಂಭದಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿ ಒದಗಿಸಬೇಕು. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಕೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸಂಬಂದಿತ ಮಾಹಿತಿಯನ್ನು ಸಭೆಗೆ ತರಬೇಕು ಎಂದರು.ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಿಲ್ಲೆಯ ಕೆಲವೊಂದು ಶಾಲಾ ಆವರಣಗಳಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದು ಕಂಡುಬರುತ್ತಿವೆ. ಎಲ್ಲ ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಬೇಕು ಎಂದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಜೆಜೆಎಂ ಅಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳಬೇಕಾದರೆ ಗ್ರಾಮದ ಪ್ರತಿ ಮನೆಗೂ ನೀರು ತಲುಪಬೇಕು. ಆದರೆ ಈವರೆಗೂ ಕೇವಲ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಇತರೆ ಕಾರ್ಯಗಳನ್ನಷ್ಟೇ ಮಾಡುವ ಮೂಲಕ ಜೆಜೆಎಂ ಯೋಜನೆ ಸಂಪೂರ್ಣ ಯಶಸ್ವಿಯಾಗಿಲ್ಲ. ನೀರು ಮನೆ ಬಾಗಿಲಿಗೆ ತಲುಪಿದಾಗಷ್ಟೇ ಯೋಜನೆಯ ಸದ್ಬಳಕೆಯಾದಂತಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಸಿ‌‌.ಎನ್. ಶ್ರೀಧರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ