ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳ ಕೊರತೆಯಾಗದಿರಲಿ: ಸಚಿವ ಮಂಕಾಳ ವೈದ್ಯ

KannadaprabhaNewsNetwork | Published : Jul 1, 2025 12:47 AM

ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸಬೂಬು ಹೇಳದೇ ಹಾಸ್ಟೆಲ್‌ಗೆ ಪ್ರವೇಶ ನೀಡಬೇಕು

ಕಾರವಾರ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಪ್ರವೇಶಾತಿ ನೀಡುವಲ್ಲಿ ಯಾವುದೇ ಕೊರತೆಯಾಗಬಾರದು. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸಬೂಬು ಹೇಳದೇ ಹಾಸ್ಟೆಲ್‌ಗೆ ಪ್ರವೇಶ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚನೆ ನೀಡಿದರು.

ಅವರು ಸೋಮವಾರ ಜಿಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲ ಶಾಲೆ ಮತ್ತು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸುವ ಕಾರ್ಯವನ್ನು ಆದ್ಯತೆಯಲ್ಲಿ ಮಾಡಬೇಕು. ಸರ್ಕಾರಿ ಶಾಲೆಯ ಪ್ರದೇಶ ಅತಿಕ್ರಮಣ ಆಗದಂತೆ ಮತ್ತು ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ದುರಸ್ತಿ, ಸ್ಥಳಾಂತರದ ಕುರಿತಂತೆ ಹಾಗೂ ಶಾಲಾ ಆವರಣದಲ್ಲಿ ಅಪಾಯಕಾರಿ ಮರಗಳು, ವಿದ್ಯುತ್‌ ತಂತಿಗಳು ಹಾದು ಹೋಗದಂತೆ ನೋಡಿಕೊಳ್ಳುವ ಮೂಲಕ ಮಕ್ಕಳ ಸುರಕ್ಷತೆಗೆ ಗರಿಷ್ಠ ಎಚ್ಚರ ವಹಿಸಬೇಕು ಎಂದರು.

ಉತ್ತರ ಕನ್ನಡ ಜಿಲ್ಲೆಯ ಯಾವುದೇ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ಆದೇಶ ಪಡೆದರೂ ಅವರ ಜಾಗಕ್ಕೆ ಬೇರೊಬ್ಬ ಅಧಿಕಾರಿ, ಸಿಬ್ಬಂದಿ ನೇಮಕ ಆಗುವವರೆಗೆ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬಾರದು ಎಂದು ಸಚಿವರು ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಎಲ್ಲ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ವೈದ್ಯರು ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿ, ಅಧಿಕಾರಿ ಕೊರತೆ ಹೆಚ್ಚಾಗಿದೆ. ಈಗಾಗಲೇ ನಡೆಯುತ್ತಿರುವ ವೈದ್ಯರ ವರ್ಗಾವಣೆ ಪ್ರಕ್ರಿಯೆಯಲ್ಲಿಯೂ ಜಿಲ್ಲೆಗೆ ನಷ್ಟ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಚರ್ಚೆಯಾಯಿತು. ಹಾಗಾಗಿ ವರ್ಗಾವಣೆಯಿಂದ ಯಾವುದೇ ಹುದ್ದೆ ಖಾಲಿ ಆಗುವಂತೆ ಆಗಬಾರದು. ಆ ಸ್ಥಾನಕ್ಕೆ ಮತ್ತೊಬ್ಬ ಅಧಿಕಾರಿ ನೇಮಕವಾಗುವ ವರೆಗೆ ವರ್ಗಾವಣೆಯಾಗಿರುವವರನ್ನು ಬಿಡುಗಡೆ ಮಾಡಬಾರದು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ವಿದ್ಯುತ್ ಕಡಿತವಾಗುತ್ತಿರುವ ಬಗ್ಗೆ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯ ಪ್ರತಿಯೊಂದು ಕುಟುಂಬಕ್ಕೂ ವಿದ್ಯುತ್ ಒದಗಿಸಬೇಕು. ವಿದ್ಯುತ್ ಸಂಪರ್ಕ ಇಲ್ಲದ 675 ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕೊಡಬೇಕು. ವಿದ್ಯುತ್ ಕಡಿತದ ಕುರಿತಂತೆ ದೂರುಗಳು ಬರಬಾರದು. ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದರು.ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಜಿಲ್ಲೆಯ ಹಾಲಕ್ಕಿ ಒಕ್ಕಲ, ಕುಣಬಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ ಗೌಳಿ ಸಮುದಾಯ ಕೂಡ ಎಸ್‌ಟಿ ಪಟ್ಟಿಗೆ ಸೇರುವ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಕೆಡಿಪಿ ಸಭೆಯಿಂದ ನಿರ್ಣಯ ಮಾಡಿ ರಾಜ್ಯಕ್ಕೆ ಪ್ರಸ್ತಾವ ಕಳುಹಿಸುವಂತೆ ತಿಳಿಸಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಕಾರವಾರದಿಂದ ಯಲ್ಲಾಪುರಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತಂದ ಶಾಸಕರು, ಕಾರವಾರದಲ್ಲಿರುವ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಸ್ಥಳಾಂತರಿಸದಂತೆ ತಿಳಿಸಿದರು. ಕುಮಟಾ- ಶಿರಸಿ ರಸ್ತೆ, ಶಿರಸಿ- ಹಾವೇರಿ ರಸ್ತೆ ಕಾಮಗಾರಿ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕುಮಟಾ- ಶಿರಸಿ 54 ಕಿ.ಮೀ. ರಸ್ತೆಯಲ್ಲಿ 44 ಕಿ.ಮೀ. ರಸ್ತೆ ಕಾಮಗಾರಿ ಆಗಿದೆ. 12 ಸೇತುವೆ ಪೈಕಿ 10 ಸೇತುವೆ ಕಾಮಗಾರಿ ಮುಗಿದಿದೆ. ಡಿಸೆಂಬರ್ ವೇಳೆಗೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಶಿರಸಿ- ಹಾವೇರಿ ರಸ್ತೆಯ ದುರಸ್ತಿ ಮಾಡುವ ಕೆಲಸ ಆಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅನ್ನಭಾಗ್ಯ ಅಕ್ಕಿಯನ್ನು ಯಾರಾದರೂ ಮಾರಾಟ ಮಾಡಿದರೆ ಅಂಥವರ ಪಡಿತರ ಚೀಟಿ ರದ್ದುಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಜಿಪಂ ಸಿಇಒ ಈಶ್ವರ ಕಾಂದೂ ಹಾಗೂ ಅಧಿಕಾರಿಗಳು ಇದ್ದರು.