- ಕುಡಿಯುವ ನೀರು ಕಲುಷಿತ ಆಗದಂತೆ ಆಗಾಗ ಪರೀಕ್ಷಿಸಿ ಪೂರೈಸಲು ತಾಕೀತು - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿ ಆರಂಭ ಆಗುತ್ತಿರುವ ಹಿನ್ನೆಲೆ ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಮರ್ಪಕವಾಗಿ ಇಟ್ಟುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಬೆಂಗಳೂರಿನಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗುತ್ತಿದೆ. ರೈತರು ಬಿತ್ತನೆಗೆ ಎಲ್ಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಎಲ್ಲಿಯೂ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಲು ತಿಳಿಸಿದರು.
ರಾಜ್ಯದ ಬಹುತೇಕ ಕಡೆ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುತ್ತಿದೆ. ಸಧ್ಯದಲ್ಲೇ ಮುಂಗಾರು ಸಹ ಆರಂಭವಾಗುತ್ತಿದೆ. ಈ ಹಿನ್ನೆಲೆ ಯಾವುದೇ ಜಿಲ್ಲೆಯಲ್ಲೂ ಬಿತ್ತನೆ ಬೀಜಕ್ಕಾಗಲೀ, ರಸಗೊಬ್ಬರಕ್ಕಾಗಿ ತೊಂದರೆ ಆಗದಂತೆ ಎಲ್ಲ ದಾಸ್ತಾನು ಮಾಡಿಕೊಂಡು, ರೈತರಿಗೆ ಸಮರ್ಪಕವಾಗಿ ವಿತರಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.ಕುಡಿಯುವ ನೀರು ಪರೀಕ್ಷಿಸಬೇಕು:
ಕುಡಿಯುವ ನೀರಿಗೆ ಎಲ್ಲಿಯೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಆಗಾಗ ಕುಡಿಯುವ ನೀರಿನ ಪರೀಕ್ಷೆ ಮಾಡಿಸಬೇಕು. ಎಲ್ಲಿಯೂ ಸಹ ಕಲುಷಿತ ನೀರು ಪೂರೈಕೆ ಆಗಬಾರದು. ಶುದ್ಧ ನೀರನ್ನು ಸಮರ್ಪಕವಾಗಿ ಜನರಿಗೆ ನೀಡುವ ಕೆಲಸ ಆಗಬೇಕು. ನೀರಿಗಾಗಿ ಸಮಸ್ಯೆ, ದೂರುಗಳು ಕೇಳಿಬರಬಾರದು ಎಂದರು.ಡಿಸಿಗಳು ಇನ್‌ಪುಟ್ ಸಬ್ಸಿಡಿ ಸಮಸ್ಯೆ ಪರಿಹರಿಸಲಿ:
ಇನ್‌ಪುಟ್ ಸಬ್ಸಿಡಿ ರೈತರಿಗೆ ಬಿಡುಗಡೆ ಮಾಡಲಾಗಿದೆ. ಯಾವುದೇ ರೈತರಿಗೆ ರೈತರಿಗೆ ಅದು ತಲುಪದಿದ್ದರೆ ಅಂತಹ ರೈತರ ದಾಖಲೆಗಳನ್ನು ಸರಿಪಡಿಸುವ ಕೆಲಸ ಜಿಲ್ಲಾಧಿಕಾರಿಗಳು ಮುತುವರ್ಜಿಯಿಂದ ಮಾಡಬೇಕು. ಕೃಷಿ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆ ಆಗಬಾರದು. ಇನ್‌ಪುಟ್ ಸಬ್ಸಿಡಿ ರೈತರಿಗೆ ತಲುಪಲು ಯಾವುದೇ ಸಮಸ್ಯೆ ಇದ್ದರೆ ಅಂತಹ ದಾಖಲೆಗಳನ್ನು ಸರಿಪಡಿಸಲು ಒತ್ತು ನೀಡಿ ಎಂದು ಜಿಲ್ಲಾಧಿಕಾರಿಗೆ ಆದೇಶಿಸಿದರು.ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಮಾತನಾಡಿ, ಮುಂಗಾರು ಪೂರ್ವದಲ್ಲಿ 5 ದಿನಗಳಿಂದಲೂ ದಾವಣಗೆರೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ರೈತರು ಸಹ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಆದ್ಯತೆ ಮೇಲೆ ನೀರೊದಗಿಸುವ ಕೆಲಸ ಆಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದು, ಕೃಷಿ ಇಲಾಖೆಯಿಂದ ಬಿತ್ತನೆಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಸಿಎಂ ಗಮನಕ್ಕೆ ತಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.- - - -23ಕೆಡಿವಿಜಿ38ಃ:
ದಾವಣಗೆರೆ ಡಿಸಿ ಕಚೇರಿಯಲ್ಲಿ ಗುರುವಾರ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.