ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕಾರಣ, ಪಕ್ಷದ ವಾಸನೆ ಬೇಡ-ಬೊಮ್ಮಾಯಿ

KannadaprabhaNewsNetwork |  
Published : Jan 07, 2025, 12:31 AM IST
 ಫೋಟೋ : 6ಎಚ್‌ಎನ್‌ಎಲ್2 | Kannada Prabha

ಸಾರಾಂಶ

ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕಾರಣ, ಪಕ್ಷದ ವಾಸನೆ ಬೇಡ, ಗ್ರಾಮೀಣ ಹಂತದಿಂದ ಅಭಿವೃದ್ಧಿಗಳು ಮೇಲೆ ಬರಬೇಕು, ಮೇಲಿಂದ ಸೌಲಭ್ಯಗಳು ವಿಳಂಬವಿಲ್ಲದೆ ಸಿಗಬೇಕು. ಆಗ ಹಳ್ಳಿಗಳು ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾನಗಲ್ಲ: ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕಾರಣ, ಪಕ್ಷದ ವಾಸನೆ ಬೇಡ, ಗ್ರಾಮೀಣ ಹಂತದಿಂದ ಅಭಿವೃದ್ಧಿಗಳು ಮೇಲೆ ಬರಬೇಕು, ಮೇಲಿಂದ ಸೌಲಭ್ಯಗಳು ವಿಳಂಬವಿಲ್ಲದೆ ಸಿಗಬೇಕು. ಆಗ ಹಳ್ಳಿಗಳು ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ತಿಳಿಸಿದರು. ಸೋಮವಾರ ಹಾನಗಲ್ಲ ತಾಲೂಕಿನ ಶಿರಗೋಡದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಹಾಗೂ ಎಂಜಿಎನ್‌ಆರ್‌ಇಜಿಎ ಯೋಜನೆಯಲ್ಲಿ ನಿರ್ಮಿಸಿದ ರಾಜೀವ ಗಾಂಧೀ ಸೇವಾ ಕೇಂದ್ರದ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜನರ ಸುತ್ತ ಅಭಿವೃದ್ಧಿ ನೆಲೆಗೊಳ್ಳಬೇಕು. ಆರ್ಥಿಕ ವಿಕೇಂದ್ರೀಕರಣದಿಂದ ದೊಡ್ಡ ರೀತಿಯಲ್ಲಿ ಗ್ರಾಮಗಳ ಅಭಿವೃದ್ಧಿಯಾಗುತ್ತಿದೆ. ಹಳ್ಳಿಗಳ ಜನ ಸಮಸ್ಯೆಗಳೊಂದಿಗೆ ಬದುಕುತ್ತಿದ್ದಾರೆ. ಎಸಿ ರೂಮಿನಲ್ಲಿ ಕುಳಿತು ಅಭಿವೃದ್ಧಿಯ ಬಗೆಗೆ ಮಾತನಾಡಿದರೆ ಆಗದು. ಜನರ ಬಳಿ ಅವರ ಸಮಸ್ಯೆಗಳನ್ನಿಟ್ಟುಕೊಂಡು ಯೋಚಿಸಿ ಯೋಜಿಸಬೇಕು. ಚುನಾವಣೆ ನಂತರ ಪಕ್ಷ ಭೇದ ಮೆರೆತು ಒಟ್ಟಾಗಿ ಅಭಿವೃದ್ಧಿಗೆ ಶ್ರಮಿಸಿ. ಆಗ ನಿಮ್ಮ ಸುತ್ತ ಅಭಿವೃದ್ಧಿಯ ದೊಡ್ಡ ಬದಲಾವಣೆ ಸಾಧ್ಯವಾಗುತ್ತದೆ ಎಂದರು. ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ಮಧ್ಯವರ್ತಿಗಳು, ಭ್ರಷ್ಟಾಚಾರಿಗಳ ಕೈಗೆ ಸರಕಾರದ ಅನುದಾನ ಸಿಕ್ಕು ಸೋರುವುದನ್ನು ತಡೆಗಟ್ಟಲು ನೇರವಾಗಿ ಗ್ರಾಮ ಪಂಚಾಯತ್ ಮಟ್ಟಕ್ಕೆ ಅನುದಾನ ಸಿಗುತ್ತಿದೆ. ಇದಕ್ಕಾಗಿ ರಾಜೀವ ಗಾಂಧಿ, ರಾಮಕೃಷ್ಣ ಹೆಗಡೆ, ನಜೀರಸಾಬ ಅವರ ಕೊಡುಗೆ ದೊಡ್ಡದು. ನಮ್ಮ ಗ್ರಾಮಗಳ ಅಬಿವೃದ್ಧಿಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿರಿ. ನಮ್ಮ ಹಳ್ಳಿಯ ಅಭಿವೃದ್ಧಿ ನಮ್ಮ ಜವಾಬ್ದಾರಿ ಎಂದು ಅರಿಯಿರಿ. ಅಭಿವೃದ್ಧಿಯಲ್ಲಿ ತಕರಾರು ವೈಮನಸ್ಸು ಬಿಟ್ಟು ಕೆಲಸ ಮಾಡಿರಿ. ಶಿರಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನನ್ನ ಅಧಿಕಾರಾವಧಿಯಲ್ಲಿ 2 ಕೋಟಿ ರು.ಗಳ ಕಾಮಗಾರಿ ಕೆಲಸ ಮಾಡಲಾಗಿದೆ. ಹಳ್ಳಿಗಳ ಎಲ್ಲ ಪ್ರಜೆಗಳು ಗ್ರಾಮ ಪಂಚಾಯತಿಗೆ ತಾವು ಭರಿಸಬೇಕಾದ ತೆರಿಗೆ ಸಂದಾಯ ಮಾಡಿ. ಇದರಿಂದಲೇ ದೊಡ್ಡ ಅಭಿವೃದ್ಧಿ ಸಾಧ್ಯ ಎಂದರು. ತಲಗಡ್ಡಿ ಶಾಂತಪೂರಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯವಹಿಸಿ ಮಾತನಾಡಿ, ನಮ್ಮ ಗ್ರಾಮದ ಅಭಿವೃದ್ಧಿ ನನ್ನ ಹೊಣೆ ಎಂಬ ಭಾವ ಮೂಡಿದರೆ ಎಲ್ಲವೂ ಸಾಧ್ಯ. ಸದಸ್ಯರಿಗೆ ಅಭಿವೃದ್ಧಿಯ ಕನಸಿರಲಿ. ಅದನ್ನು ಸಾಕಾರ ಮಾಡಲು ತಮ್ಮ ಅವಧಿ ಸಾರ್ಥಕವಾಗಲಿ. ಎಲ್ಲ ಕಾಲಕ್ಕೂ ಸಿಗುವ ಅಧಿಕಾರ ನಮ್ಮ ಅಭಿವೃದ್ಧಿಯ ಮೂಲಕ ಹೆಸರು ತರುವಂತಾಗಬೇಕು ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ಮಾಳಾಪುರ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ಜರುಗಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ಗಣ್ಯರಾದ ವಿಜಕುಮಾರ ದೊಡ್ಡಮನಿ, ಮುಸ್ಥಫಾ ಮುಜಾವರ, ರಾಘವೇಂದ್ರ ತಹಶೀಲ್ದಾರ, ಸಿದ್ದನಗೌಡ ಪಾಟೀಲ, ಆರ್.ಬಿ.ಪಾಟೀಲ, ರಾಜು ಮೂಗೂರ, ಈರಣ್ಣ ಬೈಲವಾಳ, ಹನುಮಂತಪ್ಪ ಮರಟಗಿ ಸೇರಿದಂತೆ ಗ್ರಾಪಂ ಸದಸ್ಯರು ಗಣ್ಯರು ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು. ಕಿರಣ ಹುಣಸಳ್ಳಿ ಸ್ವಾಗತಿಸಿದರು. ಕಿರಣ ಹೂಗಾರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ