ಪಠ್ಯದ ಜೊತೆಗೆ ರಂಗ ಚಟುವಟಿಕೆ ಇರಲಿ: ಸಂತೋಷ್ ಕೌಲಗಿ

KannadaprabhaNewsNetwork |  
Published : Feb 09, 2026, 01:45 AM IST
8ಕೆಎಂಎನ್ ಡಿ11 | Kannada Prabha

ಸಾರಾಂಶ

ಮೇಲುಕೋಟೆಯ ಸರ್ಕಾರಿ ಶಾಲೆ ಮಕ್ಕಳು ರಂಗ ತರಬೇತಿ ಪಡೆದು ಅಚ್ಚುಕಟ್ಟಾಗಿ ನಾಟಕ ಪ್ರದರ್ಶಿಸಿರುವುದು, ನಾಟಕವನ್ನು ಶಾಲೆ ಹಿರಿಯ ವಿದ್ಯಾರ್ಥಿ ಮನೋಜ್ ನಿರ್ದೇಶನ ಮಾಡಿ ಕಲಿಸಿರುವುದು ಮಾದರಿಯಾದ ಬೆಳವಣಿಗೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಸರ್ಕಾರಿ ಶಾಲೆ ಮಕ್ಕಳು ರಂಗ ಕಲೆಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಕ್ರೀಯಾಶೀಲತೆ, ಜೀವನ ಶೈಲಿಗೆ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದು ಪರಿಸರ ತಜ್ಞ ಸಂತೋಷ್ ಕೌಲಗಿ ಅಭಿಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಹಾಗೂ ದೃಶ್ಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡ ಶಾಲಾ ಮಕ್ಕಳಿಗೆ ರಂಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಂಗ ಚಟುವಟಿಕೆಗಳು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಬದುಕಿಗೊಂದು ಅರ್ಥ ನೀಡುತ್ತದೆ. ಆದರೆ, ಬಹುತೇಕ ಯುವಕರು ಇಂದು ರಂಗ ಚಟುವಟಿಕೆಯಿಂದ ದೂರವಾಗಿ ಮೊಬೈಲ್‌ ಗೀಳಿಗೆ ಬಿದ್ದಿದ್ದಾರೆ ಎಂದು ವಿಷಾದಿಸಿದರು.

ಮೊಬೈಲ್‌ ಗೀಳಿನಿಂದ ಶಾಲಾ ಮಕ್ಕಳನ್ನು ದೂರ ಉಳಿಸಿ ಪಠ್ಯದ ಜೊತೆಗೆ ರಂಗ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುವುದು ನಮ್ಮ ಕರ್ತವ್ಯ. ಮೇಲುಕೋಟೆಯ ಸರ್ಕಾರಿ ಶಾಲೆ ಮಕ್ಕಳು ರಂಗ ತರಬೇತಿ ಪಡೆದು ಅಚ್ಚುಕಟ್ಟಾಗಿ ನಾಟಕ ಪ್ರದರ್ಶಿಸಿರುವುದು, ನಾಟಕವನ್ನು ಶಾಲೆ ಹಿರಿಯ ವಿದ್ಯಾರ್ಥಿ ಮನೋಜ್ ನಿರ್ದೇಶನ ಮಾಡಿ ಕಲಿಸಿರುವುದು ಮಾದರಿಯಾದ ಬೆಳವಣಿಗೆ ಎಂದರು.

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮೇಲುಕೋಟೆ ಬಾಲಕರ ಶಾಲೆ ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್ ಮಾತನಾಡಿ, ಕರ್ನಾಟಕ ನಾಟಕ ಅಕಾಡೆಮಿ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ, ಮಕ್ಕಳಲ್ಲಿರುವ ರಂಗ ಪ್ರತಿಭೆ ಪ್ರೋತ್ಸಾಹಿಸಲು ರಾಜ್ಯಾದ್ಯಂತ ಆಯ್ದ ಶಾಲೆಗಳಲ್ಲಿ 30 ದಿನಗಳ ಕಾಲ ನುರಿತ ರಂಗ ನಿರ್ದೇಶಕರಿಂದ ತರಬೇತಿ ಕಾರ್ಯಾಗಾರ ಮಾಡಿ ಅಲ್ಲಿ ಕಲಿತ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದೆ ಎಂದರು.

ಈ ಅವಕಾಶವನ್ನು ಮೇಲುಕೋಟೆಯ ಶತಮಾನದ ಸರ್ಕಾರಿ ಬಾಲಕರ ಶಾಲೆ ಮಕ್ಕಳು ಸಮರ್ಥವಾಗಿ ಬಳಸಿಕೊಂಡು ಮೈಸೂರು ಸಂಸ್ಥಾನದ ಚರಿತ್ರೆಯ ವಿಗಡ ವಿಕ್ರಮರಾಯ ಐತಿಹಾಸಿಕ ನಾಟಕವನ್ನು ನುರಿತ ರಂಗ ಕಲಾವಿದರಂತೆ ಪ್ರದರ್ಶನ ಮಾಡುವ ಮೂಲಕ ಮಕ್ಕಳು ಯಾವುದಕ್ಕೂ ಕಡೆಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ವತಿಯಿಂದಲೂ ಮಾರ್ಚ್ ಎರಡನೇ ವಾರ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳುವ ಮೂಲಕ ರಂಗಕಲೆಯನ್ನೂ ಒಳಗೊಂಡಂತೆ ಮಕ್ಕಳ ಎಲ್ಲಾ ರೀತಿಯ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.

ಇದೇ ವೇಳೆ ಮೇಲುಕೋಟೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಮಕ್ಕಳಲ್ಲಿ ರಂಗಕಲೆ ಅರಿವು ಮೂಡಿಸುತ್ತಿದ್ದ ದಿ. ಸುಘೋಷ್‌ ಕೌಲಗಿ ಸ್ಮರಣೆಯಲ್ಲಿ ನಾಟಕ ಪ್ರದರ್ಶನ ನಡೆಯಿತು. ಹಿರಿಯ ವಿದ್ಯಾರ್ಥಿ ಮನೋಜ್ ನಿರ್ದೇಶನದಲ್ಲಿ ಕಿರುತರೆ ಕಲಾವಿದ ಹನುಮಂತು ಹಿನ್ನೆಲೆ ಸಂಗೀತ ಒದಗಿಸಿದ್ದರು. ಕಲಾ ಮಂದಿರದಲ್ಲಿ ಪೂರ್ಣತುಂಬಿದ್ದ ಪ್ರೇಕ್ಷಕರು ಮಕ್ಕಳ ಅಭಿನಯಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಅಳಿವಿಂಚಿನಲ್ಲಿದ್ದ ಮೂಡಲಪಾಯ ಯಕ್ಷಗಾನ ಕಲಿಸಿ 26 ಪ್ರದರ್ಶನ ಮಾಡುವಂತೆ ಮಾಡಿದ ಕ್ರಿಯಾಶೀಲ ರಂಗಕರ್ಮಿ ಹಾಗೂ ಶಿಕ್ಷಕ ಪ.ಮ ನಂಜುಂಡಸ್ವಾಮಿ ಅವರಿಗೆ ಸುಗ್ಗಿ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಗ್ರಾಪಂ ಉಪಾಧ್ಯಕ್ಷ ಜಯರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಬಾಲಕರ ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ ಮಹೇಶ್, ದೃಶ್ಯ ಟ್ರಸ್ಟ್ ಅದ್ಯಕ್ಷ ಗಿರೀಶ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಡವಪುರ: ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗೆ ಸನ್ಮಾನ
ಯುವಕರು ಕೃಷಿಯತ್ತ ಗಮನಹರಿಸಲಿ: ಶಾಸಕ ಬಾಲಕೃಷ್ಣ