ಚುನಾವಣಾ ಅಕ್ರಮ ವಹಿವಾಟಿನ ಮೇಲೆ ತೀವ್ರ ನಿಗಾ ಇರಲಿ-ಜಿಲ್ಲಾಧಿಕಾರಿ

KannadaprabhaNewsNetwork | Published : Apr 17, 2024 1:15 AM

ಸಾರಾಂಶ

ಸೂಕ್ತ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದರೆ ಅದನ್ನು ವಶಪಡಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಹಾವೇರಿ: ಹಣ, ಮದ್ಯ, ಚಿನ್ನಾಭರಣ ಇತರೆ ವಸ್ತುಗಳ ಸಾಗಾಣಿಕೆ ಕಂಡುಬಂದಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆಗಳನ್ನು ಪರಿಶೀಲಿಸಬೇಕು ಹಾಗೂ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕು. ಸೂಕ್ತ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದರೆ ಅದನ್ನು ವಶಪಡಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.ಲೋಕಸಭಾ ಚುನಾವಣೆ ಅಂಗವಾಗಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಎಫ್.ಎಸ್.ಟಿ., ಎಸ್.ಎಸ್.ಟಿ. ಮತ್ತು ವಿ.ಎಸ್.ಟಿ. ತಂಡದ ಮುಖ್ಯಸ್ಥರು ಹಾಗೂ ವಿಡಿಯೋಗ್ರಾಫರ್‌ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ದಾಖಲೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಹಣ ಸಾಗಾಣಿಕೆ ಕಂಡುಬಂದಲ್ಲಿ ಅದನ್ನು ವಶಪಡಿಸಿಕೊಂಡು ನಂತರ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕ್ಯಾಶ್ ಸೀಜರ್ ಕಮಿಟಿಗೆ ಸಲ್ಲಿಸಬೇಕು. ಸಮಿತಿಯ ಅಧ್ಯಕ್ಷರು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ದಾಖಲೆಗಳು ಸರಿಯಾಗಿದ್ದಲ್ಲಿ ೨೪ ಗಂಟೆಯೊಳಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ವಾಹನಗಳ ತಪಾಸಣೆ ಸಂದರ್ಭದಲ್ಲಿ ಡ್ಯಾಸ್‌ಬೋರ್ಡ್, ಡಿಕ್ಕಿ ಪರಿಶೀಲಿಸಬೇಕು. ಸ್ಪಷ್ಟವಾಗಿ ಚಿತ್ರೀಕರಣ ಮಾಡಬೇಕು. ಚುನಾವಣಾ ವೆಚ್ಚ ವೀಕ್ಷಕರು ಈಗಾಗಲೇ ಜಿಲ್ಲೆಗೆ ಆಗಮಿಸಿದ್ದು, ವೀಕ್ಷಕರು ಚೆಕ್‌ಪೋಸ್ಟ್‌ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕೇಳುವ ಎಲ್ಲಾ ಮಾಹಿತಿ ನೀಡಬೇಕು. ಒಂದು ವೇಳೆ ಸಮರ್ಪಕವಾಗಿ ಮಾಹಿತಿ ನೀಡದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.ಸಭೆ-ಸಮಾರಂಭ, ರ‍್ಯಾಲಿಗಳು ನಡೆಯುವ ಸ್ಥಳಗಳಿಗೆ ಎಫ್.ಎಸ್.ಟಿ ತಂಡದವರು ವಿಡಿಯೋ ಗ್ರಾಫರ್‌ಗಳೊಂದಿಗೆ ಒಂದು ಗಂಟೆ ಮೊದಲು ತೆರಳಿ, ಸ್ಕ್ರೀನ್, ಸ್ಟೇಜ್, ಕುರ್ಚಿ, ಟೇಬಲ್ ಹಾಗೂ ಬಳಕೆ ಮಾಡುವ ಇನ್ನಿತರೆ ಸಾಮಗ್ರಿಗಳ ಸಂಪೂರ್ಣ ಚಿತ್ರೀಕರಣ ಮಾಡಬೇಕು. ರ‍್ಯಾಲಿಗಳಲ್ಲಿ ಭಾಗವಹಿಸುವ ವಾಹನಗಳ ವಿವರ, ವೇದಿಕೆ ಹತ್ತಿರ ಅಕ್ರಮವಾಗಿ ಹಣ, ಮದ್ಯ, ಊಟ ಹಂಚುತ್ತಿದ್ದಲ್ಲಿ ಹಾಗೂ ಹತ್ತಿರದ ಮದ್ಯದಂಗಡಿಗಳಲ್ಲಿ ಕೂಪನ್ ಮೂಲಕ ಮದ್ಯ ಹಂಚಿಕೆ ಮಾಡುತ್ತಿದ್ದಲ್ಲಿ ಘಟನಾವಳಿಯ ಸಂಪೂರ್ಣ ಚಿತ್ರೀಕರಣ ಮಾಡಬೇಕು. ಅಭ್ಯರ್ಥಿಗಳು, ತಾರಾ ಪ್ರಚಾರಕರು ಮಾಡುವ ಭಾಷಣಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಬಗ್ಗೆ ಪರಿಶೀಲಿಸಬೇಕು. ಉಲ್ಲಂಘನೆಯಾದಲ್ಲಿ ತಕ್ಷಣ ಪ್ರಕರಣ ದಾಖಲಿಸಬೇಕು. ಒಂದು ವೇಳೆ ಮುಂಚಿತವಾಗಿ ತೆರಳಿ ಚಿತ್ರೀಕರಣ ಮಾಡದಿದ್ದಲ್ಲಿ ಸಂಬಂಧಿಸಿದ ಎಫ್.ಎಸ್.ಟಿ. ಹಾಗೂ ಎಸ್.ಎಸ್.ಟಿ. ತಂಡದ ಮುಖ್ಯಸ್ಥರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.ದೊಡ್ಡ ಮಟ್ಟದ ಸಭೆ-ಸಮಾರಂಭ, ರ‍್ಯಾಲಿಗಳ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಎಂ.ಸಿ.ಸಿ. ನೋಡಲ್ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳೊಂದಿಗೆ ತೆರಳಿ ಘಟನೆಯ ಸಂಪೂರ್ಣ ಚಿತ್ರೀಕರಣ ಮಾಡಬೇಕು ಎಂದರು.ಸೆಕ್ಟರ್ ಅಧಿಕಾರಿಗಳಿಗೆ ದಂಡಾಧಿಕಾರಿಗಳ ಅಧಿಕಾರವನ್ನು ನೀಡಲಾಗಿದೆ, ಧೈರ್ಯವಾಗಿ ತಮ್ಮ ಅಧಿಕಾರವನ್ನು ಚಲಾಯಿಸಿ ಚುನಾವಣಾ ಅಕ್ರಮಗಳ ತಡೆಗೆ ಕ್ರಮವಹಿಸಬೇಕು. ಮನೆಗಳಲ್ಲಿ ಅಕ್ರಮವಾಗಿ ಹಣ, ಮದ್ಯ ಹಾಗೂ ಉಡುಗೊರೆ ಸಾಮಗ್ರಿಗಳ ಸಂಗ್ರಹಣೆ ಬಗ್ಗೆ ದೂರುಗಳು ಸ್ವೀಕೃತವಾದಲ್ಲಿ ವಿಡಿಯೋಗ್ರಾಫರ್‌ಗೊಂದಿಗೆ ತೆರಳಿ ತಪಾಸಣೆ ಮಾಡುವಂತೆ ಸಲಹೆ ನೀಡಿದರು.ವಾಹನಗಳಲ್ಲಿ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೂರು ಸಲ್ಲಿಸಿದಲ್ಲಿ, ಆ ವಾಹನ ಸಂಖ್ಯೆ, ಮಾಡಲ್, ಬಣ್ಣ ಇತರೆ ವಿವರ ಪಡೆದುಕೊಳ್ಳಬೇಕು. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಸಮಯದಲ್ಲಿ ವಾಹನ ನಿಲ್ಲಿಸದೇ ವೇಗವಾಗಿ ಚಲಿಸಿದಲ್ಲಿ ಅಂತಹ ವಾಹನ ಸಂಖ್ಯೆ, ಮಾಡಲ್, ಬಣ್ಣ ಇತರೆ ವಿವರಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡುವಂತೆ ಸೂಚನೆ ನೀಡಿದರು.ಚೆಕ್ ಪೋಸ್ಟ್‌ಗಳಲ್ಲಿ ಬಳಸಲಾಗುವ ಹ್ಯಾಂಡಿಕ್ಯಾಮ್ ಹಾಗೂ ಸಿಸಿ ಟಿವಿಗಳು ಸುಸ್ಥಿತಿಯಲ್ಲಿರಬೇಕು. ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ತುರ್ತಾಗಿ ಐಟಿ ನೋಡಲ್ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಿಳಿಸಬೇಕು. ಚೆಕ್ ಪೋಸ್ಟ್‌ಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಸುವ್ಯವಸ್ಥಿತವಾಗಿರಬೇಕು. ನಿಯೋಜಿತ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಾಗಬೇಕು. ಹೆಚ್ಚುವರಿ ಸಾಮಗ್ರಿಗಳ ಅವಶ್ಯವಿದ್ದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಚೆಕ್‌ಪೋಸ್ಟ್‌ಗ ಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಸುರಕ್ಷತೆ ಹಿತದೃಷ್ಟಿಯಿಂದ ಮಳೆ, ಗುಡುಗು, ಸಿಡಿಲು ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ವಿವಿಧ ತಂಡಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Share this article