ಶಿರಸಿ ಜಿಲ್ಲೆ ಮಾಡಲು ಹಿಂದಿನ ಸರ್ಕಾರದ ಬಳಿ ಚರ್ಚೆಯೇ ಆಗಿಲ್ಲ: ಶಾಸಕ ಶಿವರಾಮ ಹೆಬ್ಬಾರ್

KannadaprabhaNewsNetwork |  
Published : Sep 17, 2025, 01:07 AM IST
ಮಾಧ್ಯಮದವರ ಜತೆ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದರು.  | Kannada Prabha

ಸಾರಾಂಶ

ಕೆಲ ಸಂಘಟನೆಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆಯೇ ಹೊರತು ಸರ್ಕಾರದ ಮಟ್ಟದಲ್ಲಿ ಇನ್ನು ಚರ್ಚೆ ಆರಂಭವಾಗಿಯೇ ಇಲ್ಲ

ಶಿರಸಿ: ಹಿಂದಿನ ಸರ್ಕಾರದ ಸಚಿವ ಸಂಪುಟದಲ್ಲಿ ಅಥವಾ ಮುಖ್ಯಮಂತ್ರಿ ಬಳಿ ಶಿರಸಿ ಜಿಲ್ಲೆಯಾಗಬೇಕೆಂದು ಯಾವ ಹಂತದಲ್ಲಿಯೂ ಚರ್ಚೆಯಾಗಿಲ್ಲ. ಕೆಲ ಸಂಘಟನೆಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆಯೇ ಹೊರತು ಸರ್ಕಾರದ ಮಟ್ಟದಲ್ಲಿ ಇನ್ನು ಚರ್ಚೆ ಆರಂಭವಾಗಿಯೇ ಇಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೊಸ ಬಾಂಬ್‌ ಸಿಡಿಸಿದ್ದಾರೆ.

ಅವರು ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಹಿಂದಿನ ಸಭಾಧ್ಯಕ್ಷರು ಮುಖ್ಯಮಂತ್ರಿ ಬಳಿ ಏನು ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸಂಘಟನೆಗಳು ಮತ್ತು ಜನರು ಅಭಿಪ್ರಾಯ ಹೇಳುತ್ತಾರೆ ಎಂದು ಬೆಳಗಾಗುವುದರ ಒಳಗಡೆ ಸರ್ಕಾರ ನಿರ್ಣಯ ಮಾಡಲು ಸಾಧ್ಯವಿಲ್ಲ. ಸಾಧಕ-ಬಾಧಕ, ಜಿಲ್ಲೆಯ ಬುದ್ಧಿಜೀವಿಗಳ ಮತ್ತು ಅನೇಕ ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸಬೇಕಾಗುತ್ತದೆ ಎಂದರು.

ಸಿದ್ದಾಪುರ, ಬನವಾಸಿ ಬೇರೆ ಜಿಲ್ಲೆಗೆ ಹೋಗುತ್ತದೆ ಎನ್ನುವುದು ತಿರುಕನ ಕನಸು. ಸರ್ಕಾರ, ಶಾಸಕರ ಮುಂದೆ ಯಾವ ಹಂತದಲ್ಲಿಯೂ ಚರ್ಚೆಯಾಗಿಲ್ಲ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ನನ್ನ ಕ್ಷೇತ್ರ ಬನವಾಸಿ ಭಾಗದ ಜನತೆ ಗೊಂದಲಕ್ಕೆ ಒಳಗಾಗಬಾರದು. ನಿಮ್ಮ ಶಾಸಕರು ಗಟ್ಟಿ ಇದ್ದಾರೆ. ಯಾವುದೇ ಕಾರಣಕ್ಕೂ ಜನರು ಆತಂಕ ಪಡುವ ಪ್ರಶ್ನೆಯೇ ಇಲ್ಲ. ಬೆಳಗಾವಿ 18 ತಾಲೂಕನ್ನು ಹೊಂದಿರುವ 2 ಸಂಸತ್‌ ಕ್ಷೇತ್ರ ಹೊಂದಿದ ಜಿಲ್ಲೆಯೇ ಇರುವರೆಗೆ 2 ಜಿಲ್ಲೆಯನ್ನು ಕಾಣಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಇನ್ನೊಂದು ಜಿಲ್ಲೆಯಾಗಬಾರದು ಎಂದಿಲ್ಲ ಎಂದರು.

ಜಾತಿಗಣತಿಯಲ್ಲಿ ಮುಸ್ಲಿಂ ಬ್ರಾಹ್ಮಣ, ಕ್ರಿಶ್ಚಿಯನ್ ಬ್ರಾಹ್ಮಣ ಸೇರಿದಂತೆ ಇನ್ನಿತರ ಗೊಂದಲದಿಂದ ಕೂಡಿದೆ ಎಂದು ಆರೋಪ ವ್ಯಕ್ತವಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಜಾತಿಗಣತಿಯ ಬಗ್ಗೆ ಮಾಹಿತಿ ನನಗಿಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ ಎಂದರು.

ಹೆಬ್ಬಾರ್ ಸ್ಪಷ್ಟನೆ:

ಶಿರಸಿ ಜಿಲ್ಲೆಗೆ ಯಲ್ಲಾಪುರ ಕ್ಷೇತ್ರದ ಶಾಸಕರು ಅಡ್ಡಗಾಲು ಹಾಕಿದ್ದಾರೆ ಎಂಬ ಉಪೇಂದ್ರ ಪೈ ಆರೋಪಕ್ಕೆ ಹೆಬ್ಬಾರ್‌ ಪ್ರತಿಕ್ರಿಯಿಸಿ, ಉಪೇಂದ್ರ ಪೈ ಯಾವ ಆಧಾರದಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಚರ್ಚೆ ಇಲ್ಲದ ವಿಷಯಕ್ಕೆ ಜೀವ ತುಂಬಲು ಸಾಧ್ಯವಿಲ್ಲ. ಉಪೇಂದ್ರ ಪೈ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಶಿರಸಿ ಜಿಲ್ಲೆ ಬಗ್ಗೆ ಹಿಂದೆಂದೂ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಸ್ಪಷ್ಟಪಡಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ