ಕನ್ನಡಪ್ರಭ ವಾರ್ತೆ ಧಾರವಾಡ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೂರು ಜನರು ಮಾತ್ರವಲ್ಲ, ಅನೇಕ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಲು ಪತ್ರ ಬರೆದಿದ್ದೇವೆ ಹೊರತು ಯಾವುದೇ ಅಸಮಾಧಾನ, ಅತೃಪ್ತಿಗೆ ಅಲ್ಲ ಎಂದು ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ ಹೇಳಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆಯ ದಿನಾಂಕದ ಲೆಟರ್ ಹೆಡ್ ದುರುಪಯೋಗಪಡಿಸಿಕೊಂಡ ಕೆಲವರು ಬೇಕಾದಂತೆ ಬರೆದು ಆ ಪತ್ರವನ್ನು ವೈರಲ್ ಮಾಡಿದ್ದಾರೆ. ಅದರ ಬಗ್ಗೆ ತನಿಖೆಯೂ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಅಭಿವೃದ್ಧಿ ಕೆಲಸ ವಿಳಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಇದೆ. ಈ ವರ್ಷ ಗ್ಯಾರಂಟಿಗೆ ₹56 ಸಾವಿರ ಕೋಟಿ ಬೇಕು. ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುವ ಭರವಸೆಯೂ ಇದೆ ಎಂದರು.ಕಾಂಗ್ರೆಸ್‌ನಲ್ಲಿ ಲಿಂಗಾಯತರ ಕಡೆಗಣನೆ ಎಂಬ ಗೋವಿಂದ ಕಾರಜೋಳ ಆರೋಪ ವಿಚಾರವಾಗಿ ತಿರಗೇಟು ನೀಡಿದ ಶಾಸಕ ಬಿ.ಆರ್.ಪಾಟೀಲ, ಬಿಜೆಪಿಯಲ್ಲಿ ಯಡಿಯೂರಪ್ಪ ಪರಿಸ್ಥಿತಿ ಏನಾಗಿದೆ? ಕಾರಜೋಳ ಇದೇ ರೀತಿ ಹೇಳುತ್ತಾರೆ. ಕಾಂಗ್ರೆಸ್ ನಲ್ಲಿ ಲಿಂಗಾಯತರು ಗಟ್ಟಿಯಾಗಿದ್ದೇವೆ. ನಮ್ಮಲ್ಲಿ ಎಲ್ಲರನ್ನೂ ಮುಖ್ಯಮಂತ್ರಿಗಳು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಬಹಳ ದಿನಗಳಿಂದ ನಡೆದಿದೆ. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ನಮ್ಮಲ್ಲಿ ಎರಡ್ಮೂರು ಬೇಡಿಕೆಗಳಿವೆ. ನಿಗಮ ಮಾಡಬೇಕೆಂಬ ಬೇಡಿಕೆ ಇತ್ತು. ಈಗ ನಿಗಮ ಆಗಿದೆ. ವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಸೇರಿಸಬೇಕೆಂಬ ಬೇಡಿಕೆ ಇದೆ ಎಂದರು.