2025ರಲ್ಲಿ ಒಳಿತಿಗಿಂತ ಕೆಡಕೆ ಹೆಚ್ಚು

KannadaprabhaNewsNetwork |  
Published : Dec 31, 2025, 03:15 AM IST
ಕನ್ಹೇರಿ | Kannada Prabha

ಸಾರಾಂಶ

ಕ್ರೈಂ ಲೋಕದಲ್ಲಿಯೇ ಕುಖ್ಯಾತಿ ಪಡೆದಿರುವ ರಾಜ್ಯದ ಗಡಿ ಜಿಲ್ಲೆಯೂ 2025ರಲ್ಲಿ ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಕೊಲೆ, ಸುಲಿಗೆ, ಅತಿದೊಡ್ಡ ಬ್ಯಾಂಕ್‌ಗಳ ಕಳ್ಳತನ ಪ್ರಕರಣಗಳು ಸೇರಿದಂತೆ ಭೀಮಾ ನದಿ ಪ್ರವಾಹ, ದಾಖಲೆಯ ಚಳಿ ಸೇರಿದಂತೆ ಹಲವು ಘಟನೆಗಳು ಈ ಜಿಲ್ಲೆಯನ್ನು ತತ್ತರಿಸುವಂತೆ ಮಾಡಿವೆ. ಈ ವರ್ಷದ ನೋವು-ನಲಿವುಗಳ ಹಿನ್ನೋಟ ವರದಿ ಇದು.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಕ್ರೈಂ ಲೋಕದಲ್ಲಿಯೇ ಕುಖ್ಯಾತಿ ಪಡೆದಿರುವ ರಾಜ್ಯದ ಗಡಿ ಜಿಲ್ಲೆಯೂ 2025ರಲ್ಲಿ ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಕೊಲೆ, ಸುಲಿಗೆ, ಅತಿದೊಡ್ಡ ಬ್ಯಾಂಕ್‌ಗಳ ಕಳ್ಳತನ ಪ್ರಕರಣಗಳು ಸೇರಿದಂತೆ ಭೀಮಾ ನದಿ ಪ್ರವಾಹ, ದಾಖಲೆಯ ಚಳಿ ಸೇರಿದಂತೆ ಹಲವು ಘಟನೆಗಳು ಈ ಜಿಲ್ಲೆಯನ್ನು ತತ್ತರಿಸುವಂತೆ ಮಾಡಿವೆ. ಈ ವರ್ಷದ ನೋವು-ನಲಿವುಗಳ ಹಿನ್ನೋಟ ವರದಿ ಇದು.

ಕಳ್ಳರ ಹಾವಳಿ:

2025ರ ಹೊಸ ವರ್ಷದ ಆರಂಭದಲ್ಲೇ ಜಿಲ್ಲಾದ್ಯಂತ ಕಳ್ಳತನ, ದರೋಡೆಗಳ ಹಾವಳಿ ಹೆಚ್ಚಾಗಿದ್ದವು. ಜನೇವರಿ ಮೊದಲ ವಾರದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಮನೆಗಳ್ಳತನ ನಡೆದವು. ಕಳ್ಳತನ ಪ್ರಕರಣಗಳಿಂದ ಇಡಿ ಜಿಲ್ಲೆಯೇ ಬೆಚ್ಚಿಬಿದ್ದಿತ್ತು. ಜ.15ರಂದು ನಗರದ ಜೈನಾಪುರ ಬಡಾವಣೆಯಲ್ಲಿ ಮನೆಗೆ ನುಗ್ಗಿದ್ದ ಮುಸುಕುಧಾರಿಗಳು ಮನೆ ಮಾಲೀಕನನ್ನೇ ಮೊದಲ ಮಹಡಿಯಿಂದ ಕೆಳಕ್ಕೆ‌ನೂಕಿ, ಮನೆ ದರೋಡೆ ಮಾಡಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ ಕನ್ನಾಳ ಎಂಬುವರು ಮೃತರಾದರು. ಪತಿ ಕಳೆದುಕೊಂಡ ಪತ್ನಿ ಪುಟ್ಟ ಮಗುವಿನೊಂದಿಗೆ ಇಂದಿಗೂ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.ಹಂತಕ ಬಾಗಪ್ಪನ ಅಂತ್ಯ

ಭೀಮಾತೀರದಲ್ಲಿ ಭಾರೀ ಸದ್ದುಮಾಡಿದ್ದ ಬಾಗಪ್ಪ ಹರಿಜನ ಎಂಬ ರೌಡಿಶೀಟರ್‌ನನ್ನು ಫೆ.11ರಂದು ಮದೀನಾ ನಗರದಲ್ಲಿ ರಾತ್ರಿ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಆರು ಕೊಲೆ, ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪ ಹರಿಜನ ಅದೇ ಹಳೆಯ ದ್ವೇಷದ ಕೆಂಗಣ್ಣಿಗೆ ಸಿಲುಕಿ ಮಣ್ಣಲ್ಲಿ ಮಣ್ಣಾಗಿಹೋದ.ಮಗಳ ಪ್ರಿಯಕರನನ್ನು ಕೊಂದ ತಂದೆ

ಮುದ್ದಾಗಿ ಸಾಕಿದ್ದ ಮಗಳ ಸಾವಿಗೆ ಕಾರಣನಾದ ಎಂದು ತಾಲೂಕಿನ ಅರಕೇರಿಯಲ್ಲಿ ಸತೀಶ ರಾಠೋಡ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿ ಫೆಬ್ರುವರಿಯಲ್ಲಿ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದ. ಸ್ಥಳೀಯ ಯುವತಿಯೊಬ್ಬಳು ಸತೀಶನನ್ನು ಪ್ರೀತಿಸುತ್ತಿದ್ದಳು. ಆದರೆ ಯಾವುದೋ ಕಾರಣಕ್ಕೆ ಆ ಯುವತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ತನ್ನ ಮಗಳ ಸಾವಿಗೆ ಕಾರಣನಾದ ಸತೀಶನನ್ನು ಯುವತಿಯ ತಂದೆ ರಮೇಶ ಲಮಾಣಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.ನಕಲಿ‌ ಪಿಸ್ತೂಲ್ ಕಾರ್ಯಾಚರಣೆ

ಜಿಲ್ಲೆಯಲ್ಲಿ ಸಾಕಷ್ಟು ವರ್ಷಗಳಿಂದ ಸದ್ದು ಮಾಡುತ್ತಿದ್ದ ನಕಲಿ‌ ಪಿಸ್ತೂಲ್ ಹಾವಳಿಯನ್ನು ತಪ್ಪಿಸಲು ಫೆಬ್ರುವರಿಯಲ್ಲಿ ಖಾಕಿಪಡೆ ಕಾರ್ಯಾಚರಣೆ ನಡೆಸಿತ್ತು. ಇದರ ಫಲವಾಗಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಜಿಲ್ಲಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಬರೋಬ್ಬರಿ ಹತ್ತು ಆರೋಪಿಗಳ ಹೆಡೆಮುರಿ ಕಟ್ಟಿ, ಅವರಿಂದ 10 ಪಿಸ್ತೂಲ್ ಹಾಗೂ 24 ಸಜೀವ ಗುಂಡು ವಶಪಡಿಸಿಕೊಳ್ಳಲಾಗಿತ್ತು.ವಿದ್ಯಾರ್ಥಿಗೆ ರ್‍ಯಾಗಿಂಗ್

ನಗರದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಫೆ.18ರಂದು ಕ್ರಿಕೆಟ್ ಆಟದ ವೇಳೆ ಹಾಡು ಹಾಡು, ಡ್ಯಾನ್ಸ್ ಮಾಡು ಎಂದು ಜಮ್ಮು ಕಾಶ್ಮೀರದ ಅನಂತನಾಗ ಜಿಲ್ಲೆಯ ಹಮೀಮ್ ಎಂಬ ಎಂಬಿಬಿಎಸ್ ವಿದ್ಯಾರ್ಥಿಗೆ ರ್‍ಯಾಗಿಂಗ್‌ ಮಾಡಲಾಗಿತ್ತು. 2019 ರಬ್ಯಾಚ್ ನ ಐವರು ಹಿರಿಯ ವಿದ್ಯಾರ್ಥಿಗಳು ‌ಈ ಕುರಿತು ವಿದ್ಯಾರ್ಥಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಹಾಗೂ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಗೆ ಟ್ವಿಟ್ ಮಾಡಿದ್ದ. ಬಳಿಕ ಐವರು ವಿದ್ಯಾರ್ಥಿಗಳಾದ ಮೊಹಮ್ಮದ್ ಕಾಸರ್, ಸಮೀರ್ ತಾಡಪತ್ರಿ, ಶೇಖ್ ಸಾವುದ್, ಮನ್ಸೂರ್ ಬಾಷಾ, ಮುಜಫರ್ ಜಮಾದಾರ್ ವಿರುದ್ಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಪಘಾತದಲ್ಲಿ ಮೂವರ ಸಾವು

ಕಾರು ಅಪಘಾತವಾಗಿ ಸ್ಥಳದಲ್ಲೆ ಮೂವರು ಸಾವನ್ನಪ್ಪಿರುವ ಘಟನೆ ಮಾ.17ರಂದು ತಾಲೂಕಿನ ಹೆಗಡಿಹಾಳ ಕ್ರಾಸ್ ಬಳಿ ನಡೆದಿತ್ತು. ಡ್ರೈವರ್ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರ ದಾರುಣವಾಗಿ ಸಾವನ್ನಪ್ಪಿದ್ದರು. ಉತ್ನಾಳ ಗ್ರಾಮದ ಬೀರಪ್ಪ ಗೋಡೆಕರ, ಹಣಮಂತ ಕಡ್ಲಿಮಟ್ಟಿ, ಯಮನಪ್ಪ ನಾಟೀಕಾರ ಸ್ಥಳದಲ್ಲೆ ಸಾವನ್ನಪ್ಪಿದ್ದರು.ಶಾಸಕ ಯತ್ನಾಳ ಉಚ್ಛಾಟನೆ

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷ ವಿರೋಧಿ ಹೇಳಿಕೆ ಆರೋಪದ ಮೇಲೆ ಮಾ.27ರಂದು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿತ್ತು. ಶಾಸಕ ಯತ್ನಾಳರು ಮೂರನೇ ಬಾರಿ ಉಚ್ಚಾಟನೆಗೊಂಡಿದ್ದರು. ಪಕ್ಷದಿಂದ ಉಚ್ಚಾಟನೆಯಾದ ನಂತರವೂ ಅದೇ ಛಾತಿಯಲ್ಲಿರುವ ಯತ್ನಾಳ ಹಿಂದುತ್ವದ ರಕ್ಷಣೆಗೆ ನಾನಿದ್ದೇನೆ ಎಂದು ರಾಜ್ಯಾದ್ಯಂತ ಸಂಚರಿಸಿ ಮತ್ತಷ್ಟು ಜನಬೆಂಬಲ ಗಳಿಸಿದ್ದಾರೆ.ಯುವಕರು ನೀರುಪಾಲು

ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ತಾಲೂಕಿನ ಕುಮಟಗಿ ಗ್ರಾಮದಲ್ಲಿ ಏಪ್ರಿಲ್ 2ರಂದು ನಡೆದಿತ್ತು. 6 ಯುವಕರು ಕುಮಟಗಿ ಕೆರೆಯಲ್ಲಿ ಈಜಲು ಹೋಗಿದ್ದರು. ಆದರೆ ಈಜು ಬಾರದ ಹಿನ್ನೆಲೆ ಇಬ್ಬರು ಮುಳುಗಿ ನೀರು ಪಾಲಾಗಿದ್ದರು. ಕೈಫ್ ಜಮಾದಾರ, ಸೋಹೇಲ ಹತ್ತರಕಿಹಾಳ ಸಾವನ್ನಪ್ಪಿದ ಯುವಕರು. ಇದೆ ವೇಳೆ ನಾಲ್ಕು ಯುವಕರು ಈಜಿ ದಡ ಸೇರಿದ್ದರು. ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ ಜರುಗಿತ್ತು.ಅಪಘಾತದಲ್ಲಿ ಆರು ಜನ ಬಲಿ

ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇ 21ರಂದು ನಡೆದಿದ್ದ ಲಾರಿ, ಬಸ್, ಬುಲೇರೋ ನಡುವೆ ನಡೆದಿದ್ದ ಸರಣಿ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದರು. ಸೋಲಾಪುರ ಕಡೆಗೆ ಹೊರಟಿದ್ದ ಬುಲೇರೋ ಜೀಪ್ ನಲ್ಲಿದ್ದ 5 ಜನರು ಹಾಗೂ ಬಸ್ ಚಾಲಕ ಸೇರಿ ಒಟ್ಟು ಆರು ಜನರು ಸಾವನ್ನಪ್ಪಿದ್ದರು. ಕಾರ್‌ ಚಾಲಕ ವಿಕಾಸ ಮಂಕನಿ, ಹೊರ್ತಿ ಕೆನರಾ ಬ್ಯಾಂಕ್ ಮ್ಯಾನೇಜರ್ ಆಂಧ್ರ ಮೂಲದ ಭಾಸ್ಕರ ಹಾಗೂ ಅವರ ಕುಟುಂಬಸ್ಥರಾದ ಪವಿತ್ರಾ, ಅಭಿರಾಮ, ಜೋಶನಾ, ಬಸ್ ಡ್ರೈವರ್ ಬಸವರಾಜ ರಾಠೋಡ ಸಾವನ್ನಪ್ಪಿದ್ದರು. ಮನಗೂಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೆನರಾ ಬ್ಯಾಂಕ್ ಕಳ್ಳತನ

ಜಿಲ್ಲೆಯ ಇತಿಹಾಸದಲ್ಲೇ ಅತಿದೊಡ್ಡ ಕಳ್ಳತನ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಮೇ.25ರಂದು ಕೆನರಾ ಬ್ಯಾಂಕ್ ನಲ್ಲಿ ನಡೆದಿತ್ತು.‌ ಬ್ಯಾಂಕ್‌ನ ಹಳೆಯ ಮ್ಯಾನೇಜರ್ ನೇ ಭಾಗಿಯಾಗಿದ್ದ ಈ ಪ್ರಕರಣದಲ್ಲಿ ₹ 40 ಕೋಟಿ ಮೌಲ್ಯದ 40 ಕೆಜಿ ಚಿನ್ನಾಭರಣ ದೋಚಲಾಗಿತ್ತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 100 ಜನರ ತಂಡ ಒಂದೇ ತಿಂಗಳಿನಲ್ಲಿ 15 ಆರೋಪಿಗಳ ಹೆಡೆಮುರಿ ಕಟ್ಟಿ, ಕದ್ದಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿತ್ತು.ಸುಶೀಲ ಕಾಳೆ ಭೀಕರ ಕೊಲೆ

ನಗರದ ಹೃದಯಭಾಗದ ಅಮರವರ್ಷಿಣಿ ಸಹಕಾರಿ ಬ್ಯಾಂಕ್‌ನಲ್ಲಿ ಜು.14ರಂದು ಭೀಮಾತೀರದ ಹಂತಕ ಬಾಗಪ್ಪ ಹರಿನನನೊಂದಿಗೆ ಗುರುತಿಸಿಕೊಂಡಿದ್ದ ಸುಶೀಲ ಕಾಳೆ ಎಂಬಾತನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ಮಾಡಿ ಕೊಲೆ. ಹತ್ಯೆಯ ಭೀಕರ ದೃಶ್ಯಗಳು ಬ್ಯಾಂಕ್‌ನ ಸಿಸಿಟಿವಿಯಲ್ಲಿ ದಾಖಲಾಗಿದ್ದವು. ಗಾಂಧಿಚೌಕ್‌ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಹತ್ಯೆಗೈದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ಓರ್ವ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು. ಅರೋಪಿಗಳಾದ ಆಕಾಶ ಕಲ್ಲವ್ವಗೋಳ, ಸುದೀಪ ಬಗಲಿ, ಗೌತಮ ಆಲಮೇಲಕರ, ನಾರಾಯಣ ಜಾಧವ, ಬಸವರಾಜ ಮುನ್ನಾಳ, ಪ್ರಜ್ವಲ ಹಳಿಮನಿ ಬಂಧನ.ನೀರಾವರಿ ಯೋಜನೆಗಳಿಗೆ ಸಿಎಂ ಶಂಕುಸ್ಥಾಪನೆ

ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಚಾಲನೆ ನೀಡಲು ಸಿಎಂ ಸಿದ್ಧರಾಮಯ್ಯನವರು ಜುಲೈ 14ರಂದು ಇಂಡಿ ಪಟ್ಟಣಕ್ಕೆ ಆಗಮಿಸಿದ್ದರು. ಇಂಡಿಯಲ್ಲಿನ ಹಲವು ಕಟ್ಟಡಗಳು, ನೀರಾವರಿ ಯೋಜನೆಗಳು ಸೇರಿದಂತೆ ನೂರಾರು ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಹಲವು ಸಚಿವರು ಸಾಥ್ ನೀಡಿದ್ದರು.ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಚುಕ್ಕಾಣಿ

ಇತಿಹಾಸದಲ್ಲಿ ಮೊದಲ ಬಾರಿಗೆ ಮಹಾನಗರ ಪಾಲಿಕೆ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿತ್ತು. ಜ.27ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಆ.11ರಂದು ಪ್ರಕಟವಾಗಿತ್ತು. ಈ ವೇಳೆ 22ನೇ ಮಹಾಪೌರರಾಗಿ ಬಿಜೆಪಿಯ ಎಂ.ಎಸ್.ಕರಡಿ ಮೇಯರ್ ಹಾಗೂ ಸುಮಿತ್ರಾ ಜಾಧವ ಉಪಮೇಯರ್ ಆಗಿ ಆಯ್ಕೆಯಾಗಿದ್ದರು.

ಕೃಷ್ಣೆಗೆ ಸಿಎಂ ಬಾಗೀನ

ಸೆ.6ರಂದು ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರೀ ಅಣೆಕಟ್ಟಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಮಿಸಿ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು. ಈ ವೇಳೆ ಕೃಷ್ಣಾ‌ ಕೊಳ್ಳದ ಅಭಿವೃದ್ಧಿಗೆ ಹಣ ನೀಡಲಾಗುವುದು, ಸಂತ್ರಸ್ಥರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ಕಾರ್ಯಗಳನ್ನು ನಡೆಸಲಾಗುವುದು ಎಂದು ಸರಕಾರದಿಂದ ಭರವಸೆ ಸಿಕ್ಕಿತ್ತು.

ಭೀಮೆಯ ಅಬ್ಬರಕ್ಕೆ ನಲುಗಿದ್ದ ಭೀಮಾತೀರ

ಈ ಬಾರಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಭೀಮಾನದಿ ಉಕ್ಕಿ ಹರಿದಿತ್ತು. ಇಂಡಿ ಹಾಗೂ ಆಲಮೇಲ ತಾಲೂಕಿನಲ್ಲಿ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಇನ್ನು ಹಲವು ಗ್ರಾಮಗಳಿಗೆ ವಾರಗಟ್ಟಲೇ ಸಂಪರ್ಕವೇ ಕಡಿತವಾಗಿತ್ತು. ಇದರೊಟ್ಟಿಗೆ ಜಮೀನುಗಳು ಮುಳುಗಡೆಯಾಗಿ ಕೊಟ್ಯಾಂತರ ರೂಪಾಯಿ ಮೌಲ್ಯದ ಬೆಳೆಗಳು ಹಾನಿಯಾಗಿದ್ದವು. ಪ್ರವಾಹದಿಂದಾಗಿ 185 ಕುಟುಂಬಗಳ 860 ಜನರು ನೆಲೆ ಕಳೆದುಕೊಂಡಿದ್ದರು. ಈ ವೇಳೆ ಜಿಲ್ಲಾಡಳಿತದಿಂದ ಒಟ್ಟು 17 ಕಾಳಜಿ ಕೇಂದ್ರಗಳನ್ನು ತೆರೆದು ಸಹಾಯ ಮಾಡಲಾಗಿತ್ತು. ಕಳೆದ ವರ್ಷ ಮಳೆ‌ ಹಾಗೂ ಪ್ರವಾಹದಿಂದಾಗಿ ಒಟ್ಟು 10 ಜೀವಗಳು ಹಾನಿಯಾಗಿದ್ದವು.

ಚಡಚಣ ಬ್ಯಾಂಕ್ ದರೋಡೆ

ಚಡಚಣದ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ನಲ್ಲಿ ಸೆ.16ಕ್ಕೆ ಬ್ಯಾಂಕ್ ಗೆ ನುಗ್ಗಿದ್ದ ದರೋಡೆಕೋರರು ಪಿಸ್ತೂಲ್ ತೋರಿಸಿ ಬ್ಯಾಂಕ್ ಲೂಟಿ ಮಾಡಿದ್ದರು. ₹1.4 ಕೋಟಿ ನಗದು ಹಾಗೂ ₹ 20 ಕೋಟಿ ಮೌಲ್ಯದ 20 ಕೆಜಿ ಚಿನ್ನಾಭರಣ ದೋಚಲಾಗಿತ್ತು. ಈ ವೇಳೆಯೂ ಸಹ 7 ತಂಡಗಳಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದೇ ತಿಂಗಳಿನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದರು.

ರಾಜು ತಾಳಿಕೋಟಿ ನಿಧನ

ಕಲಿಯುಗದ ಕುಡುಕ ನಾಟಕ ಖ್ಯಾತಿಯ ಹಾಸ್ಯ ಕಲಾವಿದ ರಾಜು ತಾಳಿಕೋಟಿ ಅಕ್ಟೋಬರ್ 13ರಂದು ಹೃದಯಾಘಾತದಿಂದ ತಮ್ಮ 60ನೇ ವಯಸ್ಸಿನಲ್ಲಿ ನಿಧನರಾದರು. ಸಾಕಷ್ಟು ಕಷ್ಟಗಳ ಮಧ್ಯೆ ಜೀವನ ನಡೆಸಿ, ಸಿನಿ ಲೋಕದವರೆಗೂ ಬೆಳೆದು ಉತ್ತಮ ಹೆಸರು ಮಾಡಿದ್ದ ಅವರು ಇತರರಿಗೆ ಕಲೆಯನ್ನು ಕಲಿಸಲು ಶ್ರಮಿಸುತ್ತಿದ್ದರು. ಇಂತಹ ಅದ್ಭುತ ಕಲಾವಿದನನ್ನು ಕಳೆದುಕೊಂಡ ವಿಜಯಪುರ ಜಿಲ್ಲೆಗೆ ತುಂಬಲಾರದ ನಷ್ಟವಾಯಿತು.

ಕನ್ಹೇರಿ ಶ್ರೀಗಳಿಗೆ ನಿರ್ಬಂಧ

ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕನ್ಹೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿಗಳನ್ನು ಅಕ್ಟೋಬರ್ 16ರಿಂದ ಡಿಸೆಂಬರ್ 14ರ ವರೆಗೆ ಎರಡು ತಿಂಗಳು ಜಿಲ್ಲೆಗೆ ಪ್ರವೇಶಿಸದಂತೆ ಶ್ರೀಗಳ ಪ್ರವೇಶ ನಿರ್ಬಂಧಿಸಿ ವಿಜಯಪುರ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಈ ವೇಳೆ ಸಾಕಷ್ಟು ಪರ ವಿರೋಧಗಳು ಚರ್ಚೆಗಳಾಗಿದ್ದವು. ಕನ್ಹೇರಿ ಶ್ರೀಗಳ ನಿರ್ಬಂಧದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.

ಅತಿ ಹೆಚ್ಚಿನ ಶೀತಗಾಳಿ

ಡಿಸೆಂಬರ್ 20ರಂದು 6.7 ಕನಿಷ್ಠ ತಾಪಮಾನ ದಾಖಲಾಗಿದ್ದು, ಈ ಬಾರಿಯ ಚಳಿಗೆ ಗುಮ್ಮಟ ನಗರಿಯ ಜನರು ಗಡಗಡ ನಡುಗಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಮೂರನೇ ಬಾರಿಗೆ ಇದು ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗುವ ಮೂಲಕ ದಾಖಲೆಯನ್ನೇ ಬರೆದಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ನವ್ಹೆಂಬರ್ ಹಾಗೂ ಡಿಸೆಂಬರ್ ನಲ್ಲಿ ಆವರಿಸಿದ ಅತಿಯಾದ ಶೀತಗಾಳಿ ಜಿಲ್ಲೆಯ ಜನರನ್ನು ಥಂಡಾ ಹೊಡೆಸಿದೆ.

ಕನ್ಹೇರಿ ಶ್ರೀಗಳಿಗೆ ಪ್ರವೇಶ ನಿರ್ಬಂಧ

ಎರಡು ತಿಂಗಳುಗಳ ಕಾಲ ಪ್ರವೇಶ ನಿರ್ಬಂಧಿಸಲು ರಾಜಕೀಯ ಕಾರಣವಿದೆ ಎಂದು ಹಲವರು ಗುಡುಗಿದ್ದರು. ಇದರ ಪರಿಣಾಮ ನಿರ್ಬಂಧ ಅವಧಿ ಮುಗಿಯುತ್ತಿದ್ದಂತೆ ಡಿ.29ರಂದು ಬಬಲೇಶ್ವರ ಪಟ್ಟಣದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲಾಯಿತು. ಈ ಸಮಾವೇಶದಲ್ಲಿ ಸಾವಿರಾರು ಬೈಕ್ ರ್‍ಯಾಲಿ ಹಾಗೂ ಕುಂಭಮೇಳ ಮೆರವಣಿಗೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಲಾಯಿತು. ಈ ಸಮಾವೇಶದ ಮೂಲಕ ಕನ್ಹೇರಿ ಕಾಡಸಿದ್ಧೇಶ್ವರ ಶ್ರೀಗಳು ಜಿಲ್ಲೆಗೆ ಅಧಿಕೃತವಾಗಿ ಪ್ರವೇಶ ಮಾಡಿದರು.ಇದರೊಟ್ಟಿಗೆ ಅನೇಕ ರಸ್ತೆ ಅಪಘಾತಗಳು ನಡೆದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಸಾಲುಸಾಲು ಅವಘಡಗಳು ಜಿಲ್ಲೆಯಲ್ಲಿ ನಡೆದಿದ್ದು, 2025 ಜಿಲ್ಲೆಯ ಜನರಿಗೆ ಕಹಿಯಾಗಿತ್ತು. ಮುಂಬರಲಿರುವ ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಕಟ್ಟಿಕೊಂಡಿರುವ ಜನತೆಗೆ ಒಳಿತಾಗಲಿ. 2026 ಎಲ್ಲರಿಗೂ ಶುಭವಾಗಲಿ ಎನ್ನುತ್ತ 2025ಗೆ ವಿದಾಯ ಹೇಳೋಣ...

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ