ಲೋಕ ಫಲಿತಾಂಶದ ನಂತರ ಸಂಪುಟ ವಿಸ್ತರಣೆ ಆಗಲ್ಲ: ಸತೀಶ್‌

KannadaprabhaNewsNetwork |  
Published : May 18, 2024, 12:31 AM ISTUpdated : May 18, 2024, 11:09 AM IST
satish jarkiholi

ಸಾರಾಂಶ

ನನಗಿರುವ ಮಾಹಿತಿ ಪ್ರಕಾರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಆಗಲ್ಲ. ಆದಾಗ್ಯೂ, ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

 ಬೆಳಗಾವಿ :  ‘ನನಗಿರುವ ಮಾಹಿತಿ ಪ್ರಕಾರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಆಗಲ್ಲ. ಆದಾಗ್ಯೂ, ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಿಂದ ಸಚಿವರ ಮಕ್ಕಳಿಗೆ ಟಿಕೆಟ್‌ ನೀಡಿದ್ದು ಹೈಕಮಾಂಡ್‌ ನಿರ್ಧಾರ. ಈ ಕುರಿತು ಬಿಜೆಪಿಯವರಿಗೆ ಟೀಕಿಸಲು ನೈತಿಕ ಹಕ್ಕಿಲ್ಲ. ಬಿಜೆಪಿಯಲ್ಲಿಯೂ ಸಚಿವರ ಮಕ್ಕಳಿಗೆ ಟಿಕೆಟ್‌ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಈ ವ್ಯವಸ್ಥೆ ಎಲ್ಲ ಪಕ್ಷಗಳಲ್ಲಿಯೂ ಇದೆ. ಸಚಿವರ ಮಕ್ಕಳಿಗೆ ಟಿಕೆಟ್‌ ಸಿಕ್ಕಿದ್ದರಿಂದ ಪಕ್ಷಕ್ಕೆ ಅನುಕೂಲವೇ ಆಗಿದ್ದು, 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್‌ ಹೆಚ್ಚಿನ ಸೀಟು ಗೆಲ್ಲಲು ಅವಕಾಶ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ 28 ಕ್ಷೇತ್ರಗಳ ಪೈಕಿ 14 ರಿಂದ 17 ಸೀಟುಗಳನ್ನು ನಾವು ಗೆಲ್ಲುತ್ತೇವೆ. ಮುಂಬೈ, ಹೈದರಾಬಾದ್‌ ಕರ್ನಾಟಕದ ಭಾಗದಲ್ಲಿ ಕಾಂಗ್ರೆಸ್‌ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ನೇಹಾ, ಅಂಜಲಿ ಕೊಲೆ ಕೇಸ್‌ನಂತಹ ಪ್ರಕರಣಗಳು ಎಲ್ಲ ಸರ್ಕಾರದ ಅವಧಿಯಲ್ಲಿಯೂ ಸಂಭವಿಸಿವೆ. ಇಂತಹ ಘಟನೆಗಳ ಮೇಲೆ ಪೊಲೀಸ್‌ ಇಲಾಖೆ ಹೆಚ್ಚಿನ ನೀಗಾ ವಹಿಸಬೇಕು ಎಂದು ಸೂಚಿಸಿದರು.

ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಸಂಬಂಧ ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮಹಾರಾಷ್ಟ್ರದಿಂದ ನೀರು ಬಿಡುತ್ತಾರೆನ್ನುವ ವಿಶ್ವಾಸವಿದೆ. ಹಿಡಕಲ್ ಡ್ಯಾಮ್‌ನಿಂದ ಕೃಷ್ಣಾ ನದಿಗೆ ಈಗಾಗಲೇ ಒಂದು ಟಿಎಂಸಿ ನೀರು ಬಿಟ್ಟಿದ್ದೇವೆ. ಇನ್ನೊಂದು ಟಿಎಂಸಿ ನೀರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ