ಕನ್ನಡಪ್ರಭ ವಾರ್ತೆ ಮಂಡ್ಯ
ಕಾರಣಾಂತರಗಳಿಂದ ವೀಕ್ಷಕರ ಭೇಟಿ ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಮುಂದಿನ ಸೂಚನೆವರೆಗೆ ಅಧ್ಯಕ್ಷರ ಬದಲಾವಣೆ ಸಂಬಂಧ ಯಾವುದೇ ಸಭೆಗಳನ್ನು ನಡೆಸಬಾರದು. ಈಗಾಗಲೇ ಕರೆದಿರುವ ಸಭೆಗಳನ್ನು ರದ್ದುಗೊಳಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ (ಆಡಳಿತ) ಜಿ.ಸಿ.ಚಂದ್ರಶೇಖರ್ ಪತ್ರ ಮುಖೇನ ಸೂಚಿಸಿದ್ದಾರೆ.
ವೀಕ್ಷಕರ ಭೇಟಿ ಮುಂದೂಡಿಕೆಯಿಂದ ಹಲವು ವರ್ಷಗಳಿಂದ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ ನಿರಾಸೆಯಾಗಿದ್ದರೆ, ಅಧ್ಯಕ್ಷರಾಗಿರುವವರು ನಿಟ್ಟುಸಿರು ಬಿಡುವಂತೆ ಮಾಡಿದೆ.ಜಿಲ್ಲಾಧ್ಯಕ್ಷರ ಬದಲಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಗೆ ವಿಧಾನಪರಿಷತ್ ಸದಸ್ಯ ಎಸ್.ರವಿ, ಭಾರತೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದರು.
ವೀಕ್ಷಕರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದವರು ಖುಷಿಯಲ್ಲಿದ್ದು, ಪೂರ್ವತಯಾರಿ ನಡೆಸಿದ್ದರು. ಇದೀಗ ಸಭೆ ಮುಂದೂಡಿರುವುದರಿಂದ ಮತ್ತೆ ನೂತನ ಅಧ್ಯಕ್ಷರ ಆಯ್ಕೆ ನೆನೆಗುದಿಗೆ ಬೀಳುವಂತಾಗಿರುವುದು ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ.