ಮಲ್ಲಿಪಟ್ಟಣ ರಸ್ತೆ ಮಾರ್ಗದಲ್ಲಿ ಸಂಚರಿಸುವ ನೂರಾರು ವಾಹನಗಳು । ಸವಾರರ ಜೀವಕ್ಕೆ ಕಂಟಕವಾಗಿರುವ ಮರಗಳ ಕೊಂಬೆಗಳಲ್ಲಿ ಬಳ್ಳಿಗಳು
ಶೇಖರ್ ವೈ. ಡಿ.ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಮಲ್ಲಿಪಟ್ಟಣ ಮಾರ್ಗವಾಗಿ ಹಾದು ಹೋಗಿರುವ ರಸ್ತೆ ಬದಿ ಬೆಳೆದಿರುವ ಬೃಹತ್ ಗಾತ್ರದ ಮರಗಳ ಕೊಂಬೆಗಳಲ್ಲಿ ದೊಡ್ಡದಾದ ಸಾಕಷ್ಟು ಬಳ್ಳಿ ಹಂಬುಗಳು ರಸ್ತೆಗೆ ಅಡ್ಡಲಾಗಿ ನೇತು ಬಿದ್ದಿದ್ದು ಪ್ರಯಾಣಿಕರ ಸುಗಮ ಸಂಚಾರಕ್ಕೆ ಸಂಚಕಾರವಾಗಿ ಪರಿಣಮಿಸಿವೆ.ಅರಕಲಗೂಡು-ಮಲ್ಲಿಪಟ್ಟಣ ಮಾರ್ಗದಲ್ಲಿ ಬಿದುರುಮಳೆ ಕೊಪ್ಪಲು, ದಾರಿಕೊಂಗಳಲೆ, ವಿಜಯಪುರ, ಅಡಿಕೆಬೊಮ್ಮನಹಳ್ಳಿ ಏತ ನೀರಾವರಿ ತಿರುವು ಸೇರಿದಂತೆ ಮಾರ್ಗದುದ್ದಕ್ಕೂ ಸಾಕಷ್ಟು ಕಡೆ ರಸ್ತೆ ಬದಿ ಮರಗಳಲ್ಲಿ ಬೆಳೆದು ನೇತು ಬಿದ್ದಿರುವ ಬೃಹತ್ ಗಾತ್ರದ ಬಳ್ಳಿ ಹಂಬುಗಳು ವಾಹನ ಸವಾರರಿಗೆ ಕಂಟಕವಾಗಿದ್ದು ಅನಾಹುತಕ್ಕೆ ದಾರಿ ಮಾಡಿವೆ. ಮಲ್ಲಿಪಟ್ಟಣ ಮಾರ್ಗವಾಗಿ ಸಾಗುವ ಈ ರಸ್ತೆ ಬದಿ ಕೆರೆ ಏರಿ ಸೇರಿದಂತೆ ಹಲವು ಕಡೆ ಕಡಿದಾದ ತಿರುವಿನಿಂದ ಕೂಡಿದೆ. ಮರಗಳಲ್ಲಿ ಬೆಳೆದಿರುವ ಬೃಹತ್ ಗಾತ್ರದ ಬಳ್ಳಿಗಳು ತಿರುವು ರಸ್ತೆಯಲ್ಲಿ ಪ್ರಯಾಣಿಕರಿಗೆ ನರಕಯಾತನೆ ನೀಡುತ್ತಿವೆ.
ಕೊಡಗು ಹಾಗೂ ಸಕಲೇಶಪುರ ತಾಲೂಕಿನ ಮಲೆನಾಡು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ರಸ್ತೆಯಲ್ಲಿ ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್, ಕಾರು, ದ್ವಿಚಕ್ರವಾಹನ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಸರ್ಕಾರಿ ರಜಾ ದಿನಗಳಲ್ಲಿ ವಾಹನಗಳ ಓಡಾಟ ವಿಪರೀತವಾಗಿರುತ್ತದೆ. ಹಾಸನ ಮಾರ್ಗಕ್ಕಿಂತ ಹೆಚ್ಚಾಗಿ ಬೆಂಗಳೂರಿನಿಂದ ಮಲೆನಾಡು ಪ್ರದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಮಲ್ಲಿಪಟ್ಟಣ ಮಾರ್ಗ ಹತ್ತಿರವಾಗುವ ಕಾರಣ ಅನೇಕ ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಮಲ್ಲಿಪಟ್ಟಣ ನಂತರ ಬರುವುದೇ ಶನಿವಾರಸಂತೆ, ಕೊಡ್ಲಿಪೇಟೆ ಮಾರ್ಗವಾಗಿ ಸಕಲೇಶಪುರದ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳಲು ಸುಲಭದ ಹಾದಿಯಾಗಿದೆ. ಹೀಗಾಗಿ ವಾಹನಗಳ ಓಡಾಟ ಸಹಜವಾಗಿ ಹೆಚ್ಚಳವಾಗುತ್ತದೆ. ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಸಾಲು ಸಾಲಾಗಿ ವಾಹನಗಳು ಸಂಚರಿಸುತ್ತಿವೆ.ಬೆಂಗಳೂರು ಕಡೆಯಿಂದ ಹೊಸದಾಗಿ ಬರುವ ಪ್ರಯಾಣಿಕರು ಹಾಗೂ ಬೈಕ್ ಸವಾರರು ರಸ್ತೆಗೆ ಹೊಂದಿಕೊಂಡಂತೆ ಜೋತು ಬಿದ್ದಿರುವ ಬಳ್ಳಿ ಹಂಬುಗಳನ್ನು ಗಮನಿಸದೆ ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತಿದೆ. ವೇಗವಾಗಿ ಓಡಾಡುವ ದ್ವಿಚಕ್ರ ವಾಹನ ಸವಾರರು ಹಲವಾರು ಸಲ ರಸ್ತೆಯಲ್ಲಿ ಗಾಯಗೊಂಡ ಘಟನೆಗಳು ನಡೆದಿವೆ. ಇನ್ನು ಎರಡು ವಾಹನಗಳು ಎದುರು ಬದುರಾದರೆ ವಾಹನ ಸವಾರರ ಪಾಡು ಹೇಳತೀರದಾಗಿದೆ.
ಒಂದೆಡೆ ಮರದ ಬಳ್ಳಿಗಳು ರಸ್ತೆಗೆ ಅಡ್ಡಲಾಗಿ ಹರಡಿಕೊಂಡಿದ್ದರೆ ಇನ್ನೊಂದೆಡೆ ರಸ್ತೆ ಕೂಡ ವಿಸ್ತರಣೆಯಾಗದೆ ಕಿಷ್ಕಿಂದೆಯಂತಾಗಿದ್ದು ಪ್ರಯಾಣಿಕರ ಓಡಾಟಕ್ಕೆ ತೀರ ಸಮಸ್ಯೆಯಾಗಿದೆ. ಇಷ್ಟೆಲ್ಲ ಸಮಸ್ಯೆಗಳಿಂದಾಗಿ ರಾತ್ರಿ ವೇಳೆಯಂತೂ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಸಾಲದಕ್ಕೆ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಕಾಡಾನೆಗಳು ಕಾಟ ಕೊಡುತ್ತಿವೆ.ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ
ಪ್ರವಾಸಿ ತಾಣಗಳ ಪ್ರಕೃತಿ ಸೌಂದರ್ಯ ಸವಿಯಲು ಮಲ್ಲಿಪಟ್ಟಣ ಮಾರ್ಗ ಹತ್ತಿರವಾದ ಕಾರಣ ಬೆಂಗಳೂರಿನಿಂದ ಕೊಡಗು ಹಾಗೂ ಸಕಲೇಶಪುರ, ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಲು ಅನೇಕ ವಾಹನ ಸವಾರರು ಇದೇ ರಸ್ತೆಯನ್ನು ಹೆಚ್ಚಾಗಿ ಅವಲಂಬಿಸುತ್ತಾರೆ. ಸಂಬಂದಪಟ್ಟವರು ಸಬೂಬು ಹೇಳದೆ ಇತ್ತ ಗಮನ ಹರಿಸಿ ರಸ್ತೆ ಬದಿ ಬೆಳೆದಿರುವ ಮರಗಳ ಬಳ್ಳಿ ಹಂಬುಗಳನ್ನು ತೆರವುಗೊಳಿಸಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮಲ್ಲಿಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಹೇಳಿದ್ದಾರೆ.
ರಸ್ತೆ ಬದಿ ಮರಗಳಲ್ಲಿ ಬೆಳೆದಿರುವ ಹಂಬುಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಬೇಕು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಬಿಂದು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಅರಕಲಗೂಡು.ರಸ್ತೆ ಬದಿ ಮರಗಳಲ್ಲಿ ಹಬ್ಬಿರುವ ಬಳ್ಳಿಗಳನ್ನು ಕಡಿದು ತೆರವುಗೊಳಿಸಲು ಇಲಾಖೆಯಲ್ಲಿ ಅನುದಾನ ಇಲ್ಲ, ಇವುಗಳ ನಿರ್ವಹಣೆಗೆ ಸರ್ಕಾರ ಕೂಡ ಯಾವುದೇ ಹಣ ಒದಗಿಸುತ್ತಿಲ್ಲ. ವೈಯಕ್ತಿವಾಗಿ ಹಣ ವ್ಯಯಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ.
ಯಶ್ಮ ಮಾಚಮ್ಮ, ವಲಯ ಅರಣ್ಯಾಧಿಕಾರಿ, ಅರಕಲಗೂಡು.