ಕನ್ನಡಪ್ರಭ ವಾರ್ತೆ ಮಂಡ್ಯ
ಅಪರಿಚಿತ ಪುರುಷ- ಮಹಿಳೆ ಸೇರಿಕೊಂಡು ಮಹಿಳೆಯೊಬ್ಬರಿಗೆ ನಕಲಿ ಚಿನ್ನದ ಸರ ನೀಡಿ ಆಕೆಯ ಮಾಂಗಲ್ಯಸರ ಎಗರಿಸಿರುವ ಪ್ರಕರಣವೊಂದು ನಗರದಲ್ಲಿ ನಡೆದಿದೆ.ತಾಲೂಕಿನ ಈಚಗೆರೆ ಗ್ರಾಮದ ಎನ್.ಎಸ್.ಸುಕನ್ಯಾ ಎಂಬುವರೇ ವಂಚನೆಗೊಳಗಾದವರು. ಸುಕನ್ಯಾ ಅವರು ತಮ್ಮ ಮಗ ಮಹೇಶನೊಂದಿಗೆ ಮಂಡ್ಯದ ತರಕಾರಿ ಮಾರುಕಟ್ಟೆಗೆ ಆಗಮಿಸಿದ್ದರು. ಈ ವೇಳೆ ಮಹೇಶ ಶೇವಿಂಗ್ ಮಾಡಿಸಿಕೊಂಡು ಬರುತ್ತೇನೆ. ಅಷ್ಟರಲ್ಲಿ ತರಕಾರಿಯನ್ನು ತೆಗೆದುಕೊಂಡಿರು ಎಂದು ತಿಳಿಸಿ ಹೋಗಿದ್ದನು.
ಮಧ್ಯಾಹ್ನ ೧೨.೩೦ರ ಸಮಯಕ್ಕೆ ಅಪರಿಚಿತ ಹೆಂಗಸು ಮತ್ತು ಪುರುಷ ಸುಕನ್ಯಾ ಅವರನ್ನು ಮಾತನಾಡಿಸಿದ್ದಾರೆ. ನನ್ನ ಹೆಸರು ಮಂಜುನಾಥ ಈ ಹೆಂಗಸಿನ ಬಳಿ ೧೫೦ ಗ್ರಾಂ ಚಿನ್ನ ಇದೆ. ಇದನ್ನು ಬೇರೆ ಯಾರಿಗಾದರೂ ಮಾರಿಬಿಡುತ್ತಾಳೆ. ಈ ಚಿನ್ನನ ನನಗೆ ಬೇಕೆಂದು ಹೇಳಿ ಹಣ ಮತ್ತು ಒಂದು ಜೊತೆ ಓಲೆ ತಂದಿದ್ದನು.ಇದಕ್ಕೆ ಪ್ರತಿಯಾಗಿ ಆ ಹೆಂಗಸು, ನಾನು ಕಷ್ಟದಲ್ಲಿದ್ದೇನೆ. ನನ್ನ ಬಳಿ ಇರುವ ೧೫೦ ಗ್ರಾಂ ಚಿನ್ನವನ್ನು ನೀನೇ ಇಟ್ಟುಕೋ. ಅವನಿಗೆ ಕೊಡುವುದಿಲ್ಲ. ೧೦ ಸಾವಿರ ರು. ಹಾಗೂ ನಿನ್ನ ಮಾಂಗಲ್ಯಸರ ಕೊಡುವಂತೆ ಸುಕನ್ಯಾಗೆ ತಿಳಿಸಿದರು. ಇದಕ್ಕೆ ಆಸೆಪಟ್ಟ ಸುಕನ್ಯಾ ತಮ್ಮ ಬಳಿ ಇದ್ದ ೪ ಸಾವಿರ ರು. ಹಾಗೂ ೩೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿ ಅವರಿಗೆ ಕೊಟ್ಟು, ಆಕೆಯ ಬಳಿ ಇದ್ದ ೧೫೦ ಗ್ರಾಂ ಚಿನ್ನ ಎಂದು ಹೇಳಿದ್ದ ಕರಿಮಣಿ ಸರದ ಜೊತೆಯಲ್ಲಿದ್ದ ಚಿನ್ನದಂತಿದ್ದ ಕಾಸುಗಳನ್ನು ಹಾಗೂ ಮಾಂಗಲ್ಯವನ್ನು ಪಡೆದುಕೊಂಡರು. ಕೂಡಲೇ ಅಪರಿಚಿತ ಪುರುಷ- ಹೆಂಗಸು ಅಲ್ಲಿಂದ ತೆರಳಿದರು.
ನಂತರ ಅಲ್ಲಿಗೆ ಬಂದ ಮಗನಿಗೆ ವಿಚಾರ ತಿಳಿಸಿದಾಗ ಆತ ಅವುಗಳನ್ನು ನೋಡಿ ಇದು ನಕಲಿ ಚಿನ್ನ ಎಂದು ತಕ್ಷಣಕ್ಕೆ ಗುರುತಿಸಿದ. ಕೂಡಲೇ ಅವರು ಮಾರ್ಕೆಟ್‌ನಲ್ಲೆಲ್ಲಾ ಸುತ್ತಾಡಿದರೂ ಅವರು ಪತ್ತೆಯಾಗಲೇ ಇಲ್ಲ. ಅಷ್ಟೊತ್ತಿಗೆ ಅವರು ಪರಾರಿಯಾಗಿದ್ದರು. ಈ ಸಂಬಂಧ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.