ಯುವಕನ ಮೇಲೆ ಕಾರು ಹರಿಸಿ 100 ಮೀ. ಎಳೆದೊಯ್ದರು

KannadaprabhaNewsNetwork |  
Published : Oct 25, 2026, 02:00 AM ISTUpdated : Oct 25, 2026, 07:44 AM IST
Accident

ಸಾರಾಂಶ

ರಸ್ತೆ ಗಲಾಟೆಗೆ ಯುವಕ ಬಲಿಯಾಗಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಿಹಾರ ಮೂಲದ ರಂಜಿತ್ ಕುಮಾರ್ ಸಾಹು (25) ಮೃತ ಯುವಕ.

ಬೆಂಗಳೂರು : ರಸ್ತೆ ಗಲಾಟೆಗೆ ಯುವಕ ಬಲಿಯಾಗಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಿಹಾರ ಮೂಲದ ರಂಜಿತ್ ಕುಮಾರ್ ಸಾಹು (25) ಮೃತ ಯುವಕ.

ಬಿಟಿಎಂ ಲೇಔಟ್‌ನ ಪಿ.ಜಿಯಲ್ಲಿ ಅಡುಗೆ ಕೆಲಸ ಮಾಡುವ ರಂಜಿತ್‌ನನ್ನು ದುಷ್ಕರ್ಮಿಗಳ ಗುಂಪೊಂದು ಕಾರಿನಿಂದ ಡಿಕ್ಕಿ ಹೊಡೆದು ಸುಮಾರು 100 ಮೀ. ದೂರ ಎಳೆದೊಯ್ದು ರಸ್ತೆ ಮಧ್ಯೆ ಬಿಟ್ಟು ಹೋಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ರಂಜಿತ್‌ ಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಸಂಬಂಧ ಯುವಕನ ಸ್ನೇಹಿತ ನಿತೀಶ್‌ ಮುಖಿಯಾ ಎಂಬುವರು ನೀಡಿದ ದೂರಿನನ್ವಯ ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣ ವಿವರ:

ದೂರುದಾರರಾದ ಬಿಹಾರ ಮೂಲದ ನಿತೀಶ್‌ ಮುಖಿಯಾ ದಸರಾ ಹಬ್ಬಕ್ಕೆಂದು ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಪ್ರಗತಿನಗರದಲ್ಲಿ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದ. ಅ.21ರ ರಾತ್ರಿ ಊಟದ ಬಳಿಕ ಅಣ್ಣನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರೊಂದು ಅತಿ ವೇಗವಾಗಿ ಬಂದಿದೆ. ಕಾರಿನ ವೇಗ ಕಡಿಮೆ ಮಾಡುವಂತೆ ಚಾಲಕನಿಗೆ ನಿತೀಶ್‌ ಸನ್ನೆ ಮಾಡಿದ್ದರು. ಇದರಿಂದ ಕಾರಿನಲ್ಲಿದ್ದವರು ಆಕ್ರೋಶಗೊಂಡು, ನಮ್ಮ ಕಾರಿಗೆ ಕೈ ತೋರಿಸುತ್ತೀಯಾ ಎಂದು ನಿತೀಶ್‌ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ತೆರಳಿದ್ದರು. ಅಲ್ಲದೇ ಕೆಲವು ನಿಮಿಷಗಳ ಬಳಿಕ ಅದೇ ಕಾರಿನಲ್ಲಿ ವಾಪಸ್ ಬಂದ ದುಷ್ಕರ್ಮಿಗಳು ನಿತೀಶ್‌ ಅವರನ್ನು ಅಡ್ಡಗಟ್ಟಿ, ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದರು.

ಗೆಳೆಯನ ಸಹಾಯಕ್ಕೆ ಬಂದವ ಹೆಣವಾದ:

ನಿತೀಶ್‌ ಸಮೀಪದ ಕೊಠಡಿಯೊಂದಕ್ಕೆ ತೆರಳಿ ರಂಜಿತ್ ಸಾಹು ಹಾಗೂ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಯುವಕರ ಗುಂಪನ್ನು ಕಂಡ ದುಷ್ಕರ್ಮಿಗಳು ಅವರ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಈ ವೇಳೆ ರಂಜಿತ್‌ಗೆ ಕಾರು ಡಿಕ್ಕಿ ಹೊಡೆದು ಆತನ ಕಾಲುಗಳ ಮೇಲೆ ಕಾರು ಹರಿಸಿ ಸುಮಾರು 100 ಮೀ. ದೂರ ಎಳೆದೊಯ್ದು ಹೊಸೂರು ಸರ್ವಿಸ್ ರಸ್ತೆಯ ಮಧ್ಯೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.

ರಂಜಿತ್‌ನ ಹಲವು ಮೂಳೆ ಮುರಿತವಾಗಿ, ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ರಂಜಿತ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ಘಟನೆಯಲ್ಲಿ ನಿತೀಶ್‌ಗೂ ಸಣ್ಣಪುಟ್ಟ ಗಾಯಗಳಾಗಿತ್ತು. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕೆಪಿಎಸ್ಸಿ ಜ್ಞಾನೇಂದ್ರ ವಿರುದ್ಧದ ಚಾರ್ಜ್‌ಶೀಟ್‌ಗೆ ಸಿಎಂ ಸಮ್ಮತಿ
ರಾಜವೈಭವದ ಗೋಲ್ಡನ್‌ ಚಾರಿಯಟ್‌ಗೆ ಚಾಲನೆ - ಮೊದಲ ಪ್ರಯಾಣದ ಟಿಕೆಟ್ ಪೂರ್ಣ ಮಾರಾಟ