ಧಾರವಾಡ:
ಈ ವಿಭಾಗದಲ್ಲಿ ಐತಿಹಾಸಿಕ ಮಹತ್ವವುಳ್ಳ ತಾಳೆಗರಿಗಳಿವೆ. ಇತ್ತೀಚಿಗಷ್ಟೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವುಗಳ ಡಿಜಲಿಟೀಕರಣ ಮಾಡಲಾಗಿದೆ. ಇಂತಹ ಪ್ರಮುಖ ವಿಭಾಗದಲ್ಲಿ ಭಾನುವಾರ ತಡರಾತ್ರಿ ಕಳ್ಳತನ ನಡೆದಿದೆ. ಇಡೀ ಕಟ್ಟಡಕ್ಕೆ ಬೆಳಕಿನ ಸಂಪರ್ಕ ನೀಡುವ ವಿದ್ಯುತ್ ತಂತಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ನೆಲಮಹಡಿ ಹಾಗೂ ಮೇಲಿನ ಎರಡು ಮಹಡಿಗಳಲ್ಲಿನ ಎಲ್ಲ ವೈರಿಂಗ್ ಕಿತ್ತು ಹಾಕಿರುವ ಕಳ್ಳರು, ವಿದ್ಯುತ್ ತಂತಿಯನ್ನು ಕದ್ದೊಯ್ದಿದ್ದಾರೆ. ಇದರಿಂದಾಗಿ ಕಟ್ಟಡಕ್ಕೆ ಒದಗಿಸಲಾಗಿದ್ದ ವಿದ್ಯುತ್ ಸಂಪರ್ಕ ಕತ್ತರಿಸಿದೆ. ಹೀಗಾಗಿ ಎರಡು ದಿನಗಳಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವಿದ್ಯುತ್ ಇಲ್ಲದೇ ಕಾರ್ಯ ನಿರ್ವಹಿಸುವಂತಾಗಿದೆ.
ವಿಭಾಗದ ಪುರುಷರ ಶೌಚಾಲಯಕ್ಕೆ ಇರುವ ವೆಂಟಿಲೇಟರ್ ಗ್ರಿಲ್ ಕಿತ್ತು ಬಹಳ ದಿನಗಳಾಗಿವೆ. ಕಳ್ಳ ಅದೇ ವೆಂಟಿಲೇಟರ್ ಮೂಲಕ ಕಟ್ಟಡದ ಒಳಗಡೆ ಬಂದಿರಬಹುದು ಎಂಬ ಶಂಕೆ ಇದೆ. ಅಚ್ಚರಿಯ ಸಂಗತಿಯೆಂದರೆ, ಇಡೀ ವಿಶ್ವವಿದ್ಯಾಲಯಕ್ಕೆ ಭದ್ರತೆ ನೀಡಲು ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ಖಾಸಗಿ ಏಜೆನ್ಸಿ ಭದ್ರತೆಗೆ ನಿಯೋಜಿಸಿದೆ. ಆದರೂ ಕಳ್ಳರು ಕಟ್ಟಡದೊಳಗೆ ನುಗ್ಗಿ ವೈರಿಂಗ್ ವ್ಯವಸ್ಥೆ ಹಾಳು ಮಾಡಿರುವುದು ಹೇಗೆ ಸಾಧ್ಯ ಎಂದು ವಿಭಾಗದ ವಿದ್ಯಾರ್ಥಿಗಳು, ಸಿಬ್ಬಂದಿ ಪ್ರಶ್ನೆ.ಕಳ್ಳತನದ ದೂರು ನೀಡಿಲ್ಲ:
ಕವಿವಿಯ ಬೇರೆ ಬೇರೆ ವಿಭಾಗದಲ್ಲೂ ಇದೇ ರೀತಿ ಕಳ್ಳತನ ನಡೆದಾಗಲೂ ವಿವಿ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡದೇ ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ಕನ್ನಡ ವಿಭಾಗದಲ್ಲಿ ಕಳ್ಳತನ ನಡೆದಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ವಿವಿಯಲ್ಲಿ ಪದೇ ಪದೇ ಕಳ್ಳತನ ನಡೆದರೆ ಹೇಗೆ? ಅಲ್ಲದೇ, ತನಿಖೆ ನಡೆಸದೇ ಸುಮ್ಮನಿರುವುದು ಏತಕ್ಕೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.