ಹನುಮಂತಪುರದಲ್ಲಿ ಎಟಿಎಂ ಯಂತ್ರವನ್ನೇ ಕದ್ದೊಯ್ದ ಕಳ್ಳರು!

KannadaprabhaNewsNetwork | Published : Jan 30, 2025 12:32 AM

ಸಾರಾಂಶ

ಕಳ್ಳರು ಕದಿಯುವಾಗ ಯಾರು ಸಮಸ್ಯೆ ಕೊಡಬಾರದೆಂದು ಮೊದಲೆ ಪ್ಲಾನ್ ಮಾಡಿ ಮೊದಲು ಈ ಎಟಿಎಂ ಪಕ್ಕದಲ್ಲಿರುವ ಮನೆಗಳ ಮುಂದಿನ ಚಿಲಕ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಕೈಗಾರಿಕಾ ಪ್ರದೇಶದ ಮಗ್ಗುಲಲ್ಲೇ ಇರುವ ಹನುಮಂತಪುರದಲ್ಲಿ ಎಟಿಎಂ ಯಂತ್ರವನ್ನೇ ಕಳವು ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗೊರೂರು ಮುಖ್ಯ ರಸ್ತೆ, ಹನುಮಂತಪುರ, ಪಂಚಮುಖಿ ಬೃಹತ್ ಆಂಜನೇಯ ವಿಗ್ರಹದ ಸಮೀಪದಲ್ಲೇ ಇರುವ ಇಂಡಿಯಾ ಒನ್ ಎಟಿಎಂ ಯಂತ್ರವನ್ನು ಸುಮಾರು ಒಂದು ಗಂಟೆಯ ಆಸುಪಾಸಿನಲ್ಲಿ ಬಂದಿರುವ ಕಳ್ಳರು, ಕದಿಯುವಾಗ ಯಾರು ಸಮಸ್ಯೆ ಕೊಡಬಾರದೆಂದು ಮೊದಲೆ ಪ್ಲಾನ್ ಮಾಡಿ ಮೊದಲು ಈ ಎಟಿಎಂ ಪಕ್ಕದಲ್ಲಿರುವ ಮನೆಗಳ ಮುಂದಿನ ಚಿಲಕ ಹಾಕಿದ್ದಾರೆ. ನಂತರ ಎಟಿಎಂ ಬೂತ್‌ಗೆ ನುಗ್ಗಿದ್ದಾರೆ.

ಹಣ ತೆಗೆಯಲು ಹೋದರೇ ಸೈರನ್ ಇತರೆ ಸಮಸ್ಯೆಗಳು ಎದುರಾಗಬಹುದೆಂದು ಸೈರನ್ ಬಾರದಂತೆ ನಿಗಾ ವಹಿಸಿದ್ದು, ನಂತರ ಹಣದ ಸಮೇತ ಎಟಿಎಂ ಬಾಕ್ಸನ್ನೆ ಕದ್ದೊಯ್ದಿದ್ದಾರೆ. ಬೆಳಗಿನ ಸಮಯದಲ್ಲಿ ಜನರಿಗೆ ಎಟಿಎಂ ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿದೆ. ನಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಬುಧವಾರ ಬೆಳಿಗ್ಗೆ ಎಸ್ಪಿ ಮೊಹಮ್ಮದ್ ಸುಜೀತಾ ಹಾಗೂ ಪೊಲೀಶ್ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ಹನುಮಂತಪುರದ ಮುರುಳೀಧರ ಮಾಧ್ಯಮದೊಂದಿಗೆ ಮಾತನಾಡಿ, ನೆನ್ನೆ ಸಂಜೆಯಿಂದ ರಾತ್ರಿ 10:30ರ ವರೆಗೂ ಇಲ್ಲೆ ತಿರುಗಾಡಿದ್ದೇವೆ. ಯಾರು ಈ ಕಳ್ಳತನ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ರಾತ್ರಿ ವೇಳೆ ಲಾರಿ ಹಾಗೂ ಇತರೆ ವಾಹನಗಳು ಓಡಾಡುತ್ತಿರುತ್ತವೆ. 11 ಗಂಟೆಯ ನಂತರ ವಾಹನ ಸಂಚಾರ ಕಡಿಮೆ ಆಗುತ್ತದೆ. ಈ ವೇಳೆ ಕಳ್ಳತನ ಮಾಡಿರಬಹುದು ಎಂದರು. ಹಾರೆಯಿಂದ ಎಟಿಎಂ ಬಾಕ್ಸ್ ಸೆಟ್ ನ್ನೆ ಕದ್ದಿದ್ದಾರೆ. ಪೊಲೀಸ್ ಬೀಟ್ ಬರುತ್ತಾರೆ. ಎಟಿಎಂ ಕದಿಯುವಾಗ ಶಬ್ಧ ಕೇಳಬಾರದೆಂದು ಮನೆಗಳ ಲಾಕ್ ಮಾಡಿದ್ದಾರೆ ಎಂದರು. ಗ್ರಾಮದ ರಾಮಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಹನುಮಂತಪುರದಲ್ಲಿರುವ ಹಿಮ್ಮತ್‌ ಸಿಂಗ್ ಫ್ಯಾಕ್ಟರಿಯಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಾರೆ. ಇಲ್ಲಿ ಹೆಚ್ಚಿನ ಪೊಲೀಸ್ ಸೆಕ್ಯೂರಿಟಿ ಅಗತ್ಯವಿದೆ. ಬೀಟ್ ಬಂದು ಹೋದರೇ ಪ್ರಯೋಜನವಿಲ್ಲ. ಪೊಲೀಸ್ ಇಲಾಖೆ ಈ ಬಗ್ಗೆ ಗಮನವಹಿಸಬೇಕು. ನಮ್ಮ ವೃತ್ತಕ್ಕೆ ಒಂದು ಪೊಲೀಸ್ ಠಾಣೆ ಅಗತ್ಯವಿದೆ. ಕೂಡಲೇ ಗಮನಹರಿಸಬೇಕೆಂದು ಮನವಿ ಮಾಡಿದರು.

Share this article