- ಗ್ಯಾಸ್ ಕಟರ್‌ನಿಂದ ಕಿಟಕಿ ಸರಳುಗಳು, ಭದ್ರವಾದ ತಿಜೋರಿ ತುಂಡರಿಸಿ ಹಣ, ಆಭರಣ ಕಳವು
- - - ಕನ್ನಡಪ್ರಭ ವಾರ್ತೆ ದಾವಣಗೆರೆ
ರಾತ್ರೋರಾತ್ರಿ ಬ್ಯಾಂಕ್‌ಗೆ ಕಳ್ಳರು ನುಗ್ಗಿ, ಲಾಕರ್‌ನಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಿದ್ದು, ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ ಸಹ ಹೊತ್ತೊಯ್ದ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.ಪಟ್ಟಣದ ನೆಹರು ರಸ್ತೆಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಶನಿವಾರ, ಭಾನುವಾರ ಎರಡು ದಿನ ಬ್ಯಾಂಕ್‌ಗೆ ರಜೆ ಇತ್ತು. ಈ ಅವಕಾಶವನ್ನೇ ಚಾಣಾಕ್ಷ ಕಳ್ಳರು ಹಣ-ಆಭರಣ ಕದಿಯಲು ಬಳಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿಯೇ ಬ್ಯಾಂಕ್‌ನಲ್ಲಿ ಕಳವು ಮಾಡಿರುವ ಅನುಮಾನವಿದೆ. ಕಳವಾದ ನಗದು, ಚಿನ್ನಾಭರಣಗಳ ಮೌಲ್ಯ ಎಷ್ಟೆಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಸೋಮವಾರ ಬೆಳಗ್ಗೆ ಬ್ಯಾಂಕ್ ಕೆಲಸಕ್ಕೆ ಆಗಮಿಸಿದ ಸಿಬ್ಬಂದಿ, ಬ್ಯಾಂಕಿನಲ್ಲಿ ಸರಳು ಮುರಿದಿರುವುದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಗಮನಿಸಿದ ಕೂಡಲೇ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವ್ಯವಸ್ಥಾಪಕರು, ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಬೆರಳಚ್ಚು ತಜ್ಞರು, ಶ್ವಾನದಳದ ತಂಡಗಳು ಬ್ಯಾಂಕ್‌ಗೆ ಧಾವಿಸಿ, ಪರಿಶೀಲನೆ ನಡೆಸಿದವು. ಸ್ಥಳ ಪರಿಶೀಲನೆಯಲ್ಲಿ ಪಾಲ್ಗೊಂಡ ಪೊಲೀಸ್ ಶ್ವಾನಗಳು ಸುಮಾರು 2 ಕಿಮೀ ದೂರವರೆಗೆ ಹೋಗಿನಿಂತಿವೆ.
ಘಟನೆಯಿಂದಾಗಿ ನ್ಯಾಮತಿ ಪಟ್ಟಣ ನಿವಾಸಿಗಳು, ಠೇವಣಿದಾರರು ಹಾಗೂ ಗ್ರಾಹಕರು ತೀವ್ರ ಭೀತಿಗೊಂಡಿದ್ದಾರೆ. ಮೂಲವೊಂದರ ಪ್ರಕಾರ ಕಳ್ಳರು ಲಾಕರ್ ಒಡೆದು, ಅಲ್ಲಿದ್ದ ಹಣ, ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಮತ್ತೊಂದು ಮಾಹಿತಿ ಪ್ರಕಾರ ಬ್ಯಾಂಕ್ ಲಾಕರ್‌ನಲ್ಲಿ ಗ್ರಾಹಕರು ಇಟ್ಟಿದ್ದ ಚಿನ್ನಾಭರಣವನ್ನಷ್ಟೇ ಕಳ್ಳರು ದೋಚಿದ್ದಾರೆ ಎಂದೂ ಹೇಳಲಾಗಿದೆ.
- - -
ಸಾಮಾನ್ಯವಾಗಿ ನ್ಯಾಮತಿ ಪಟ್ಟಣದಲ್ಲಿ ಕೋಟ್ಯಂತರ ರು.ಗಳಿದ್ದರೆ ಅದನ್ನು ಹೊನ್ನಾಳಿ ಪಟ್ಟಣದ ಎಸ್‌ಬಿಐ ಮುಖ್ಯ ಕಚೇರಿಯ ಭದ್ರತಾ ಕೊಠಡಿಯಲ್ಲಿ ಇಡಲಾಗುತ್ತದೆ ಎನ್ನಲಾಗಿದೆ. ಹಾಗಾಗಿ, ನ್ಯಾಮತಿ ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ ಹೆಚ್ಚು ಹಣ ಇರುವುದಿಲ್ಲ. ನ್ಯಾಮತಿ ಬ್ಯಾಂಕ್ ಶಾಖೆಯಲ್ಲಿ ಕಳ್ಳರು ಹಣಕ್ಕಿಂತಲೂ ಚಿನ್ನಾಭರಣಗಳನ್ನೇ ಕಳವು ಮಾಡಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ.
- - - -28ಕೆಡಿವಿಜಿ3: ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳವು ನಡೆದಿದ್ದು, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಪೊಲೀಸ್ ಶ್ವಾನದಳದಿಂದಲೂ ಪರಿಶೀಲನೆ ನಡೆಯಿತು.-28ಕೆಡಿವಿಜಿ4: ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳವು ನಡೆಸಲು ಕಿಟಕಿ ಸರಳುಗಳನ್ನು ಕತ್ತರಿಸಿರುವುದು. -28ಕೆಡಿವಿಜಿ5, 6: ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳವು ನಡೆದ ಹಿನ್ನೆಲೆ ಜಮಾಯಿಸಿದ್ದ ಗ್ರಾಹಕರು, ಸಾರ್ವಜನಿಕರು.