ಭಾರತೀಯ ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೆ ತಲುಪಿಸಿ

KannadaprabhaNewsNetwork |  
Published : Apr 01, 2025, 12:48 AM IST
10 | Kannada Prabha

ಸಾರಾಂಶ

ಹಿಂದೆಲ್ಲಾ ಹೆಣ್ಣಿಗೆ ಹೆಚ್ಚು ಓದಲು ಅವಕಾಶಗಳಾಗುತ್ತಿರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುರೀಲ್ಸ್, ಜಂಕ್ ಫುಡ್‌ಗಳಿಗೆ ಜೋತು ಬೀಳದೆ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಹೆಣ್ಣು ಮಕ್ಕಳು ಮಾಡಬೇಕಿದೆ ಎಂದು ಮಹಾರಾಣಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಎಸ್. ಸುಧಾ ಕಿವಿಮಾತು ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಮೈಸೂರು ಕನ್ನಡ ವೇದಿಕೆಯು ಸೋಮವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.ಹಿಂದೆಲ್ಲಾ ಹೆಣ್ಣಿಗೆ ಹೆಚ್ಚು ಓದಲು ಅವಕಾಶಗಳಾಗುತ್ತಿರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣು ಮುಂದೆ ಬರುತ್ತಿರುವುದು ಸಂತಸದ ವಿಚಾರ. ಆದರೂ ನಗರದ ಮಹಿಳೆಯರಂತೆ ಗ್ರಾಮೀಣ ಹೆಣ್ಣು ಮಕ್ಕಳಿಗೂ ಈ ಅವಕಾಶಗಳು ಸಿಕ್ಕಿದೆಯಾ ಎಂಬ ಪ್ರಶ್ನೆ ಕಾಡುತ್ತದೆ. ಹೀಗಾಗಿ ತಾಯಿಯಾದವರು ತನ್ನ ಹೆಣ್ಣು- ಗಂಡು ಮಕ್ಕಳಿಗೆ ಸಮಾನವಾಗಿ ಸಂಸ್ಕಾರವನ್ನು ಕಲಿಸಬೇಕಿದೆ ಎಂದರು.ರೀಲ್ಸ್ ಮಾಡಿ ಸಮಯ ಕಳೆಯುತ್ತಾ, ಜಂಕ್ ಫುಡ್‌ ಗಳನ್ನು ಮನೆಗೆ ತರಿಸಿಕೊಳ್ಳುತ್ತಿರುವುದರಿಂದ ಮಕ್ಕಳು ಸ್ಥೂಲಕಾಯಕ್ಕೆ ಒಳಗಾಗುತ್ತಿದ್ದಾರೆ. ಇದು ಎಲ್ಲಾ ಕಾಯಿಲೆಗಳಿಗೂ ಮೂಲವಾಗುತ್ತಿದೆ. ಹೀಗಾಗಿ ಹೆಣ್ಣು ತನ್ನ ಆರೋಗ್ಯ ಕಾಪಾಡಿಕೊಂಡರೆ ತನ್ನ ಇಡೀ ಕುಟುಂಬದವರು ಆರೋಗ್ಯವಂತರಾಗುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಮೊಬೈಲ್ ಮತ್ತು ಡಿಜಿಟಲ್ ಯುಗದಲ್ಲಿ ಹೆಣ್ಣಿಗೆ ತನ್ನ ಖಾಸಗೀತನವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಮಮತೆ, ಕರುಣೆ, ತಾಳ್ಮೆ ಮೊದಲಾದ ಪ್ರಕೃತಿದತ್ತ ಗುಣಗಳನ್ನು ಹೆಣ್ಣು ಮರೆಯುತ್ತಿದ್ದು, ರೀಲ್ಸ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಾ, ಮಕ್ಕಳನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ಹೆಣ್ಣು ಮಕ್ಕಳು ರೀಲ್ಸ್‌ಗಿಂತ ನಿಜ ಜೀವನಕ್ಕೆ ಒತ್ತು ಕೊಡಿ ಎಂದು ಹೇಳಿದರು.ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತೆ ಡಾ.ಎಸ್. ರಮ್ಯಾ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆಗಾಗಿ ಹೋರಾಡುತ್ತಿದ್ದ ಮಹಿಳೆ, ತಂತ್ರಜ್ಞಾನ ಮುಂದುವರಿದಂತೆ ಭವಿಷ್ಯದಲ್ಲಿ ರೋಬೋಟ್‌ ಗಳ ಜತೆಗೆ ಸಮಾನತೆಗಾಗಿ ಹೋರಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೃತಕ ಬುದ್ದಿಮತ್ತೆ, ರೋಬೋಟ್‌ ಗಳು ಎಲ್ಲಾ ಕ್ಷೇತ್ರಗಳಲ್ಲೂ ಬರುತ್ತಿದ್ದರೂ ಮಹಿಳೆ ತೋರುವ ಪ್ರೀತಿ, ವಾತ್ಸಲ್ಯವನ್ನು ಇವು ಕೊಡಲಾರವು. ಹೀಗಾಗಿ ಮಹಿಳೆ ಈ ಗುಣ ಬಿಡಬಾರದು ಎಂದು ಹೇಳಿದರು.ದಂತ ವೈದ್ಯ ಲೋಕೇಶ್, ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಇದ್ದರು. ನಾಲಾಬೀದಿ ರವಿ ಕಾರ್ಯಕ್ರಮ ನಿರೂಪಿಸಿದರು.ಪೌರ ಕಾರ್ಮಿಕ ಮಹಿಳೆ ಆರ್. ಪಾರ್ವತಿ ಸೇರಿದಂತೆ ಹತ್ತು ಮಂದಿ ಮಹಿಳೆಯರಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು